ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಲಗ್ಗೆ, ದರ ಕುಸಿತ

KannadaprabhaNewsNetwork |  
Published : May 31, 2026, 02:45 AM IST
ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದು. | Kannada Prabha

ಸಾರಾಂಶ

ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಮಾವಿನ ಬೆಲೆಯಲ್ಲಿ ಭಾರೀ ಕುಸಿತವಾಗಿದೆ.

ಆಪೂಸ್ ಮಾವು ಕೆಜಿಗೆ ₹೭೦ರಿಂದ ೮೦ ಇದ್ದ ದರ ಈಗ ₹೨೦ಕ್ಕೆ ಇಳಿಕೆಸಂತೋಷ ದೈವಜ್ಞ

ಕನ್ನಡಪ್ರಭ ವಾರ್ತೆ ಮುಂಡಗೋಡ

ಸಾಕಷ್ಟು ಪ್ರಮಾಣದಲ್ಲಿ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ಮಾವಿನ ಬೆಲೆಯಲ್ಲಿ ಭಾರೀ ಕುಸಿತವಾಗಿದೆ.

ಈ ಬಾರಿ ಮಾವಿನ ಫಸಲು ವಿಳಂಬವಾಗಿ ಬಂದಿದ್ದು, ಪ್ರಾರಂಭದಲ್ಲಿ ಆಪೂಸ್, ಪೈರಿ, ಕರಿಇಶಾಡ, ಮಾನಕೂರ, ಸಿಂದೂಲಾ ಮುಂತಾದ ಉತ್ತಮ ತಳಿಯ ಮಾವಿಗೆ ಉತ್ತಮ ಬೆಲೆ ಇತ್ತು. ಆದರೆ ಈಗ ಸುತ್ತಮುತ್ತಲಿನ ಎಲ್ಲ ಕಡೆಯಿಂದ ಮಾವಿನ ಫಸಲು ಮಾರುಕಟ್ಟೆಗೆ ಬರುತ್ತಿರುವುದರಿಂದ ಏಕಾಏಕಿ ಮಾವಿನ ದರದಲ್ಲಿ ಕುಸಿತ ಕಂಡಿದೆ.

ರಪ್ತು ಸ್ಥಗಿತ:

ತೊಟ್ಟು ಸಮೇತ ಉತ್ತಮ ದರ್ಜೆಯ ಮಾವಿನ ಕಾಯಿಯನ್ನು ರಪ್ತು ಮಾಡಲಾಗುತ್ತದೆ. ಪ್ರತಿ ಭಾರಿ ಮಾವಿನ ಸುಗ್ಗಿ ಪ್ರಾರಂಭವಾಗುತ್ತಿದ್ದಂತೆ ಮಾವಿನ ಕಣಜ ಎಂದೇ ಬಿಂಬಿತವಾಗಿರುವ ತಾಲೂಕಿನ ಪಾಳಾ ಹೋಬಳಿ ಭಾಗದ ಮಾವಿನ ಮಂಡಿಗಳ ಮೂಲಕ ನಿತ್ಯ ಲಾರಿಗಳಲ್ಲಿ ವಿವಿಧ ರಾಜ್ಯದ ಪಾನಿಯ ಕಂಪನಿಗಳಿಗೆ ರಪ್ತು ಮಾಡಲಾಗುತ್ತದೆ. ಪ್ರಾರಂಭದಲ್ಲಿ ಆಪೂಸ್ ಮಾವು ಕೆಜಿಗೆ ₹೭೦ರಿಂದ ೮೦ ಇದ್ದ ದರ ಈಗ ₹೨೦ಕ್ಕೆ ಇಳಿದಿದ್ದು, ಮಾವು ಬೆಳೆಗಾರರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇದರಿಂದಾಗಿ ಬಹುತೇಕ ಮಾವು ಬೆಳೆಗಾರರು ಮಾವನ್ನು ಹಣ್ಣುಗೊಳಿಸಿ ರಸ್ತೆ ಪಕ್ಕದಲ್ಲಿಯೇ ಪ್ಯಾಪಾರ ನಡೆಸಿದ್ದಾರೆ. ಪಾಳಾ ಹೊರ ವಲಯದ ಶಿರಸಿ-ಹುಬ್ಬಳ್ಳಿ ಹೆದ್ದಾರಿ ಪಕ್ಕದಲ್ಲಿಯೇ ಹತ್ತಾರು ಕಡೆಗಳಲ್ಲಿ ಮಾವಿನ ಹಣ್ಣಿನ ವ್ಯಾಪಾರ ಮಾಡಲಾಗುತ್ತಿದೆ. ಹಣ್ಣಿನ ಬೆಲೆ ಕುಸಿತ:

ಮಾರುಕಟ್ಟೆಯಲ್ಲೂ ಕೂಡ ಮಾವಿನ ಹಣ್ಣಿಗೆ ಯೋಗ್ಯ ಬೆಲೆ ಲಭಿಸುತ್ತಿಲ್ಲ. ಪ್ರಾರಂಭದಲ್ಲಿ ಉತ್ತಮ ಜಾತಿಯ ಡಜನ್ ಮಾವಿನ ಹಣ್ಣಿಗೆ ₹೨೫೦ರಿಂದ ೩೫೦ ಇದ್ದ ದರ ಈಗ ₹೧೦೦-೧೫೦ ಇಳಿದಿದೆ. ಇನ್ನುಳಿದ ಜವಾರಿ ಹಣ್ಣಿನ ದರ ₹೫೦-೬೦ ಆಗಿದೆ. ಇದರಿಂದ ಲಾಭಾಂಶದ ಕೊರತೆಯಿಂದ ವ್ಯಾಪಾರಸ್ಥರು ಕೂಡ ಕುಗ್ಗಿ ಹೋಗಿದ್ದಾರೆ. ಭತ್ತ ಪ್ರಧಾನ ಪ್ರದೇಶವಾಗಿರುವ ಪಾಳಾ ಭಾಗದಲ್ಲಿ ವಾಣಿಜ್ಯ ಬೆಳೆಯಾಗಿ ಸಾಕಷ್ಟು ಪ್ರಮಾಣದಲ್ಲಿ ರೈತರು ಮಾವಿನ ತೋಪುಗಳನ್ನು ಮಾಡಿಕೊಂಡಿದ್ದಾರೆ. ವರ್ಷದ ೨-೩ ತಿಂಗಳ ಕಾಲ ಹಗಲು ರಾತ್ರಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಮಾವಿನ ಕಾಯಿ ಹರಿದು ಹಣ್ಣು ಮಾಡಿ ಹುಬ್ಬಳ್ಳಿ, ಶಿರಸಿ, ಬೆಂಗಳೂರು, ಮುಂಬೈ ಮುಂತಾದ ಭಾಗಗಳಿಗೆ ಕೊಂಡೊಯ್ದು ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಲಾಗುತ್ತದೆ. ಕೊಂಡೊಯ್ದ ಮಾವನ್ನು ಬಾಯಿಗೆ ಬಂದಂತೆ ಕೇಳುತ್ತಾರೆ. ಇದರಿಂದ ಒಯ್ದ ಹಣ್ಣು ಕೆಟ್ಟು ಹೋಗುವ ಭಯದಿಂದ ದಲ್ಲಾಳಿಗಳು ಕೇಳಿದ ದರಕ್ಕೆ ಕೊಟ್ಟು ಮರಳಬೇಕಾದ ಸ್ಥಿತಿ ನಮ್ಮದಾಗಿದೆ ಎನ್ನುತ್ತಾರೆ ಇಲ್ಲಿಯ ಮಾವು ಬೆಳೆಗಾರರು.

ತೋಟಗಳನ್ನು ಹಿಡಿದುಕೊಂಡು ವ್ಯಾಪಾರ ಮಾಡುವ ದಲ್ಲಾಳಿಗಳ ಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಮಾವು ಬೆಳೆಗಾರರಿಗೆ ಲಕ್ಷಾಂತರ ರೂಪಾಯಿ ನೀಡಿ ಮಾವಿನ ತೋಪುಗಳನ್ನು ಗುತ್ತಿಗೆ ಪಡೆದಿದ್ದಾರೆ. ಅದರಂತೆ ತಾವು ಹೂಡಿದ ಹಣಕ್ಕೆ ಲಾಭದ ನಿರೀಕ್ಷೆಯಿಂದಿರುವವರಿಗೆ ಬೆಲೆ ಕುಸಿತದಿಂದ ಮಾವು ವ್ಯಾಪಾರಸ್ಥ ದಲ್ಲಾಳಿಗಳು ಆತಂಕಕ್ಕೊಳಗಾಗಿದ್ದಾರೆ. ಬೆಂಗಳೂರು ಭಾಗದ ಕೋಲಾರ ಹಾಗೂ ಮಹಾರಾಷ್ಟ್ರದ ರತ್ನಾಗಿರಿ ಮುಂತಾದ ಕಡೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮಾವು ಇಲ್ಲಿಯ ಮಾರುಕಟ್ಟೆಗೆ ಲಗ್ಗೆ ಇಡುತ್ತಿರುವುದೇ ಮಾವಿನ ಹಣ್ಣಿನ ದರದಲ್ಲಿ ಕುಸಿತವಾಗಲು ಕಾರಣ ಎಂದರೂ ಅತಿಶಯೋಕ್ತಿಯಾಗಲಿಕ್ಕಿಲ್ಲ.ನಮಗೆ ಹತ್ತಿರದ ಹುಬ್ಬಳ್ಳಿ ಮಾರುಕಟ್ಟೆ ಕೊಂಡೊಯ್ಯುತ್ತೇವೆ. ಎಲ್ಲ ಭಾಗದಿಂದ ಸಾಕಷ್ಟು ಪ್ರಮಾಣದಲ್ಲಿ ಹಣ್ಣು ಬರುತ್ತಿರುವುದರಿಂದ ನಮ್ಮ ಹಣ್ಣಿಗೆ ಬೇಡಿಕೆ ಕಡಿಮೆಯಾಗಿದೆ. ಕಡಿಮೆ ದರಕ್ಕೆ ನೀಡಿ ಬರುವಂತಾಗಿದೆ. ಇದರಿಂದ ಕೆಲವೊಮ್ಮೆ ವಾಹನದ ಬಾಡಿಗೆ ಕೂಡ ಮೈಮೇಲೆ ಬರುತ್ತದೆ. ಸ್ಥಳೀಯವಾಗಿ ಮಾರುಕಟ್ಟೆ ವ್ಯವಸ್ಥೆ ಮಾಡಿದರೆ ಮಾವು ಬೆಳೆಗಾರರಿಗೆ ತೀವ್ರ ಅನುಕೂಲವಾಗಲಿದೆ ಎನ್ನುತ್ತಾರೆ ಮಾವು ಬೆಳೆಗಾರ ಮಹ್ಮದಗೌಸ ಪಾಟೀಲ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗದಗ ಜಿಲ್ಲೆಯಲ್ಲಿ ಜಾರಿಯಾಗದ ಹೊಸ ಅಬಕಾರಿ ನೀತಿ
ಜೀವರಕ್ಷಕ, ಪ್ರವಾಸಿ ಮಿತ್ರ ಸಿಬ್ಬಂದಿಗೆ ಸನ್ಮಾನ