ಹೊನ್ನಾವರ: ಅಮೃತ್ ನೀರಾವರಿ ಯೋಜನೆಯಿಂದ ಮಂಕಿ ಪಟ್ಟಣದಲ್ಲಿ ನೀರಿನ ಅಭಾವಕ್ಕೆ ಪರಿಹಾರ ದೊರೆತಿದೆ. ವಿರೋಧ ಪಕ್ಷದವರು ಜನರ ದಿಕ್ಕು ತಪ್ಪಿಸಲು ಟೀಕೆ ಮಾಡುತ್ತಾರೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದರು.
ಮಂಕಿ ಪಟ್ಟಣ ಪಂಚಾಯಿತಿಗೆ ಎಲ್ಲರಿಗೂ ನೀರು ದೊರಕಿಸಲು ₹೧೦೬ ಕೋಟಿ ಅಂದಾಜು ವೆಚ್ಚದ ಕಾಮಗಾರಿಗೆ ಅನುದಾನ ತರಲಾಗಿದೆ. ಬಿಜೆಪಿಯವರಿಗೆ ಒಂದು ಇಂದಿರಾ ಕ್ಯಾಂಟೀನ್ ಮಾಡಲೂ ಯೋಗ್ಯತೆಯಿಲ್ಲವಾಗಿತ್ತು. ನಾವು ಮಾಡಿದ್ದೇವೆ. ಏನಾದರೂ ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡಬಾರದು. ಈ ಕಾಮಗಾರಿ ಕೇಂದ್ರ ಸರ್ಕಾರದ ಅನುದಾನದ್ದು ಎಂದು ಹೇಳುತ್ತಾರೆ. ಆದರೆ, ಇದರಲ್ಲಿ ಶೇ ೫೦ ಮಾತ್ರ ಕೇಂದ್ರ ಸರ್ಕಾರದ್ದು. ಶೇ. ೪೦ ರಾಜ್ಯ ಸರ್ಕಾರ ಹಾಗೂ ಶೇ ೧೦ ಸ್ಥಳೀಯ ಸಂಸ್ಥೆಯ ಅನುದಾನದಿಂದ ಬಂದಿದೆ. ನಾವು ಕೇಂದ್ರಕ್ಕೆ ಜಿಎಸ್‌ಟಿ ಕಟ್ಟುತ್ತಿದ್ದೇವೆ. ಅದೇ ದುಡ್ಡನ್ನು ನಮಗೆ ಕೊಟ್ಟಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ನಮ್ಮ ಕಾಂಗ್ರೆಸ್ ಜನಪರವಾದ ಯೋಜನೆಗಳನ್ನು ನೀಡಿ ಬಡವರ ಪರ ನಿಂತಿದೆ. ಮಂಕಾಳ ವೈದ್ಯ ಅವರು ಮಂಕಿಯಲ್ಲಿ ನೀರಿನ ಅಗತ್ಯತೆ ಮನಗಂಡು ಈ ಯೋಜನೆ ತಂದಿದ್ದಾರೆ. ಮಂಕಿಯಲ್ಲಿ ಕಾಂಗ್ರೆಸ್ಕ ಚೇರಿ ನಿರ್ಮಿಸಲು ೨೦ ಗುಂಟೆ ಜಾಗ ಮಂಜೂರಿ ಮಾಡಿದ್ದಾರೆ. ಕಾರ್ಯಕರ್ತರು ಬೆಂಬಲಿಸಬೇಕು ಎಂದರು.ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರವಾರ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶಿವರಾಮ ನಾಯ್ಕ ಪ್ರಾಸ್ತಾವಿಕ ಮಾತನಾಡಿದರು.