ಕಾರಟಗಿ: ವೀರಶೈವ ಲಿಂಗಾಯತ ಸಮಾಜ ಒಡೆಯುವ ಪ್ರಯತ್ನ ನಡೆಯುತ್ತಿದ್ದು, ಇದರಿಂದ ನಾವೆಲ್ಲರೂ ಜಾಗೃತರಾಗೋಣ. ಜತೆಗೆ ಒಗ್ಗಟ್ಟಿನಿಂದ ಸಮಾಜವನ್ನು ಮತ್ತಷ್ಟು ಬಲಿಷ್ಠಗೊಳಿಸೋಣ ಎಂದು ವಿಶೇಷ ಎಪಿಎಂಸಿ ಮಾಜಿ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಶಶಿಧರಗೌಡ ಪಾಟೀಲ್ ಕರೆ ನೀಡಿದರು.
ಸಮಾಜದ ಯುವಕರೆಲ್ಲ ಸೇರಿ ರುದ್ರಭೂಮಿಗಾಗಿ ಹೊಸದಾಗಿ ಎರಡು ಎಕರೆ ೨೩ ಗುಂಟೆ ಭೂಮಿ ಖರೀದಿಸಿದ್ದಾರೆ. ಅದಕ್ಕಾಗಿ ಸುಮಾರು ₹2 ಕೋಟಿ ವೆಚ್ಚ ತಗುಲಲಿದೆ. ಪಟ್ಟಣದ ವೀರಶೈವ ಸಮಾಜದ ಪ್ರತಿಯೊಂದು ಮನೆಯಿಂದ ದೇಣಿಗೆ ಸಂಗ್ರಹಿಸಲಾಗಿದೆ. ಇನ್ನೂ ಈ ಮುಂಚಿನಿಂದ ಇರುವ ನಾಲ್ಕು ಎಕರೆ ಸ್ಮಶಾನ ಭೂಮಿಯ ಹೋರಾಟ ಇನ್ನು ನಿಂತಿಲ್ಲ ಎಂದು ಹೇಳಿದರು.
ಬಸವರಾಜ ಪಗಡದಿನ್ನಿ ಮಾತನಾಡಿ, ವೀರಶೈವ ಲಿಂಗಾಯತ ಟ್ರಸ್ಟ್ ಬದಲಾಗಿ ಸಂಘ ಎಂದು ನೋಂದಾಯಿಸಿ. ಟ್ರಸ್ಟ್‌ಗೆ ಕೇವಲ ೨೫ ಜನರ ಹೆಸರು ಸೇರಿಸಬೇಕಾಗುತ್ತದೆ. ಆದರೆ ಕಾರಟಗಿಯಲ್ಲಿ ಬಹುಸಂಖ್ಯಾತ ವೀರಶೈವರು ಇರುವಾಗಿ ಸಮಾಜಕ್ಕೆ ದೇಣಿಗೆ ನೀಡಿದ ಪ್ರತಿಯೊಂದು ಮನೆಯಲ್ಲಿ ಒಬ್ಬರನ್ನು ಸಹ ಸಂಘಕ್ಕೆ ಸೇರಿಸಿಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.ಉದ್ಯಮಿ ಜಗದೀಶಪ್ಪ ಅವರಾಧಿ ಮಾತನಾಡಿ, ಸಂಘ ಅಥವಾ ಟ್ರಸ್ಟ್ ರಚನೆ ಕುರಿತು ತಜ್ಞರ, ಕಾನೂನು ತಜ್ಞರ ಅಭಿಪ್ರಾಯ ಪಡೆದು ಮತ್ತು ಸಮಾಜದ ಒಕ್ಕೂರಲಿನ ತೀರ್ಮಾನ ಕೈಗೊಂಡು ಮುಂದೆ ಹೆಜ್ಜೆ ಇಡಲಾಗುವುದು. ಸದ್ಯ ಕಾರಟಗಿಯಲ್ಲಿ ಪ್ರಭಾವಿ ಸಮಾಜದ ಪ್ರಮುಖ ಸ್ಮಶಾನಕ್ಕಾಗಿ ಖರೀದಿಸಿದ ಭೂಮಿ ನೋಂದಣಿ ಕಾರ್ಯ ಪೂರ್ಣಗೊಳಿಸಲಾಗುವುದು ಎಂದರು.
ಸಂಘ ರಚನೆ: ಸಭೆಯಲ್ಲಿ ಹೊಸದಾಗಿ ವೀರಶೈವ ಲಿಂಗಾಯತ ಸಮಾಜ ರಚಿಸಲಾಯಿತು. ಗೌರವಾಧ್ಯಕ್ಷರಾಗಿ ಸಿದ್ರಾಮಯ್ಯಸ್ವಾಮಿ ಹಿರೇಮಠ, ಅಧ್ಯಕ್ಷರಾಗಿ ಶಶಿಧರಗೌಡ ಪಾಟೀಲ್, ಉಪಾಧ್ಯಕ್ಷರಾಗಿ ಉದ್ಯಮಿಗಳಾದ ಕೆ. ನಾಗಪ್ಪ ಎಲ್‌ವಿಟಿ ಮತ್ತು ಸಣ್ಣ ವೀರೇಶಪ್ಪ ಚಿನಿವಾಲ, ಪ್ರಧಾನ ಕಾರ್ಯದರ್ಶಿಯಾಗಿ ಜಗದೀಶಪ್ಪ ಅವರಾಧಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.ಸನ್ಮಾನ: ಲಕ್ಷ್ಮೀವೆಂಕಟೇಶ್ವರ ಪತ್ತಿನ ಸಹಕಾರಿ ಅಧ್ಯಕ್ಷರಾಗಿ ಆಯ್ಕೆಯಾದ ಉದ್ಯಮಿ ವೆಂಕಾರೆಡ್ಡೆಪ್ಪ ಚೆನ್ನಳ್ಳ, ರುದ್ರಯ್ಯ ಗಣಚಾರಿ ಮತ್ತು ಪತ್ರಕರ್ತ ವೀರೇಂದ್ರ ಪಾಟೀಲ್ ಅವರನ್ನು ಸನ್ಮಾನಿಸಲಾಯಿತು.
ಪ್ರಾರಂಭದಲ್ಲಿ ಇತ್ತೀಚಿಗೆ ನಿಧನರಾದ ಅಖಿಲ ಭಾರತ ವೀರೇಶೈವ ಸಮಾಜದ ಅಧ್ಯಕ್ಷ ಶಾಮನೂರು ಶಿವಶಂಕ್ರಪ್ಪನವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಜಿ. ಯಂಕನಗೌಡ ಅಧ್ಯಕ್ಷತೆ ವಹಿಸಿದ್ದರು. ಗುಂಡಪ್ಪ ಕುಳಗಿ, ಗುಂಡಪ್ಪ ಅರಳಿ, ಗಂಗಾಧರ ಸ್ವಾಮಿ ನವಲಿಹಿರೇಮಠ, ಸುಮಾ ಹಿರೇಮಠ, ಸಣ್ಣವೀರೇಶಪ್ಪ ಚಿನಿವಾಲ, ಕೆ. ನಾಗಪ್ಪ, ವೆಂಕಾರೆಡ್ಡೆಪ್ಪ ಚೆನ್ನಳ್ಳಿ, ಕೆ. ಸಿದ್ದನಗೌಡ, ಕುಳಗಿ ಅಮರೇಶ, ನಾಗರಾಜ ಅರಳಿ, ರುದ್ರಗೌಡ ನಂದಿಹಳ್ಳಿ, ಬಿ. ಶರಣಯ್ಯಸ್ವಾಮಿ, ಎಚ್. ಈಶಪ್ಪ ಇದ್ದರು. ಶರಣಬಸವ ಕಟಾಂಬ್ಲಿ ಕಾರ್ಯಕ್ರಮ ನಿರ್ವಹಿಸಿದರು.