ಹಾವೇರಿ: ಕೆಲವರಿಂದ ಹಿಂದುತ್ವಕ್ಕೆ ಕಂಟಕ ತರಬೇಕು, ಧಾರ್ಮಿಕ ಸಂಸ್ಥೆಗಳ ಮೇಲೆ, ಹಿಂದುತ್ವದ ಸಂಘ ಸಂಸ್ಥೆಗಳಿಗೆ, ದೇಗುಲಗಳಿಗೆ ಕೆಟ್ಟದ್ದು ಮಾಡಬೇಕೆಂದು ಪಿತೂರಿ ನಡೆಯುತ್ತಿದ್ದು, ಹಿಂದುಗಳ ಪುಣ್ಯಕ್ಷೇತ್ರಗಳ ಬಗ್ಗೆ ಅಪನಂಬಿಕೆ ಮೂಡಿಸುವ ಹುನ್ನಾರ ನಡೆದಿದೆ. ಈ ಬಗ್ಗೆ ಹಿಂದೂಗಳು ಜಾಗೃತಿ ವಹಿಸಬೇಕು ಎಂದು ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದರು.
ಭಾರತದ ಯಾವೊಬ್ಬ ಹಿಂದೂ ಗುರು ಮತಾಂತರ, ಧರ್ಮಾಂತರ ಮಾಡಲ್ಲ. ಧರ್ಮದ ತತ್ವ, ಸಿದ್ಧಾಂತಗಳನ್ನು ಬಿತ್ತುತ್ತಿದ್ದೇವೆ. ಧರ್ಮಸ್ಥಳ, ಶಬರಿಮಲೆ ಇನ್ನೂ ಅನೇಕ ಕಡೆ ಅಧ್ಯಾತ್ಮ ಗುರುಗಳು ಕೈಗೊಂಡ ಒಳ್ಳೆಯ ಕಾರ್ಯಗಳನ್ನು ಬಿಟ್ಟು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಅಪಖ್ಯಾತಿ ತರುವುದು, ನಕಾರಾತ್ಮಕವಾಗಿ ಬಿಂಬಿಸುವ ಕೆಲಸ ನಡೆದಿದೆ. ನಾವೆಲ್ಲ ಹಿಂದೂಗಳು ಡಾ. ವೀರೇಂದ್ರ ಹೆಗ್ಗಡೆ ಅವರ ಜತೆ ಇರಬೇಕು ಎಂದರು.
ನಾವೆಲ್ಲರೂ ಒಂದಾಗಬೇಕಿದೆ. ಇವತ್ತು ಹೆಗ್ಗಡೆ ಅವರಿಗೆ ಬಂದಿರಬಹುದು, ನಾಳೆ ನಮಗೂ ಆಗಬಹುದು. ನಮಗೂ ಹೆಗ್ಗಡೆ ಅವರಿಗೂ ಏನು ಸಂಬಂಧ ಎಂದು ಕುಳಿತರೆ ನಾಳೆ ನಮಗೂ ಬರಬಹುದು. ತಪ್ಪಾಗಿದ್ದರೆ ಕಾನೂನಿದೆ, ಕೋರ್ಟ್ ಇದೆ, ನಮಗೆ ನ್ಯಾಯಾಲಯ ದೊಡ್ಡದು. ಅದನ್ನು ತೀರ್ಮಾನ ಮಾಡಲು ನಾವ್ಯಾರು ಎಂದರು.ಜೈನರು ಯಾವತ್ತೂ ನಾವು ಹಿಂದೂಗಳಲ್ಲ ಎಂದು ಹೇಳಿಲ್ಲ. ಅವರು ಯಾವತ್ತಾದರೂ ಹಿಂದೂ ಪರಂಪರೆ ಟೀಕೆ ಮಾಡಿದ್ದಾರಾ? ಹಾಲಿನಲ್ಲಿ ಕಲ್ಲುಸಕ್ಕರೆ ಬೆರೆಯುವಂತೆ ಜೈನರು ನಮ್ಮ ಜತೆ ಇದ್ದಾರೆ. ಜೈನರು ನಮ್ಮ ಭಾಗವಾಗಿದ್ದಾರೆ. ಡಾ. ವೀರೇಂದ್ರ ಹೆಗ್ಗಡೆ ಅವರು ಗ್ರಾಮೀಣಾಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಅವರ ಒಳ್ಳೆಯ ಕೆಲಸಗಳು ಏಕೆ ಕಾಣುತ್ತಿಲ್ಲ? ಅವರ ಒಳ್ಳೆಯ ಕೆಲಸ ನಾವು ಪ್ರೋತ್ಸಾಹ ಮಾಡಬೇಕು ಎಂದರು.
ಈ ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ವರದಾ-ಬೇಡ್ತಿ ನದಿ ಜೋಡಣೆ ಕಾರ್ಯ ನಡೆಯಬೇಕು. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಪಡೆದುಕೊಳ್ಳುವ ನಿಟ್ಟಿನಲ್ಲಿ ಕಾನೂನಾತ್ಮಕ ಹೋರಾಟ ಮಾಡುತ್ತಿದ್ದೇವೆ. ಎಲ್ಲ ಲಿಂಗಾಯತ ಒಳಪಂಗಡಗಳನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ಸೋಮನಗೌಡ ಪಾಟೀಲ, ಧರ್ಮದರ್ಶಿಗಳಾದ ಪಿ.ಡಿ. ಶಿರೂರ, ಮಹೇಶ ಹಾವೇರಿ, ಮಲ್ಲಿಕಾರ್ಜುನ ಹಾವೇರಿ, ಸಿದ್ದಲಿಂಗೇಶ ಕಮಡೊಳ್ಳಿ, ನಾಗರಾಜ ಕ್ಯಾಬಳ್ಳಿ, ಜಗದೀಶ ಕನವಳ್ಳಿ, ಬಸವರಾಜ ಬಿಜಾಪುರ ಇತರರು ಇದ್ದರು.