ಬಳ್ಳಾರಿಯಲ್ಲಿ ಬಿಜೆಪಿಗೆ ನಿರಾಯಾಸ ಗೆಲುವು: ಮಾಜಿ ಸಚಿವ ಶ್ರೀರಾಮುಲು

KannadaprabhaNewsNetwork |  
Published : Apr 25, 2024, 01:09 AM ISTUpdated : Apr 25, 2024, 01:22 PM IST
ಕೊಟ್ಟೂರಿನಲ್ಲಿ ಬಳ್ಳಾರಿ ಲೋಕಸಭ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಶಾಸಕ ಕೆ.ನೇಮಿರಾಜ್ ನಾಯ್ಕ ಮತ್ತಿತರರೊಂದಿಗೆ ಆಗಮಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಜಿಲ್ಲೆಯ ಜನತೆ ಬಿಜೆಪಿ ಮತ್ತು ಶ್ರೀರಾಮುಲು ಬಗೆಗಿನ ಅತಿಯಾದ ವಿಶ್ವಾಸ ಮತ್ತು ಪ್ರೇಮವನ್ನು ಹೊಂದಿದ್ದಾರೆ.

ಕೊಟ್ಟೂರು; ಅವಿಭಜಿತ ಬಳ್ಳಾರಿ ಜಿಲ್ಲೆ ಅಭಿವೃದ್ಧಿ ಯಾರ ಅವಧಿಯಲ್ಲಿ ಆಗಿದೆ ಎಂಬುದರ ಸಂಪೂರ್ಣ ಮಾಹಿತಿ ಜನತೆಗಿದ್ದು, ಕಾಂಗ್ರೆಸ್ಸಿಗರು ಈ ಕುರಿತು ಬಿಜೆಪಿ ಮೇಲೆ ಆರೋಪ ಮಾಡಿರುವುದರಲ್ಲಿ ಹುರುಳಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಖಂಡಿತವಾಗಿ ನಿರಾಯಾಸವಾಗಿ ಗೆಲುವು ಸಾಧಿಸುವ ವಿಶ್ವಾಸ ಹೊಂದಿರುವೆ ಎಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ, ಮಾಜಿ ಸಚಿವ ಬಿ. ಶ್ರೀರಾಮುಲು ಹೇಳಿದರು.

ಬುಧವಾರ ಮಧ್ಯಾಹ್ನ ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್‌ ತೋಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಜಿಲ್ಲೆಯ ಜನತೆ ಬಿಜೆಪಿ ಮತ್ತು ಶ್ರೀರಾಮುಲು ಬಗೆಗಿನ ಅತಿಯಾದ ವಿಶ್ವಾಸ ಮತ್ತು ಪ್ರೇಮವನ್ನು ಹೊಂದಿದ್ದಾರೆ. ಇದನ್ನು ಮರೆಮಾಚಲೆಂದೇ ಕಾಂಗ್ರೆಸ್ಸಿಗರು ಅನಗತ್ಯ ವಿಷಯಗಳನ್ನು ವಿಷಯಾಂತರಿಸಿ ಬಿಜೆಪಿಯವರ ಮೇಲೆ ಆರೋಪ ಮಾಡುತ್ತಿದ್ದಾರೆ. ಅವರ ಎಲ್ಲ ಆರೋಪಗಳಿಗೆ ಕ್ಷೇತ್ರದ ಜನತೆ ಬಿಜೆಪಿಗೆ ಗೆಲುವು ತಂದುಕೊಡುವ ಮೂಲಕ ಉತ್ತರ ನೀಡುತ್ತಾರೆ ಎಂದು ಹೇಳಿದರು.

ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲು ಬಿಜೆಪಿ ಸಂಸದರು ಈ ಹಿಂದೆ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಗಳು ಇವಕ್ಕೆ ಸಾಕ್ಷಿ. ಅದಲ್ಲದೆ ಉಡಾನ್‌ ಯೋಜನೆಯೂ ಜಿಲ್ಲೆಯಲ್ಲಿ ಜಾರಿಯಾಗಲು ಸಿದ್ಧಗೊಂಡಿದೆ. ಹೊಸಪೇಟೆ, ಕೊಟ್ಟೂರು, ಚಿತ್ರದುರ್ಗ ರೈಲು ಮಾರ್ಗ ರಚಿಸುವ ಸಂಬಂಧ ಸರ್ವೆ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ರೈಲು ಸಂಚಾರ ಕೈಗೊಳ್ಳುವಂತಾಗಿರುವುದು ಬಿಜೆಪಿ ಸಂಸದರು ಮಾಡಿರುವ ಕಾರ್ಯವನ್ನು ತೋರಿಸುತ್ತದೆ ಎಂದು ಹೇಳಿದರು.

ಏ.29ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಮತ್ತು ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲು ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನ ಹೊಸಪೇಟೆಗೆ ಆಗಮಿಸಲಿದ್ದು, ಲಕ್ಷಕ್ಕೂ ಹೆಚ್ಚು ಜನರು ಸೇರಲಿರುವ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಬಳ್ಳಾರಿ, ವಿಜಯನಗರ, ಕೊಪ್ಪಳ, ಮತ್ತಿತರ ಜಿಲ್ಲೆ ಮತ್ತು ಕ್ಷೇತ್ರದ ಜನತೆ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ. ಮೋದಿಯವರ ಆಗಮನ ಬಿಜೆಪಿಗೆ ಮತ್ತಷ್ಟು ಹೆಚ್ಚಿನ ಮತ ಬರಲು ಖಂಡಿತ ಕಾರಣವಾಗಲಿದೆ ಎಂದು ಹೇಳಿದರು.

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಕೆ.ನೇಮಿರಾಜ್‌ ನಾಯ್ಕ, ಜಿಪಂ ಮಾಜಿ ಸದಸ್ಯ ಎಂ.ಎಂ.ಜೆ. ಹರ್ಷವರ್ಧನ್‌, ವಿಜಯನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಪಿ. ಚನ್ನಬಸವನಗೌಡ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ