ಹುಬ್ಬಳ್ಳಿ:
ಇಲ್ಲಿನ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಸೋಮವಾರ ವಿದ್ಯುತ್ ಚಾಲಿತ ವಾಹನ ಉರುಳಿ ಬಿದ್ದ ಪರಿಣಾಮ ಇಬ್ಬರು ಪ್ರಯಾಣಿಕರು ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ. ಗಾಯಾಳುಗಳಿಗೆ ರೈಲ್ವೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.ಈ ಘಟನೆಯಲ್ಲಿ ನಿವೃತ್ತ ರೈಲ್ವೆ ನೌಕರ ಗೂಳಪ್ಪ ರಾಮಪ್ಪ ಅವರ ಕಾಲು ಮುರಿದರೆ, ಇನ್ನೊಬ್ಬರು ಗೋಪಾಲ ದೇಶಪಾಂಡೆ ಎಂಬುವರ ಕಿವಿ ಹರಿದಿದ್ದು, ಹೊಲಿಗೆ ಹಾಕಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ. ಒಂದನೇ ಪ್ಲಾಟ್‌ಫಾರ್ಮ್‌ನಿಂದ ಪ್ರಯಾಣಿಕರನ್ನು ಇನ್ನೊಂದು ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯಲು ನಿಲ್ದಾಣದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದೇ ರೀತಿ ಸೋಮವಾರದಂದು ವಿದ್ಯುತ್ ಚಾಲಿತ ಚಾಲಕನು ಪ್ರಯಾಣಿಕರನ್ನು ಒಂದನೇ ಪ್ಲಾಟ್‌ಫಾರ್ಮ್‌ನಿಂದ 6ನೇ ಪ್ಲಾಟ್‌ಫಾರ್ಮ್‌ಗೆ ಕರೆದೊಯ್ಯುತ್ತಿದ್ದ ವೇಳೆ ವಾಹನವು ಹಠಾತ್ ಆಗಿ ರೈಲ್ವೆ ಹಳಿಗೆ ಉರುಳಿ ಬಿದ್ದಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಗೋಪಾಲ ದೇಶಪಾಂಡೆ ಅವರು ಗಂಗಾವತಿ ಕಡೆಗೆ ತೆರಳಲು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದರು. ರಾಮಪ್ಪ ಕೂಡ ಕೊಪ್ಪಳಕ್ಕೆ ತೆರಳುತ್ತಿದ್ದರು.ಮೂವರು ಅಮಾನತು, ವಾಹನ ವಶಕ್ಕೆ:
ಅಪಘಾತಕ್ಕೀಡಾದ ವಿದ್ಯುತ್ ಚಾಲಿತ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದು, ಚಾಲಕನ ವಿರುದ್ಧ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ವಿಭಾಗೀಯ ವಾಣಿಜ್ಯ ರೈಲ್ವೆ ಹಿರಿಯ ವ್ಯವಸ್ಥಾಪಕ ಸಂತೋಷ ಹೆಗಡೆ ತಿಳಿಸಿದ್ದಾರೆ. ಇದನ್ನು ಗಂಭೀರ ಪ್ರಕರಣ ಎಂದು ಪರಿಗಣಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಕರ್ತವ್ಯ ನಿರ್ಲಕ್ಷ್ಯ ತೋರಿದ್ದು ಮೇಲ್ನೊಟಕ್ಕೆ ಕಂಡುಬಂದಿದ್ದು, ಮುಖ್ಯ ಟಿಕೆಟ್ ಪರಿವೀಕ್ಷಕ ನಜೀರ ಮಕಾಂದರ, ರೈಲ್ವೆ ನಿಲ್ದಾಣದ ಉಪವ್ಯವಸ್ಥಾಪಕ ಕೆ.ಎಲ್. ಇಸ್ರೇಲ್ ಹಾಗೂ ಗೇಟ್‌ನಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಪೇದೆಯೊಬ್ಬರನ್ನು ಅಮಾನತು ಮಾಡಲಾಗಿದೆ.ಇಲಾಖೆ ಅನುಮೋದನೆ ಇಲ್ಲದೇ ಒಳಗೆ ಬಿಡಲು ಅವಕಾಶ ಇಲ್ಲದಿದ್ದರೂ ಹೋಗಿದ್ದು ಹೇಗೆ, ಯಾರು ಅವಕಾಶ ಕೊಟ್ಟರು ಎಂಬಿತ್ಯಾದಿ ಪ್ರಶ್ನೆಗಳಿಗೆ ಯಾರಲ್ಲೂ ಉತ್ತರ ಇರಲಿಲ್ಲ. ಹಾಗಾಗಿ ನಿರ್ಲಕ್ಷ್ಯ ಎದ್ದು ಕಂಡು ಬಂದಿದ್ದು, ಕ್ರಮಕೈಗೊಳ್ಳಲಾಗಿದೆ ಎಂದು ವ್ಯವಸ್ಥಾಪಕ ಹೆಗಡೆ ತಿಳಿಸಿದರು.
ಗಾಯಾಳುಗಳಿಗೆ ತಕ್ಷಣ ₹5 ಸಾವಿರ ಪರಿಹಾರ ನೀಡಲಾಗಿದ್ದು, ಚಿಕಿತ್ಸೆ ವೆಚ್ಚವನ್ನು ಭರಿಸಲಾಗುತ್ತದೆ. ವೈದ್ಯರ ಸಲಹೆ ಮೇರೆಗೆ ಗಾಯಾಳು ಪ್ರಯಾಣಿಕರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡಿ ಕಳಿಸಿಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.ಈಗಷ್ಟೇ ಟೆಂಡರ್:
ಪ್ರಯಾಣಿಕರ ಹಿತದೃಷ್ಟಿಯಿಂದ ಹೆಚ್ಚುವರಿ ವಾಹನಗಳನ್ನು ಒದಗಿಸಲು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆದರೆ, ವಾಹನ ಓಡಿಸಲು ಬೇಕಾದ ಕಾರ್ಯಾದೇಶ ಸೇರಿದಂತೆ ಪ್ರಾಥಮಿಕ ಪ್ರಕ್ರಿಯೆ ಇನ್ನೂ ಮುಗಿದಿಲ್ಲ. ಅನುಮೋದನೆ ಬಳಿಕ ಓಡಾಡಲು ಅವಕಾಶ ನೀಡಲಾಗುತ್ತದೆ. ಇದೆಲ್ಲವೂ ಇಲ್ಲದೇ ಏಕಾಏಕಿ ವಾಹನ ಓಡಿಸಲು ಅವಕಾಶ ನೀಡಿದ್ದು ಮೇಲ್ನೋಟಕ್ಕೆ ಲೋಪ ಎದ್ದು ಕಾಣುತ್ತಿದೆ ಎಂದರು.