ಚನ್ನಪಟ್ಟಣ: ಕುಮಾರಸ್ವಾಮಿ ಕಳೆದ ಎರಡು ಚುನಾವಣೆಯಲ್ಲಿ ಪ್ರಯೋಗಿಸಿದ ಭಾವನಾತ್ಮಕ ಅಸ್ತ್ರವನ್ನು ಈ ಬಾರಿಯು ಪ್ರಯೋಗಿಸುತ್ತಿದ್ದಾರೆ. ಆದರೆ, ಈ ಬಾರಿ ಕ್ಷೇತ್ರದ ಜನ ನನ್ನ ಕೈಹಿಡಿಯಲು ನಿರ್ಧರಿಸಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಯೋಗೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷಾಂತರ ಸ್ವಾರ್ಥಕ್ಕಲ್ಲ:
ನನ್ನ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ಮಾಡುತ್ತಿರುವ ವಿರೋಧ ಪಕ್ಷದವರು ಸುಳ್ಳು ಆರೋಪಗಳ ಮೂಲಕ ನನ್ನ ತೇಜೋವಧೆ ಮಾಡುತ್ತಿದ್ದಾರೆ. ಪಕ್ಷಾಂತರಿ ಎಂದು ಟೀಕಿಸುತ್ತಿದ್ದಾರೆ, ನಾನು ಪಕ್ಷಾಂತರ ಮಾಡದಿದ್ದರೆ ಇಂದು ನೀವೆಲ್ಲಾ ಮತ ಕೇಳಲು ಬರುವ ನನಗೆ ಖಾಲಿ ಕೊಡಗಳನ್ನು ತೋರಿಸುತ್ತಿದ್ದಿರಿ ಎಂದರು.ಬರದಿಂದ ಕಂಗೆಟ್ಟಿದ್ದ ತಾಲೂಕಿನಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಿತ್ತು. ಕೃಷಿ ಕೆಲಸಗಳಿಗೆ ನೀರಿಲ್ಲದೆ ಜಮೀನು ಒಣಗಿದ್ದವು. ಇದೆಲ್ಲವನ್ನು ಕಂಡು ತಾಲೂಕಿನ ಹಸಿರುಗೊಳಿಸುವ ಉದ್ದೇಶದಿಂದ ನಾನು ಪಕ್ಷಾಂತರ ಮಾಡಿದೆನೆ ಹೊರತು ಸ್ವಾರ್ಥ, ಅಧಿಕಾರದ ದಾಹದಿಂದಲ್ಲ ಎಂದರು.
ಗ್ರಾಮೀಣ ಭಾಗದಲ್ಲಿ ಕೆರೆ ಕಟ್ಟೆಗಳು ಖಾಲಿಯಾಗಿದ್ದು, ರಸ್ತೆಗಳು ಸರಿಯಿಲ್ಲ. ಇನ್ನೂ ನಗರದಲ್ಲಿ ಯುಜಿಡಿ ಸಮಸ್ಯೆ, ಕಸದ ಸಮಸ್ಯೆ ಕಗ್ಗಂಟಾಗಿದೆ. ಇದೆಲ್ಲವನ್ನು ಸರಿಪಡಿಸಬೇಕಾಗಿದ್ದವರು ಕ್ಷೇತ್ರದ ಶಾಸಕರಾಗಿದ್ದ ಕುಮಾರಸ್ವಾಮಿಯವರೇ ಹೊರತು ನಾನಲ್ಲ. ಆದರೆ, ಅಭಿವೃದ್ಧಿ ವಿಚಾರದಲ್ಲಿ ಅವರು ವಿಫಲರಾಗಿದ್ದಾರೆ. ನನ್ನನ್ನು ಸೋಲಿಸಲೇಬೇಕೆಂಬ ಏಕೈಕ ಉದ್ದೇಶದೊಂದಿಗೆ ಕುಮಾರಸ್ವಾಮಿ ಎರಡು ಚುನಾವಣೆಯಲ್ಲಿ ನನ್ನ ವಿರುದ್ದ ಸ್ಪರ್ಧಿಸಿದರು. ಈಗ ತಮ್ಮ ರಾಜಕೀಯ ಪುನರ್ಜನ್ಮಕ್ಕೆ ಮಂಡ್ಯಕ್ಕೆ ಹೋಗಿದ್ದದಾರೆ. ಅವರ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿ ಎಷ್ಟಾಗಿದೆ ಹೇಳಲಿ, ನಾನು ತಂದಂತಹ ಹಲವಾರು ಕೆಲಸಕಾರ್ಯಗಳನ್ನು ತಮ್ಮದೆಂದು ಹೇಳಿಕೊಂಡವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದರು.
ಇದೇ ವೇಳೆ ಹನುಮಂತನಗರದ ಬಳಿ ಇರುವ ಅಪೇರಲ್ ಗಾರ್ಮೇಂಟ್ಸ್‌ಗೆ ಭೇಟಿ ನೀಡಿದ ಯೋಗೇಶ್ವರ್ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ,ರೇವಣ್ಣ, ಚಿಕ್ಕಬಳ್ಳಾಪುರ ಶಾಸಕ ಪ್ರದೀಪ ಈಶ್ವರ್, ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ಇತರರಿದ್ದರು.