ರಾಣಿಬೆನ್ನೂರು: ಭಾರತದ ಬಾಹ್ಯಾಕಾಶ ಕ್ಷೇತ್ರದಲ್ಲಿ ಇತ್ತೀಚಿಗೆ ಜರುಗಿದ ಐತಿಹಾಸಿಕ ಸಾಧನೆಯಲ್ಲಿ ರಾಣಿಬೆನ್ನೂರಿನ ಎಂಜಿನಿಯರ್ ಸಂಜಯ ಲಿಂಗರಾಜ ಜಂಬಗಿ ಒಬ್ಬರಾಗಿದ್ದು, ವಿಕ್ರಮ್-1 ರಾಕೆಟ್ ಉಡಾವಣೆಯ ತಾಂತ್ರಿಕ ತಂಡದಲ್ಲಿ ಪ್ರಮುಖ ಜವಾಬ್ದಾರಿ ನಿರ್ವಹಿಸಿರುವುದು ಜಿಲ್ಲೆಗೆ ಹಾಗೂ ತಾಲೂಕಿಗೆ ಹೆಮ್ಮೆಯ ಸಂಗತಿಯಾಗಿದೆ.
ದೇಶ-ವಿದೇಶಗಳ ಪ್ರತಿಭಾವಂತ ಎಂಜಿನಿಯರ್‌ಗಳನ್ನೊಳಗೊಂಡ ತಂಡದಲ್ಲಿ ಸಂಜಯ ಲಿಂಗರಾಜ ಜಂಬಗಿ ವಾಹನ ಎಂಜಿನಿಯರಿಂಗ್ ಲೀಡ್ (vehicle engineering lead) ಆಗಿ ಕಾರ್ಯನಿರ್ವಹಿಸಿ, ಈ ಮಹತ್ವದ ಯೋಜನೆಯ ಯಶಸ್ಸಿನಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಜು.18ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಮಿಷನ್ ಆಗಮನ’ದ ಭಾಗವಾಗಿ ವಿಕ್ರಮ್-1 ಉಡಾವಣೆಯಾಯಿತು. ಉಡಾವಣೆಯ ಬಳಿಕ ರಾಕೆಟ್ ಯಶಸ್ವಿಯಾಗಿ ಕಕ್ಷೆ ತಲುಪಿದ್ದು, ಭಾರತದ ಖಾಸಗಿ ಬಾಹ್ಯಾಕಾಶ ಉದ್ಯಮಕ್ಕೆ ಹೊಸ ದಿಕ್ಕು ತೆರೆದಿದೆ.ರಾಣಿಬೆನ್ನೂರಿನ ಪ್ರತಿಭೆ ನಭಕ್ಕೆ: ರಾಣಿಬೆನ್ನೂರಿನ ಸಂಜಯ ಜಂಬಗಿ ಅವರು ನಗರದ ರೋಟರಿ ಕ್ಲಬ್‌ನ ಟ್ಯಾಗೋರ್ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ಶಿಕ್ಷಣವನ್ನು ಪೂರ್ಣಗೊಳಿಸಿ, ನಂತರ ತರಳಬಾಳು ತಾಂತ್ರಿಕ ವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿಇ ಪದವಿ ಪಡೆದರು. ಬಳಿಕ ಬೆಂಗಳೂರಿನ ಎಂವಿಜೆ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಪದವಿ ಪಡೆದು, ಬಾಹ್ಯಾಕಾಶ ಮತ್ತು ರಾಕೆಟ್ ತಂತ್ರಜ್ಞಾನ ಕ್ಷೇತ್ರದತ್ತ ತಮ್ಮ ವೃತ್ತಿ ಜೀವನವನ್ನು ರೂಪಿಸಿಕೊಂಡಿದ್ದಾರೆ.
ತಂಡದ ಸಹಿಯಲ್ಲೂ ವಿಶೇಷ ನೆನಪು:ವಿಕ್ರಮ್-1 ರಾಕೆಟ್ ಉಡಾವಣೆಯ ಯಶಸ್ಸಿನ ಸಂಭ್ರಮದ ನಡುವೆ, ಯೋಜನೆಯಲ್ಲಿ ಕಾರ್ಯನಿರ್ವಹಿಸಿದ ಎಂಜಿನಿಯರ್‌ಗಳು ಹಾಗೂ ತಾಂತ್ರಿಕ ತಂಡದ ಸದಸ್ಯರು ರಾಕೆಟ್ ಮೇಲೆ ತಮ್ಮ ಸಹಿ ಹಾಕಿರುವುದು ವಿಶೇಷ ಗಮನ ಸೆಳೆದಿದೆ. ಈ ಐತಿಹಾಸಿಕ ಕ್ಷಣದ ಭಾಗವಾಗಿರುವ ಸಂಜಯ ಜಂಬಗಿ ಅವರಿಗೂ ಈ ಸಹಿ ಒಂದು ಅಪೂರ್ವ ನೆನಪಾಗಿ ಉಳಿಯಲಿದೆ.