ಕನ್ನಡಪ್ರಭ ವಾರ್ತೆ ಚಾಮರಾಜನಗರ
ಶಿಕ್ಷಣದಿಂದ ಮಾತ್ರ ಸಮ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂಬ ಅರಿವು ಅಂಬೇಡ್ಕರ್ ಅವರಿಗೆ ಇತ್ತು. ಹಾಗಾಗಿ ಅವರು ಶಿಕ್ಷಣವನ್ನು ಮೂಲಭೂತ ಹಕ್ಕಾಗಿ ಸಂವಿಧಾನದಲ್ಲಿ ಅಳವಡಿಸಿದರು ಎಂದು ಸಮಾಜ ಕಲ್ಯಾಣ ಇಲಾಖೆಯ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾ ಘಟಕದ ವತಿಯಿಂದ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ /ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮತ್ತು ಜಿಲ್ಲಾ ಮಟ್ಟದ ಪರಿಶಿಷ್ಟ ಜಾತಿ ಶಿಕ್ಷಕರ ನೌಕರರ ಜಾಗೃತಿ ಸಮಾವೇಶ ಹಾಗೂ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ದತ್ತವಾಗಿ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ ಪರಿಣಾಮ ಎಲ್ಲರೂ ಸುಶಿಕ್ಷಿತರಾಗಿ ಉತ್ತಮ ಸಮಾಜವನ್ನು ಕಾಣಲು ಸಾಧ್ಯವಾಗಿದೆ. ಈ ಹಿಂದೆ ಶಿಕ್ಷಣ ಒಂದು ವರ್ಗದ ಸ್ವತ್ತಾಗಿತ್ತು. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ರಚನೆ ಮಾಡಿ, ಎಲ್ಲರಿಗೂ ಶಿಕ್ಷಣ, ಉದ್ಯೋಗ ಹಾಗೂ ಸಮಾನತೆಯನ್ನು ಕಲ್ಪಿಸಿಕೊಟ್ಟರು. ಧರ್ಮಾಧಾರಿತ ಶಿಕ್ಷಣ ಬೇಡ ಎಂದು ಹೇಳಿದರು. ಇದರ ಪರಿಣಾಮ ಚಾಮರಾಜನಗರದಂತಹ ಹಿಂದುಳಿದ ಜಿಲ್ಲೆಯಲ್ಲೂ ಶೈಕ್ಷಣಿಕ ಕ್ರಾಂತಿಯಾಗಿದೆ. ಮೂರು ಸಾವಿರ ಶಿಕ್ಷಕರು ನೋಂದಣಿ ಮಾಡಿದ್ದೀರಿ. ಇಡೀ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿಯಾಗಿದೆ ಎಂದು ಹೇಳಿದರು.ಅಂಬೇಡ್ಕರ್ ಒಬ್ಬ ಶಿಕ್ಷಕರಾಗಿದ್ದರು. ಕಾನೂನು ಕಾಲೇಜು ಪ್ರಾಧ್ಯಾಪಕರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಅವರು ಪಟ್ಟ ಕಷ್ಟವನ್ನು ನಾವು ಯಾರೂ ಅನುಭವಿಸಿಲ್ಲ. ಹೀಗಾಗಿ ತಾವೆಲ್ಲರೂ ಜಾಗೃತರಾಗಬೇಕು. ಅವರ ಆಶಯದಂತೆ ಶಿಕ್ಷಣ, ಸಂಘಟನೆ, ಹೋರಾಟಕ್ಕೆ ಹೆಚ್ಚಿನ ಒತ್ತು ನೀಡಬೇಕು. ನೂತನ ಶಿಕ್ಷಣ ನೀತಿಯು ಮನುವಾದಿ ಶಿಕ್ಷಣಕ್ಕೆ ಮತ್ತೆ ವಾಪಸ್ ಹೋದಂತೆ ಆಗುತ್ತದೆ ಎಂದು ಹೇಳಿದರು.
ಕೊಳ್ಳೇಗಾಲ ಶಾಸಕ ಎ.ಅರ್.ಕೃಷ್ಣಮೂರ್ತಿ ಮಾತನಾಡಿ, ಶಿಕ್ಷಣಕ್ಕೆ ಪರಿಶಿಷ್ಟ ಜಾತಿ ಜನಾಂಗವು ಹೆಚ್ಚಿನ ಒತ್ತು ನೀಡಿದೆ. ಅಂಬೇಡ್ಕರ್ ಅವರ ಆಶಯದಂತೆ ಚಾಮರಾಜನಗರ ಜಿಲ್ಲೆಯಲ್ಲಿ ನಮ್ಮ ತಂದೆ ಬಿ.ರಾಚಯ್ಯ ಅವರು ಶಿಕ್ಷಕರ ತರಬೇತಿ ಸಂಸ್ಥೆಯನ್ನು ಆರಂಭಿಸಿ, ಶಿಕ್ಷಕರನ್ನು ತಯಾರು ಮಾಡಿದರು. ಆದೇ ರೀತಿ ಕೆ.ಸಿ.ರಂಗಯ್ಯ ಅವರು ಬಹಳಷ್ಟು ಬಡ ಮಕ್ಕಳಿಗೆ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. ಜಿಲ್ಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು, ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.ನಳಂದ ಬೌದ್ಧ ವಿಶ್ವವಿದ್ಯಾಲಯದ ಪ್ರಧಾನ ಕಾರ್ಯದರ್ಶಿ ಭಂತೇ ಬೋದಿದತ್ತ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಮಂಜುನಾಥ್ ಪ್ರಸನ್ನ, ಬಿಇಒ ಹನುಮಂತಶೆಟ್ಟಿ, ಪೌರಾಯುಕ್ತ ರಾಮದಾಸ್, ಡಾ.ರೇಣುಕಾದೇವಿ, ಸಮಾಜಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಬಿಂದ್ಯಾ, ನಗರಸಭಾ ಸದಸ್ಯ ಆರ್.ಎಂ.ರಾಜಪ್ಪ, ಬಿಆರ್‌ಸಿ ಸರೋಜ, ಕೆಆರ್‌ಡಿಎಲ್ ಅಭಿಯಂತರ ಚಿಕ್ಕಲಿಂಗಯ್ಯ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಚ್.ಕೆ.ಯೋಗನಂದ, ಡಯಟ್ ಪ್ರಾಂಶುಪಾಲ ಕಾಶಿನಾಥ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ರಾಮಚಂದ್ರ ಅರಸ್, ನಿವೃತ್ತಿ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಣ್ಣೇಗೌಡ, ಸಂಘದ ಜಿಲ್ಲಾಧ್ಯಕ್ಷ ಸಿ.ಕೆ.ರಾಮಸ್ವಾಮಿ, ಜಿಲ್ಲಾ ಕಾರ್ಯದರ್ಶಿ ನಂಜುಂಡಸ್ವಾಮಿ, ತಾಲೂಕು ದೈಹಿಕ ಅಧೀಕ್ಷಕ ಬಸವರಾಜು, ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹದೇವಸ್ವಾಮಿ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಶ್ರೀಧರ್, ಕಾರ್ಯದರ್ಶಿ ಚಿಕ್ಕರಾಜು, ಪರಿಶಿಷ್ಟ ಜಾತಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಎಂ.ಡಿ.ಮಹದೇವಯ್ಯ, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ಆನಂದರಾಜು, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಎಸ್.ಜಯರಾಮು, ಯಳಂದೂರು ತಾಲೂಕು ಅಧ್ಯಕ್ಷ ಶಂಕರ್, ಹನೂರು ತಾಲೂಕು ಅಧ್ಯಕ್ಷ ಮಾದೇಶ್ ಇತರರು ಹಾಜರಿದ್ದರು.