ಕನ್ನಡಪ್ರಭ ವಾರ್ತೆ ಶಿರಸಿ
ತಾಲೂಕಿನ ದೊಡ್ಡಳ್ಳಿ ಗ್ರಾಪಂ ವ್ಯಾಪ್ತಿಯ ಕಾಳೆಹೊಂಡ ರಸ್ತೆ ನಿರ್ಮಾಣದ ಸುಮಾರು ₹15 ಲಕ್ಷ ಕಾಮಗಾರಿಗೆ, ಮೇಲಿನ ಬ್ಯಾಗದ್ದೆ ರಸ್ತೆ ನಿರ್ಮಾಣದ ₹30 ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ರಾಜ್ಯದ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದೆ. ವಿಧಾನಸಭಾ ಚುನಾವಣಾ ಪೂರ್ವದಲ್ಲಿ ನೀಡಿದ ಪಂಚ ಗ್ಯಾರೆಂಟಿ ಜತೆ ಅಭಿವೃದ್ಧಿ ಕಾಮಗಾರಿಗಳಿಗೂ ಅನುದಾನ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಾಸಕರಿಗೆ ₹50 ಕೋಟಿ ವಿಶೇಷ ಅನುದಾನ ನೀಡಿದ್ದು, ನಗರ ಹಾಗೂ ಗ್ರಾಮೀಣ ಭಾಗಕ್ಕೆ ಸಮನಾಗಿ ಹಂಚಿಕೆ ಮಾಡಲಾಗಿದೆ. ಕ್ಷೇತ್ರದ ಶಾಸಕನನ್ನಾಗಿ ಆಯ್ಕೆ ಮಾಡಿದ ಜನತೆಯ ಬೇಡಿಕೆ ಈಡೇರಿಸಲು ಮತ್ತು ಅಭಿವೃದ್ಧಿಗೆ ವೇಗ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಅಭಿವೃದ್ಧಿ ಎಂಬುದು ನಿಂತ ನೀರಲ್ಲ. ನಿರಂತರವಾಗಿ ಅಭಿವೃದ್ಧಿ ಕಾರ್ಯ ನಡೆಯುತ್ತದೆ. ಜನರ ಕಷ್ಟಕ್ಕೆ ಸ್ಪಂದಿಸಿದಾಗ, ಅವರ ನೋವನ್ನು ಆಲಿಸುವುದು, ಅದಕ್ಕೆ ಪರಿಹಾರ ದೊರಕಿಸಲು ಪ್ರಯತ್ನಿಸುತ್ತಿದ್ದೇನೆ ಎಂಬ ಆತ್ಮತೃಪ್ತಿ ನನ್ನಲ್ಲಿದೆ. ಮಹಿಳೆಯರಲ್ಲಿ ಆರ್ಥಿಕ ಶಕ್ತಿ ಹೆಚ್ಚಿಸಬೇಕೆಂಬ ಉದ್ದೇಶದಿಂದ ಮನೆಯ ಯಜಮಾನಿಗೆ ಗೃಹಲಕ್ಷ್ಮೀ ಯೋಜನೆಯ ಮೂಲಕ ₹2 ಸಾವಿರ, ಶಕ್ತಿ ಯೋಜನೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಉಚಿತ ಪ್ರಯಾಣ, ಯುವಕರಿಗೆ ಯುವನಿಧಿ, ಹಸಿವು ಮುಕ್ತ ಕರ್ನಾಟಕಕ್ಕೆ ಅನ್ನಭಾಗ್ಯ, ಗೃಹ ಜ್ಯೋತಿ ಯೋಜನೆ ಮೂಲಕ ಪ್ರತಿ ಕುಟುಂಬಕ್ಕೆ 200 ಯೂನಿಟ್ ಉಚಿತ ವಿದ್ಯುತ್ ಪೂರೈಸಿ, ಅಭಿವೃದ್ಧಿಗೂ ವೇಗ ನೀಡಲಾಗಿದೆ ಎಂದರು.
ಶಿರಸಿ ತಾಲೂಕಿನ ದೊಡ್ಡಳ್ಳಿ ಗ್ರಾಪಂ ವ್ಯಾಪ್ತಿಯ ಮೇಲಿನ ಬ್ಯಾಗದ್ದೆ ಊರ ಒಳಗಿನ ರಸ್ತೆ ನಿರ್ಮಾಣ ಕಾಮಗಾರಿಯು ಸುಮಾರು ₹30 ಲಕ್ಷ ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿಯಾಗುತ್ತಿದ್ದು, ಗ್ರಾಮಸ್ಥರ ಸುಗಮ ಸಂಚಾರಕ್ಕೆ ಈ ಕಾಮಗಾರಿ ಅನುಕೂಲವಾಗಲಿದೆ. ಕ್ಷೇತ್ರದ ಗ್ರಾಮೀಣ ಭಾಗಗಳ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಗುಣಮಟ್ಟದ ಕಾಮಗಾರಿ ನಡೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.ದೊಡ್ನಳ್ಳಿ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್. ಹೆಗಡೆ, ಪ್ರಮುಖರಾದ ಎಸ್.ಕೆ. ಭಾಗ್ವತ್ ಸಿರ್ಸಿಮಕ್ಕಿ, ಗ್ರಾಪಂ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.