ಗದಗ: ಜಿಲ್ಲೆಯ ಗದಗ ಮತ್ತು ಮುಂಡರಗಿ ತಾಲೂಕು ವ್ಯಾಪ್ತಿಯಲ್ಲಿ ಜಿಪಂ ಅಧಿಕಾರಿಗಳ ಸೂಚನೆಯ ಮೇರೆಗೆ ಹಲವಾರು ರೈತರಿಂದ ಕಡಲೆ, ಮೆಕ್ಕೆಜೋಳ ಖರೀದಿಸಲಾಗಿದೆ. ಆದರೆ ಇದುವರೆಗೂ ರೈತರಿಗೆ ಕೊಡಬೇಕಾಗಿದ್ದ ಹಣ ನೀಡಿಲ್ಲ. ತಕ್ಷಣವೇ ರೈತರಿಗೆ ಹಣ ಬಿಡುಗಡೆ ಮಾಡಬೇಕು ಮತ್ತು ತಪ್ಪು ಮಾಡಿರುವ ದಾವಣಗೆರೆ ಮೂಲದ ಕಂಪನಿ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಸೋಮವಾರ ರೈತರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭಿಸಿದರು.
ಪ್ರತಿಭಟನೆಯದಲ್ಲಿ ಒಕ್ಕೂಟದ ಅಧ್ಯಕ್ಷ ಬೀರಪ್ಪ ದೇಶನೂರ, ಅಖಿಲ ಕರ್ನಾಟಕ ಭ್ರಷ್ಟಾಚಾರ ನಿರ್ಮೂಲನಾ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ನವಲಗುಂದ, ಒಕ್ಕೂಟದ ವರಿಷ್ಠರಾದ ಹಿಂಗಲಗುತ್ತೆ ಕೃಷ್ಣೇಗೌಡ್ರ, ಅಖಿಲ ಕರ್ನಾಟಕ ಮಹಿಳಾ ರೈತ ಸಂಘದ ರಾಜ್ಯಾಧ್ಯಕ್ಷೆ ಮಹಾದೇವಿ ಹುಯಿಲಗೋಳ, ಸಾಹಿದ ಹುಸೇನ, ಈರಣ್ಣ ಅಂಗಡಿ, ಸುರೇಶ ಮೂಲಿಮನಿ, ಸುಜಾತಾ ಜಾಧವ, ಬಸಮ್ಮ ಕಾಳೆ, ಜಯಶೀಲಾ, ಬಿಬಿಜಾನ ಸಂಕೇಶ್ವರ, ಸುಜಾತಾ ಬೆಳಗಾವಿ ಹಾಗೂ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ರೈತ ಮುಖಂಡರು ಪಾಲ್ಗೊಂಡಿದ್ದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಭರತ ಎಸ್., ಎಸ್ಪಿ ಬಿ.ಎಸ್. ನೇಮಗೌಡ್ರ ಸ್ಥಳಕ್ಕೆ ಆಗಮಿಸಿ, ರೈತರ ಮನವೊಲಿಸಲು ಪ್ರಯತ್ನಿಸಿದರು. ಈ ವಿಷಯವನ್ನು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಈಗಾಗಲೇ ನಾವು ಹಲವು ಬಾರಿ ಸಚಿವರಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗದೇ ಇರುವ ಹಿನ್ನೆಲೆಯಲ್ಲಿಯೇ ಅಹೋರಾತ್ರಿ ಪ್ರತಿಭಟನೆ ಪ್ರಾರಂಭಿಸಿದ್ದೇವೆ. ನಮಗೆ ನ್ಯಾಯ ಸಿಗುವ ವರೆಗೂ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ರೈತರು ಹೇಳಿದರು.