ರೋಣ: ಆದರ್ಶ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಲಿದ್ದು, ಆದ್ದರಿಂದ ಬದುಕನ್ನು ಅತ್ಯಂತ ಸುಂದರವಾಗಿ, ಪರಿಪೂರ್ಣವಾಗಿ ರೂಪಿಸಿಕೊಳ್ಳುವ ಮೂಲಕ ಸಾಮಾಜಿಕ, ದಾನ, ಧರ್ಮಾಧಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಾಲಕೆರೆ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಅವರು ಭಾನುವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆ ಆವರಣದಲ್ಲಿ ಡಾ. ಕೆ.ಬಿ. ಧನ್ನೂರ ಅಭಿಮಾನಿಗಳ ಬಳಗ ವತಿಯಿಂದ ಡಾ.ಕೆ. ಧನ್ನೂರ ಅವರ ಅಮೃತ ಮಹೋತ್ಸವ ಹಾಗೂ ಸಮಾಜಮುಖಿ ಅಭಿನಂದನಾ ಗ್ರಂಥ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಬದುಕಿನ ಪ್ರತಿ ಕ್ಷಣವೂ ಅತ್ಯಂತ ಅಮೂಲ್ಯವಾದದ್ದು, ಇದನ್ನು ನಮಗೆ ದೇವರು ಕೊಟ್ಟಿದ್ದಾನೆ. ಆದ್ದರಿಂದ ಬದುಕನ್ನು ಸಾರ್ಥಕವಾಗಿ ರೂಪಿಸಿಕೊಳ್ಳಬೇಕು ಎಂದರು.
ಬದುಕಿಗಿಂತ ಸಮೃದ್ಧವಾದ ಸಂಪತ್ತು ಮತ್ತೊಂದಿಲ್ಲ. ಆದರ್ಶ ವ್ಯಕ್ತಿತ್ವ ಸಮಾಜಕ್ಕೆ ಮಾದರಿಯಾಗಲಿದೆ. ಎಲ್ಲರೊಳಗೊಂದಾಗುವಂತೆ ಬದುಕನ್ನು ರೂಪಿಸಿಕೊಳ್ಳಬೇಕು. ಆ ಸನ್ಮಾರ್ಗದಲ್ಲಿ ನಡೆದು, ಸದಾ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ನರೇಗಲ್ಲ ಪಟ್ಟಣದ ಪ್ರಸಿದ್ಧ ವೈದ್ಯರಾದ ಡಾ. ಜೆ.ಬಿ. ಧನ್ನೂರ ಅವರ ವ್ಯಕ್ತಿತ್ವ ಶ್ಲಾಘನೀಯ ಹಾಗೂ ಮಾದರಿಯಾಗಿದೆ ಎಂದರು.ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಪುಣ್ಯ ಪ್ರಾಪ್ತಿಯಾಗುವುದು. ಜೀವನದಲ್ಲಿ ಒಳ್ಳೆಯ ಆದರ್ಶಗಳನ್ನು ಇಟ್ಟುಕೊಂಡು ಬದುಕಿದಲ್ಲಿ, ಅಂತಹ ವ್ಯಕ್ತಿ ಚಿರಸ್ಥಾಯಿ, ಚಿರಂಜೀವಿಯಾಗಿರುತ್ತಾನೆ. ಆದ್ದರಿಂದ ಪ್ರತಿಯೊಬ್ಬರು ಸಮಾಜದ ಹಿತ ಕಾಪಾಡುವಲ್ಲಿ, ಮಕ್ಕಳನ್ನು ಶಿಕ್ಷಣವಂತರನ್ನಾಗಿ, ಸುಸಂಸ್ಕೃತರನ್ನಾಗಿ ಬೆಳೆಸುವಲ್ಲಿ ಶ್ರಮಿಸಬೇಕು ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಡಾ.ಕೆ.ಬಿ. ಧನ್ನೂರ ಅವರು ವೈದ್ಯ ವೃತ್ತಿಯನ್ನು ಕೇವಲ ಹಣ ಗಳಿಸಲು ಉಪಯೋಗಿಸಿದೇ ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ದಿನದ 24 ತಾಸು, ಜೀವನದುದ್ದಕ್ಕೂ ಜನರಿಗೆ ಆರೋಗ್ಯ ಸೇವೆ ಸಲ್ಲಿಸಿ ಅವಿರತ ಶ್ರಮಿಸಿ ಜನಾನುರಾಗಿ ವೈದ್ಯರಾಗಿ ಕೀರ್ತಿ ಗಳಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು.ಡಿ.ಆರ್.ಪಾಟೀಲ, ನಿವೃತ್ತ ಶಿಕ್ಷಕ ಎಂ.ಎಸ್. ದಡೇಸೂರಮಠ ಇದ್ದರು. ವೇದಿಕೆಯಲ್ಲಿ ಡಾ. ಕೆ.ಬಿ. ಧನ್ನೂರ ಅವರ ಕುರಿತಾದ ಸಮಾಜಮುಖಿ ಅಭಿನಂದನಾ ಗ್ರಂಥ ಬಿಡುಗಡೆಯಾಯಿತು.
ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯು, ನಿಡಗುಂದಿ ಅಭಿನವ ಚನ್ನಬಾವ ಸ್ವಾಮೀಜಿ ಆಶೀರ್ವಚನ ನೀಡಿದರು. ಅಧ್ಯಕ್ಷತೆಯನ್ನು ಮಾಜಿ ಸಂಸದ ಆರ್.ಎಸ್. ಪಾಟೀಲ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಐ.ಎಸ್. ಪಾಟೀಲ, ಡಾ. ಕೆ.ಬಿ. ಧನ್ನೂರ, ವ್ಹಿ.ಆರ್. ಗುಡಿಸಾಗರ, ಅರುಣ ಕುಲಕರ್ಣಿ, ಡಾ.ರಾಜು ದೇಶಪಾಂಡೆ, ವೀರಣ್ಣ ಶೆಟ್ಟರ, ಬಸವರಾಜ ನವಲಗುಂದ, ಗುರಣ್ಣ ಬಳಗಾನೂರ, ಜೆ.ಕೆ. ಜಮಾದಾರ, ಕೆ.ಬಿ. ಹರ್ಲಾಪೂರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು. ಬಿ.ಎಫ್. ಚೇಗರಡ್ಡಿ ಸ್ವಾಗತಿಸಿದರು. ವ್ಹಿ.ಬಿ. ಸೋಮನಕಟ್ಟಿಮಠ ನಿರೂಪಿಸಿ, ವಂದಿಸಿದರು.