ಕನ್ನಡಪ್ರಭ ವಾರ್ತೆ ಮಂಡ್ಯ
ಉದ್ಯಾನವನದೊಳಗೆ ನಿಯಮಾನುಸಾರ ಯಾವುದೇ ಕಟ್ಟಡ ನಿರ್ಮಾಣಕ್ಕೆ ಕಾನೂನು ವ್ಯಾಪ್ತಿಯೊಳಗೆ ಅವಕಾಶವಿಲ್ಲ. ಉದ್ಯಾನದ ಜಾಗವನ್ನು ಉದ್ಯಾನವನದ ಅಭಿವೃದ್ಧಿಗಷ್ಟೇ ಸೀಮಿತವಾಗಿಡಬೇಕೆಂಬ ನಿಯಮವಿದೆ. ಆದರೂ ಕುವೆಂಪು ನಗರದ ಉದ್ಯಾನದಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿರುವವರು ಪ್ರಭಾವಿಗಳಾಗಿರುವುದರಿಂದ ಅವರನ್ನು ಎದುರಿಸಲಾಗದೆ ನಗರಸಭೆ ಅಧಿಕಾರಿಗಳು ಮೌನ ವಹಿಸಿದ್ದು, ರಾಜಕೀಯ ಪ್ರಭಾವಕ್ಕೆ ಮಣಿದಿರುವಂತೆ ವರ್ತಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಮೂರು ದಿನಗಳ ರಜಾ ಅವಧಿಯಲ್ಲಿ ಕಟ್ಟಡದ ಆರ್‌ಸಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿರುವುದು ಕಂಡುಬಂದಿದೆ. ರಜಾ ದಿನಗಳನ್ನು ನೋಡಿಕೊಂಡೇ ಕಳೆದೊಂದು ವರ್ಷದಿಂದ ಹಂತ ಹಂತವಾಗಿ ಕಾಮಗಾರಿಯನ್ನು ನಡೆಸುತ್ತಾ ಬರಲಾಗುತ್ತಿದೆ. ಸದ್ಯ ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ. ಕಾಮಗಾರಿಯನ್ನು ಮುಂದುವರೆಸದಂತೆ ಅವರಿಗೆ ಸೂಚನೆ ನೀಡಿದ್ದಾರೆ.ಉದ್ಯಾನವನದೊಳಗೆ ಅನಧಿಕೃತ ಕಟ್ಟಡ ನಿರ್ಮಾಣವಾಗುತ್ತಿರುವ ಬಗ್ಗೆ ವಾರ್ಡ್‌ನ ಸದಸ್ಯೆ ವೈ.ಜೆ.ಮೀನಾಕ್ಷಿ ಅವರು ೫ ಸೆಪ್ಟೆಂಬರ್ ೨೦೨೪ರಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಪಿಲ್ಲರ್ ಹಾಕಲು ತೆಗೆಯಲಾಗಿದ್ದ ಗುಂಡಿಗಳನ್ನೆಲ್ಲಾ ನಗರಸಭೆಯವರು ಮುಚ್ಚಿಸಿದ್ದರು. ಮತ್ತೆ ೪ ಏಪ್ರಿಲ್ ೨೦೨೫ರಂದು ಕಟ್ಟಡ ನಿರ್ಮಾಣಕ್ಕೆ ಪಿಲ್ಲರ್ ನಿರ್ಮಿಸಲು ಜೆಸಿಬಿಯನ್ನು ಬಳಕೆ ಮಾಡಿ ಗುಂಡಿ ತೆಗೆದಿದ್ದು ಇದನ್ನು ಗಮನಿಸಿ ಕಾಮಗಾರಿ ನಿರ್ಬಂಧಿಸುವಂತೆ ನಗರಸಭೆ ಅಧಿಕಾರಿಗಳಿಗೆ ತಿಳಿಸಿದಾಗ ಅಭಿಯಂತರ ರಾಜೇಗೌಡ ಸ್ಥಳಕ್ಕೆ ಆಗಮಿಸಿ ನಿರ್ಮಾಣ ಕಾರ್ಯ ಸ್ಥಗಿತಗೊಳಿಸಿದ್ದರೂ ಮತ್ತೆ ಮರುದಿನದಿಂದ ಕಾಮಗಾರಿ ನಿರಾತಂಕವಾಗಿ ಮುಂದುವರೆದಿತ್ತು. ಈ ಸಮಯದಲ್ಲಿ ಯಾರೊಬ್ಬರೂ ನಿಯಮಬಾಹೀರವಾಗಿ ನಡೆಯುತ್ತಿರುವ ಕಾಮಗಾರಿಯನ್ನು ತಡೆದು ಗುಂಡಿ ಅಗೆತಕ್ಕೆ ಬಳಸುತ್ತಿರುವ ಜೆಸಿಬಿಯನ್ನು ವಶಕ್ಕೆ ಪಡೆಯುವ ಧೈರ್ಯ ಪ್ರದರ್ಶಿಸಲಿಲ್ಲವೆಂದು ಮೀನಾಕ್ಷಿ ಅವರು ಆರೋಪಿಸಿದ್ದಾರೆ.
ಅನಧಿಕೃತ ಕಟ್ಟಡ ನಿರ್ಮಾಣ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಆರಕ್ಷಕ ಠಾಣೆಗೆ ದೂರು ನೀಡದೆ ದೂರ ಉಳಿದಿರುವುದು ಅಧಿಕಾರಿಗಳ ಕರ್ತವ್ಯಲೋಪವಾಗಿದೆ. ಉದ್ಯಾನವನದಲ್ಲಿ ಕಟ್ಟಡ ನಿರ್ಮಾಣಕ್ಕಾಗಿ ವಾಯುವಿಹಾರಿಗಳು ಕೂರಲು ಅಳವಡಿಸಿದ್ದ ಕಲ್ಲುಬೆಂಚುಗಳು ಮತ್ತು ವಾಕಿಂಗ್ ಟ್ರ್ಯಾಕ್‌ನಲ್ಲಿ ಅಳವಡಿಸಿದ್ದ ಟೈಲ್ಸ್‌ಗಳನ್ನು ನಾಶಗೊಳಿಸಿರುವ ಸಂಬಂಧ ಅಕ್ರಮ ಕಟ್ಟಡ ನಿರ್ಮಿಸುತ್ತಿರುವವರಿಂದ ದಂಡ ವಸೂಲಿ ಮಾಡುವಂತೆಯೂ ಆಗ್ರಹಪಡಿಸಿದ್ದಾರೆ.
ನಗರಸಭೆ ಅಧಿಕಾರಿಗಳು ಅನುಸರಿಸುತ್ತಿರುವ ನಡೆಯನ್ನು ನೋಡಿದರೆ ನಗರದಲ್ಲಿರುವ ಯಾವುದೇ ಉದ್ಯಾನವನದಲ್ಲಿಲ್ಲದ ಮಾನ್ಯತೆ, ರಿಯಾಯಿತಿ ಕುವೆಂಪುನಗರದ ಉದ್ಯಾನವನಕ್ಕೆ ನೀಡುತ್ತಿರುವುದೇಕೆ. ಇಲ್ಲಿ ಕಾಮಗಾರಿ ನಡೆಸುತ್ತಿರುವ ಖಾಸಗಿ ವ್ಯಕ್ತಿಗಳಿಗೆ ಸರ್ಕಾರದ ನಿಯಮ ಅನ್ವಯಿಸುವುದಿಲ್ಲವೇ. ಇದರ ಹಿಂದೆ ಇರುವ ಷಡ್ಯಂತ್ರವಾದರೂ ಏನು ಎಂದು ಪ್ರಶ್ನಿಸಿದ್ದಾರೆ.ನಗರಸಭೆಗೆ ತಲೆನೋವಾಗಿರುವ ಕಟ್ಟಡ
- ಎಂ.ವಿ.ಪ್ರಕಾಶ್, ಅಧ್ಯಕ್ಷರು, ನಗರಸಭೆರಜಾದಿನವಾಗಿದ್ದರೂ ಅಕ್ರಮ ಕಟ್ಟಡ ಕಾಮಗಾರಿ ನಡೆಯುತ್ತಿರುವ ವಿಷಯ ತಿಳಿದು ನಗರಸಭೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ನಿಲ್ಲಿಸಿದ್ದಾರೆ. ಮುಂದೆ ಕಾಮಗಾರಿ ನಡೆಸದಂತೆ ನಿರ್ದಿಷ್ಟ ಸೂಚನೆಯನ್ನೂ ನೀಡಿದ್ದಾರೆ. ಮತ್ತೆ ಕಾಮಗಾರಿ ಮುಂದುವರೆಸಿದರೆ ೧೯೬೪ರ ನಿಯಮದಂತೆ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು.