ಬಸವರಾಜ ಹಿರೇಮಠ
ಕಳೆದ ಎರಡು ವರ್ಷಗಳಿಂದ ಧಾರವಾಡ ಜಿಲ್ಲೆಯ ಕುಸ್ತಿ ಪಟುಗಳಿಗೆ ಸೂರು ಬೇಕೆಂದು ಪ್ರಯತ್ನಿಸುತ್ತಿದ್ದರೂ ಆಡಳಿತ ವ್ಯವಸ್ಥೆಯಿಂದ ಒಂಚೂರು ಸ್ಪಂದನೆ ಸಿಗದಿರುವುದು ಅತೀವ ಬೇಸರದ ಸಂಗತಿ. ರಾಜ್ಯ ಸರ್ಕಾರ ಕ್ರೀಡೆಗೆ ಏನೆಲ್ಲ ಮಾಡುತ್ತಿದೆ ಎಂದು ಹೇಳಿಕೊಂಡಿದ್ದೇ ಬಂತು. ಇತ್ತೀಚೆಗೆ ಬಂದಿರುವ ಹೊಸ ಹೊಸ ಕ್ರೀಡೆಗಳಿಗೆ ಬೇಕಾದ ಮೈದಾನ, ಸೂರು-ಸೌಲಭ್ಯ ಒದಗಿಸಿ ಐತಿಹಾಸಿಕ ಮತ್ತು ಗ್ರಾಮೀಣ ಕ್ರೀಡೆಯಾಗಿರುವ ಕುಸ್ತಿಗೆ ಅಗತ್ಯವಾಗಿ ಬೇಕಾದ ಸೌಲಭ್ಯ ನೀಡದೇ ಇರುವುದು ಕ್ರೀಡಾಪಟುಗಳು ಸೇರಿದಂತೆ ಕ್ರೀಡಾಭಿಮಾನಿಗಳಿಗೂ ಅತೀವ ಬೇಸರ ತರಿಸಿದೆ.
ಧಾರವಾಡದಲ್ಲಿ ಈ ಮೊದಲು ಗರಡಿ ಮನೆಗಳಲ್ಲಿ ಕುಸ್ತಿ ಪಟುಗಳು ಸಿದ್ಧರಾಗುತ್ತಿದ್ದರು. ಆದರೆ, 2020ರಲ್ಲಿ ಧಾರವಾಡದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರದಿಂದ ಜಿಲ್ಲೆಯ ಕುಸ್ತಿಪಟುಗಳಿಗೆ ತರಬೇತಿ ಕೇಂದ್ರ ಶುರು ಮಾಡಲಾಗಿದೆ. ಸದ್ಯ ಒಳಾಂಗಣ ಕ್ರೀಡಾಂಗಣದಲ್ಲಿಯೇ ಕುಸ್ತಿ ತರಬೇತಿ ನಡೆಯುತ್ತಿದೆ. ಅಲ್ಲಿ ಬ್ಯಾಡ್ಮಂಟಿನ್, ಟೇಬಲ್ ಟೆನ್ನಿಸ್, ಟೆಕ್ವಾಂಡೋ ಸೇರಿದಂತೆ ಹಲವು ಕ್ರೀಡೆಗಳ ತರಬೇತಿ ನಡೆಯುತ್ತಿವೆ. ಹೀಗಾಗಿ ನಿರ್ದಿಷ್ಟವಾಗಿ ಕುಸ್ತಿ ಪಟುಗಳು ತರಬೇತಿ ಪಡೆಯಲು ಅನಾನುಕೂಲವಾಗುತ್ತಿದೆ.ಸದ್ಯ ಮಹಿಳಾ ಕುಸ್ತಿ ಪಟುಗಳು ಸೇರಿದಂತೆ 25ಕ್ಕೂ ಹೆಚ್ಚು ಕುಸ್ತಿ ಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಲಿದೆ. ಜತೆಗೆ ರಾಜ್ಯ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಗಳಲ್ಲಿ ಸಾಕಷ್ಟು ಚಿನ್ನ, ಬೆಳ್ಳಿ ಪದಕಗಳನ್ನೂ ಪಡೆದು ಧಾರವಾಡದ ಖ್ಯಾತಿ ಹೆಚ್ಚಿಸುತ್ತಿದ್ದಾರೆ. ಪುಷ್ಪಾ ನಾಯಕ ಎಂಬ ಬಾಲಕಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯದಲ್ಲಿ ಪದಕ, ಭಜರಂಗಿ ದೊಡಮನಿ, ಯಂಕಪ್ಪ ಕೂಡಗಿ ರಾಜ್ಯ ಮಟ್ಟದಲ್ಲಿ ಗೆಲವು ಸಾಧಿಸಿ ರಾಷ್ಟ್ರಮಟ್ಟದಲ್ಲಿ ಭಾಗವಹಿಸಿದ್ದಾರೆ. ಸ್ವಂತ ಸೂರಿಲ್ಲದೇ ಇದ್ದರೂ ಅತ್ಯುತ್ತಮ ತರಬೇತಿ ಪಡೆದು ಪದಕಗಳನ್ನು ತರುತ್ತಿದ್ದು ಬರುವ ದಿನಗಳಲ್ಲಿ ಕುಸ್ತಿ ತರಬೇತಿಗೆ ಪ್ರತ್ಯೇಕ ಸಭಾಂಗಣ ದೊರೆತರೆ ರಾಜ್ಯದಲ್ಲಿಯೇ ಧಾರವಾಡದ ಕುಸ್ತಿ ಪಟುಗಳು ಮಿಂಚಲಿದ್ದಾರೆ ಎಂದು ಕುಸ್ತಿ ತರಬೇತುದಾರರು ವಿಶ್ವಾಸ ವ್ಯಕ್ತಪಡಿಸುತ್ತಾರೆ.
ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜಾಗದ ಅನುಕೂಲತೆ ನೋಡಿಕೊಂಡು ಆದಷ್ಟು ಶೀಘ್ರ ಕುಸ್ತಿ ತರಬೇತಿಗಾಗಿ ಪ್ರತ್ಯೇಕ ಸಭಾಂಗಣ ನಿರ್ಮಿಸಿಕೊಡುವ ಕುರಿತು ಕ್ರೀಡಾ ನಿರ್ದೇಶಕರ ಜತೆಗೆ ಸಭೆ ಮಾಡುತ್ತೇನೆ. ಜತೆಗೆ ಅವರ ಹಾಸ್ಟೇಲ್ ವ್ಯವಸ್ಥೆ ಮತ್ತಷ್ಟು ಸುಧಾರಿಸಲು ಪ್ರಯತ್ನಿಸಲಾಗುವುದು ಜಿಲ್ಲಾಧಿಕಾರಿ ಗುರುದತ್ತ್ ಹೆಗಡೆ ತಿಳಿಸಿದ್ದಾರೆ.