ಕರಡಹಳ್ಳಿ ಸೀತಾರಾಮು
ಪಟ್ಟಣದ ಅಗ್ನಿಶಾಮಕ ಠಾಣೆಯಲ್ಲಿ ಅವಧಿ ಮುಗಿದಿರುವ ಹಳೆಯ ಜಲವಾಹನದಲ್ಲಿಯೇ ಅಗ್ನಿ ಅವಘಡ, ಬೆಂಕಿ ನಂದಿಸುವ ಪರಿಸ್ಥಿತಿ ಅಗ್ನಿಶಾಮಕ ದಳದ ಅಧಿಕಾರಿ ಮತ್ತು ಸಿಬ್ಬಂದಿಗೆ ಬಂದೊದಗಿದೆ.
ಈಗಾಗಲೇ ಬೇಸಿಗೆ ಆರಂಭವಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಪ್ರತಿನಿತ್ಯ ಒಂದಲ್ಲೊಂದು ಅಗ್ನಿ ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ವಾಯಿದೆ ಮುಗಿದಿರುವ ಜಲವಾಹನವನ್ನು ರಸ್ತೆಗಿಳಿಸಲು ಅವಕಾಶವಿಲ್ಲದಿದ್ದರೂ ಕೂಡ ಸ್ವಂತ ಜವಾಬ್ದಾರಿಯಿಂದ ಅಧಿಕಾರಿಗಳು, ಸಿಬ್ಬಂದಿ ಜನರಿಗೆ ತುರ್ತು ಸೇವೆ ನೀಡುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ.ಈ ಹಿಂದೆ ಸಾರಿಗೆ ಸಚಿವರಾಗಿದ್ದ ಎನ್.ಚಲುವರಾಯಸ್ವಾಮಿ 2007ರಲ್ಲಿ ಪಟ್ಟಣಕ್ಕೆಅಗ್ನಿ ಶಾಮಕ ಠಾಣೆ ಮಂಜೂರು ಮಾಡಿಸಿ 2009ರ ಡಿ.5ರಂದು 75 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ನೂತನ ಅಗ್ನಿ ಶಾಮಕ ಠಾಣೆ ಉದ್ಘಾಟಿಸಿದ್ದರು. ಆಗ ನೀಡಿದ್ದ ಕೆಎ11 ಜಿ310 ಸಂಖ್ಯೆಯ ಜಲವಾಹನಕ್ಕೆ 15 ವರ್ಷವಾಗಿ ವಾಯಿದೆ ಮುಗಿದಿದೆ ಎಂದು ನಾಮಫಲಕ ಹಾಕಿ ಎರಡು ವರ್ಷಗಳಿಂದ ಅಗ್ನಿಶಾಮಕ ಠಾಣೆಯಲ್ಲಿಯೇ ನಿಲ್ಲಿಸಲಾಗಿದೆ.
15 ವರ್ಷಗಳ ಹಳೆಯದಾದ ತುರ್ತು ಸೇವೆ ನೀಡುವ ವಾಹನಗಳನ್ನು ತಕ್ಷಣ ಬದಲಿಸಬೇಕಿರುವುದು ಕೇಂದ್ರ ಹಾಗೂ ಸರ್ಕಾರದ ಜವಾಬ್ದಾರಿ. ಆದರೆ, ಪಟ್ಟಣದ ಅಗ್ನಿ ಶಾಮಕ ಠಾಣೆಯಲ್ಲಿ ಎರಡು ಜಲವಾಹನಗಳಿದ್ದರೂ ಕೂಡ ನಿಷ್ಪ್ರಯೋಜಕವಾಗಿವೆ. ತಾಲೂಕಿನಲ್ಲಿ ಅಗ್ನಿ ಅವಘಡಗಳು ಸಂಭವಿಸುತ್ತಿವೆ. ಆಕಸ್ಮಿಕ ಬೆಂಕಿಯಿಂದ ರಾಗಿ, ಭತ್ತದ ಹುಲ್ಲಿನ ಮೆದೆಗಳು ಸುಟ್ಟು ಭಸ್ಮವಾಗುತ್ತಿವೆ. ಸುಡು ಬಿಸಿಲಿನ ತಾಪಕ್ಕೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಂತಹ ಬೆಂಕಿ ಅನಾಹುತಗಳು ಉಂಟಾಗುತ್ತಿವೆ.
ನಾಗಮಂಗಲ ಅಗ್ನಿ ಶಾಮಕ ಠಾಣೆಯೂ ಸೇರಿದಂತೆ ರಾಜ್ಯದ ಹಲವಾರು ಅಗ್ನಿಶಾಮಕ ಠಾಣೆಗಳಲ್ಲಿರುವ 15 ವರ್ಷಕ್ಕಿಂತ ಹಳೆಯ ಜಲವಾಹನಗಳ ನೋಂದಣಿ ರದ್ದಾಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಈವರೆಗೂ ಯಾವುದೇ ಹೊಸ ಜಲವಾಹನಗಳನ್ನು ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಕಣ್ಮುಚ್ಚಿ ಕುಳಿತಿರುವ ಸರ್ಕಾರ ಈಗಲಾದರೂ ಎಚ್ಚೆತ್ತುಪಟ್ಟಣದ ಅಗ್ನಿಶಾಮಕಠಾಣೆಗೆ ಹೊಸ ಜಲವಾಹನದ ಜೊತೆಗೆ ಹೆಚ್ಚುವರಿಯಾಗಿ ಮತ್ತೊಂದು ಜಲವಾಹನವನ್ನು ಕೊಡಿಸಿಕೊಟ್ಟರೆ ಅಗ್ನಿಅವಘಡ ಮತ್ತು ಇನ್ನಿತರೆ ತುರ್ತು ಸಂದರ್ಭದಲ್ಲಿ ಬೆಂಕಿ ಹಾಗೂ ನೀರಿನ ಅನಾಹುತಗಳನ್ನು ತಪ್ಪಿಸಲು ಅನುಕೂಲವಾಗುತ್ತದೆ. ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಮ್ಮ ಸ್ವಕ್ಷೇತ್ರದ ಈ ಸಮಸ್ಯೆಯನ್ನು ತಕ್ಷಣ ಬಗೆಹರಿಸುವರೇ ಎಂದು ಕಾದು ನೋಡಬೇಕಿದೆ.