ಕೃಷ್ಣ ಎನ್. ಲಮಾಣಿ
ಸ್ಥಳೀಯ ಶಾಸಕ ಎಚ್.ಆರ್. ಗವಿಯಪ್ಪ ಜಿಲ್ಲಾ ಕಾಂಗ್ರೆಸ್‌ಗೆ ಸಹಕಾರ ನೀಡಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಆದರೆ, ಶಾಸಕರ ಆಪ್ತ ವಲಯದವರು ಮಾತ್ರ ನಗರಸಭೆ ಅಧ್ಯಕ್ಷ ಗಾದಿಗೆ ನಾಮಪತ್ರ ಸಲ್ಲಿಸಿದ್ದ ಸದಸ್ಯ ಅಸ್ಲಂ ಮಾಳಗಿ ಒಮ್ಮೆಯೂ ಶಾಸಕರನ್ನು ಸೌಜನ್ಯದ ಭೇಟಿ ಮಾಡಿಲ್ಲ. ಆದರೂ ಶಾಸಕರು ಪಕ್ಷದ ಗೌರವದ ಮೇಲೆ ನಗರಸಭೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಈಗ ಕೆಪಿಸಿಸಿ ಅಂಗಳಕ್ಕೆ ದೂರು ಕೊಂಡೊಯ್ಯಲು ಪಕ್ಷದ ಜಿಲ್ಲಾಧ್ಯಕ್ಷ ಮುಂದಾಗಿದ್ದಾರೆ. ಹಾಗಾಗಿ, ವಿಜಯನಗರ ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಮತ್ತೊಂದು ಕದನಕ್ಕೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ರಹದಾರಿಯಾಗಿ ಮಾರ್ಪಟ್ಟಿದೆ.
ಆನಂದ ಸಿಂಗ್ ಪ್ರತಿತಂತ್ರ:ಹೊಸಪೇಟೆ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮಾಜಿ ಸಚಿವ ಆನಂದ ಸಿಂಗ್ ಅವರನ್ನು ಮಣಿಸಿ, ರಾಜಕೀಯ ಮೇಲುಗೈ ಸಾಧಿಸಲು ಕಾಂಗ್ರೆಸ್ ಎಣಿಸಿತ್ತು. ಕಾಂಗ್ರೆಸ್‌ನ ತಂತ್ರಕ್ಕೆ ಪ್ರತಿತಂತ್ರ ಹೆಣೆದ ಆನಂದ ಸಿಂಗ್ ಬಹಿರಂಗವಾಗಿ ಸಭೆ ಮಾಡದೇ ಗೌಪ್ಯವಾಗಿಯೇ ದಾಳ ಉರುಳಿಸಿ ಕಾಂಗ್ರೆಸ್‌ಗೆ ಭಾರೀ ಪೆಟ್ಟು ನೀಡಿದ್ದಾರೆ. ಈ ಮೂಲಕ ವಿಜಯನಗರದಲ್ಲಿ ಆನಂದ ಸಿಂಗ್ ಪಾರುಪತ್ಯ ಇನ್ನು ಮುಗಿದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ನಗರಸಭೆಯ 35 ಸದಸ್ಯರಲ್ಲಿ ಕಾಂಗ್ರೆಸ್ 12, ಬಿಜೆಪಿ 10, ಆಪ್ ಒಂದು ಸ್ಥಾನ ಮತ್ತು ಪಕ್ಷೇತರರು 12 ಮಂದಿ ಇದ್ದಾರೆ. ಈ ಪೈಕಿ ಪಕ್ಷೇತರರಲ್ಲಿ 9 ಸದಸ್ಯರು ಈಗಾಗಲೇ ಆನಂದ ಸಿಂಗ್ ಅವರ ಜೊತೆಗೆ ಗುರುತಿಸಿಕೊಂಡಿದ್ದರು. ಆಪ್ ಸದಸ್ಯ ಕೂಡ ಆನಂದ ಸಿಂಗ್ ಜತೆ ಗುರುತಿಸಿಕೊಂಡಿದ್ದರು. ಕಳೆದ ಬಾರಿಯ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲೂ ಪಕ್ಷೇತರರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಈ ಬಾರಿಯೂ ಪಕ್ಷೇತರರ ನಡೆಯ ಮೇಲೆ ಮಾಜಿ ಸಚಿವ ಆನಂದ ಸಿಂಗ್ ಕಣ್ಣಿಟ್ಟಿದ್ದರು. ಕೊನೆಗೂ ಯಶಸ್ಸು ಕಂಡರು.ಕಾಂಗ್ರೆಸ್‌ನ ಒಡಕು ಬಹಿರಂಗ:
ಕಾಂಗ್ರೆಸ್ ಪಕ್ಷಕ್ಕೆ ಶಾಸಕ ಎಚ್.ಆರ್. ಗವಿಯಪ್ಪ ಗೌರವ ಕೊಡುತ್ತಿಲ್ಲ. ನಗರಸಭೆ ಚುನಾವಣೆಯಲ್ಲಿ ಅವರಿಂದ ಎಳ್ಳಷ್ಟೂ ಸಹಕಾರ ಸಿಕ್ಕಿಲ್ಲ. ನಗರಸಭೆ ಚುನಾವಣೆ ಬೆಳವಣಿಗೆ ಕುರಿತು ಕೆಪಿಸಿಸಿಗೆ ದೂರು ಸಲ್ಲಿಸುವೆ ಎನ್ನುತ್ತಾರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿರಾಜ್ ಶೇಕ್.