ಶಿರಸಿ:
ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ಅವರ ಮನೆ ಮುಂದೆ ಭಾನುವಾರ ಐದು ನೂರಕ್ಕೂ ಅಧಿಕ ಕಾರ್ಯಕರ್ತರು, ಅಭಿಮಾನಿಗಳು ಜಮಾಯಿಸಿ ಇಂಥದೊಂದು ಮನವಿ ಮಾಡಿದರು.
ಮುಂಬರುವ ಲೋಕಸಭೆಗೆ ಮತ್ತೆ ಸ್ಪರ್ಧಿಸಲು ಹಿಂದೇಟು ಹಾಕುತ್ತಿರುವ ಅವರನ್ನು ಒಪ್ಪಿಸಲು ಹರಸಾಹಸ ನಡೆಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿರದ ಅನಂತಕುಮಾರ ಹೆಗಡೆ ಈ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಬಗ್ಗೆ ನಿರಾಸಕ್ತಿ ವ್ಯಕ್ತಪಡಿಸಿದ್ದರು. ಆದರೆ, ಅವರ ಅಭಿಮಾನಿಗಳು ಅವರ ನಿರ್ಧಾರ ಒಪ್ಪಿಕೊಂಡಿಲ್ಲ.ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿಯಾಗಿರುವ ಅನಂತಕುಮಾರ ಹೆಗಡೆ ರಾಷ್ಟ್ರಾಭಿಮಾನದ ಖಡಕ್ ಮಾತು, ಚಿಂತನೆಗಳ ಮೂಲಕವೇ ಜಿಲ್ಲೆಯ ಮನೆ ಮಾತಾಗಿದ್ದಾರೆ. ಹೀಗಾಗಿ ಅವರೇ ಮತ್ತೆ ಸಕ್ರಿಯರಾಗಬೇಕು, ಅಭ್ಯರ್ಥಿಯಾಗಬೇಕು ಎಂಬುದು ಅಭಿಮಾನಿಗಳ ಆಶಯವಾಗಿತ್ತು.
ಎಂಟು ಕ್ಷೇತ್ರಗಳಲ್ಲಿ ಹೊಸಬರು ಬೇಕೆಂದ್ರೆ ಮುಖ ಪರಿಚಯ ಆದರೂ ಇರಬೇಕು. ಕಿತ್ತೂರು-ಖಾನಾಪುರದಲ್ಲಿ ಅನಂತಕುಮಾರ ಹೆಗಡೆ ಹೆಸರು ಕೇಳಿ ವೋಟ್ ಹಾಕುತ್ತಾರೆ ಎಂದು ಕಿತ್ತೂರು ಭಾಗದ ಅಭಿಮಾನಿಗಳು ಆಗ್ರಹ ವ್ಯಕ್ತಪಡಿಸಿದರು. ನಾವು ನಿಮ್ಮ ಜತೆ ರಕ್ತ ಹಂಚಿಕೊಂಡು ಬಂದವರು. ಆತ್ಮೀಯತೆಯಿಂದ ಕೇಳುತ್ತೇವೆ. ಕುಟುಂಬದ ಸದಸ್ಯನ್ನಾಗಿ ಜಿಲ್ಲೆ ನೋಡಿದೆ. ಮನೆ ಮಗನನ್ನಾಗಿ ನೋಡಿದೆ. ನೀವು ಸ್ಪರ್ಧಿಸಿದರಷ್ಟೇ ಬಿಜೆಪಿಗೆ ಶಕ್ತಿ ಬರಲಿದೆ ಎಂದು ಇನ್ನು ಕೆಲವು ಅಭಿಮಾನಿಗಳು ಆಗ್ರಹಿಸಿದರು.ಸುಮಾರು ಮುಕ್ಕಾಲು ತಾಸು ಚರ್ಚೆಯ ಬಳಿಕ ಮಾತನಾಡಿದ ಅನಂತಕುಮಾರ ಹೆಗಡೆ, ಚುನಾವಣೆಗೆ ಇನ್ನೂ ಸಮಯ ಇದೆ. ರಾಮಜನ್ಮ ಭೂಮಿಯಲ್ಲಿ ಮಂದಿರ ಉದ್ಘಾಟನೆ ಕಾರ್ಯಕ್ರಮಗಳೆಲ್ಲ ಮುಗಿಯಲಿ, ಎಲ್ಲ ಒಮ್ಮೆ ಕುಳಿತು ಮಾತಾಡೋಣ. ಎಲ್ಲರ ತೀರ್ಮಾನ ಹೇಗಿದೆ ಹಾಗೇ ಆಗಲಿ. ಕಾರ್ಯಕರ್ತರ ಅಭಿಪ್ರಾಯ ಕಡೆಗಣಿಸುವುದೂ ಮೂರ್ಖತನವಾಗುತ್ತದೆ ಎಂದರು.
ಈ ವೇಳೆ ಅಭಿಮಾನಿಗಳಾದ ಮಾರುತಿ ನಾಯ್ಕ, ಸುಬ್ರಾಯ ವಾಳ್ಕೆ, ಗಜು ನಾಯ್ಕ, ಸುಧೀರ ಕೊಂಡ್ಲಿ, ಬಲರಾಮ ನಾಮಧಾರಿ ಸೇರಿದಂತೆ ಹಲವರು ಇದ್ದರು.ಹೊನ್ನಾವರ, ಕರ್ಕಿ, ಮಂಕಿ ಭಾಗದ ಅಭಿಮಾನಿಗಳು ಶ್ರೀಕುಮಾರ ಸಮೂಹ ಸಂಸ್ಥೆಗಳ ಮುಖ್ಯಸ್ಥ ವೆಂಕಟ್ರಮಣ ಹೆಗಡೆ ಅವರ ನೇತೃತ್ವದಲ್ಲಿ ಆಗಮಿಸಿ ಅನಂತಕುಮಾರ ಅವರನ್ನು ಭೇಟಿಯಾಗಿ ಚುನಾವಣೆಗೆ ಸ್ಪರ್ಧಿಸಲು ಒಪ್ಪಿಕೊಳ್ಳುವಂತೆ ವಿನಂತಿಸಿದರು.