ಕನ್ನಡಪ್ರಭ ವಾರ್ತೆ ಅಥಣಿ
ವಿಶೇಷ ಚೇತನ ಮಕ್ಕಳಿಗೆ ಅನುಕಂಪದ ಜೊತೆಗೆ ಅವಕಾಶಗಳನ್ನು ನೀಡಿ ಪ್ರೋತ್ಸಾಹಿಸಿದರೆ ಅವರು ಕೂಡ ಸಾಮಾನ್ಯರಂತೆ ಸಾಧಕರಾಗಿ ಬೆಳೆಯಬಲ್ಲರು ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು. ಅವರು ಶನಿವಾರ ಪಟ್ಟಣದ ವಿಕ್ರಂಪೂರ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸಮೂಹ ಸಂಪನ್ಮೂಲ ಕೇಂದ್ರ ಇವರ ಸಹಯೋಗದಲ್ಲಿ ವಿಶೇಷ ಚೇತನ ಮಕ್ಕಳಿಗೆ ವೈದ್ಯಕೀಯ ಸಲಕರಣೆಗಳನ್ನು ವಿತರಿಸಿ ಮಾತನಾಡಿದರು. ವಿಶೇಷ ಚೇತನ ಮಕ್ಕಳಲ್ಲೂ ಕೂಡ ವಿಶೇಷ ಪ್ರತಿಭೆಗಳು ಇರುತ್ತವೆ. ಅವರ ಆರೋಗ್ಯದ ಕಾಳಜಿಯ ಜೊತೆಗೆ ಅವರಿಗೆ ತಿಳಿಯುವ ರೀತಿಯಲ್ಲಿ ಶಿಕ್ಷಣ ನೀಡಿದಾಗ ಅವರು ಕೂಡ ತಮ್ಮ ತಮ್ಮ ಪ್ರತಿಭೆ ತೋರಿಸುತ್ತಾರೆ. ಇಂತಹ ಮಕ್ಕಳ ಶಿಕ್ಷಣ ಮತ್ತು ಆರೋಗ್ಯ ವಿಚಾರದಲ್ಲಿ ಸರ್ಕಾರ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ನಾನು ವೈಯಕ್ತಿಕ ಸಹಾಯ ನೀಡುತ್ತೇನೆ ಎಂದು ಹೇಳಿದರು.ಕ್ಷೇತ್ರ ಸಮೂಹ ಸಂಪನ್ಮೂಲ ಕೇಂದ್ರ ಸಂಕೋನಟ್ಟಿ ಹಾಗೂ ಅಲಿಂಕೊ ದೆಹಲಿ ಸಂಸ್ಥೆಯ ಆಶ್ರಯದಲ್ಲಿ ಈಚೆಗೆ ವಿಶೇಷ ಚೇತನ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. ತಾಲೂಕಿನ 193 ಮಕ್ಕಳಿಗೆ ವೈದ್ಯಕೀಯ ಸಲಕರಣೆಗಳು ಸರಬರಾಜು ಆಗಿದ್ದು, ಅವುಗಳನ್ನು ಶಾಸಕ ಲಕ್ಷ್ಮಣ ಸವದಿ ಅವರು ವಿತರಿಸುತ್ತಿದ್ದಾರೆ ಎಂದು ಸಮನ್ವಯ ಅಧಿಕಾರಿ ಗೌಡಪ್ಪ ಖೋತ ಹೇಳಿದರು.ಈ ವೇಳೆ ಚಿಕ್ಕೋಡಿ ಉಪ ವಿಭಾಗಾಧಿಕಾರಿ ಸುಭಾಷ್ ಸಂಪಗಾವಿ, ತಹಸೀಲ್ದಾರ ವಾಣಿ. ಯು, ತಾ.ಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ ಮೋರಟಗಿ, ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಜಿ.ಎ.ಖೋತ, ಶಿಕ್ಷಣ ಸಂಯೋಜಕ ಎಸ್.ಪಿ ಸನದಿ, ಐ.ಎಸ್ ಹಂಪಣ್ಣವರ, ಎ.ಎಚ್ ಮುಜಾವರ, ಎನ್.ಎಂ ಹಿರೇಮಠ, ಎಸ್.ಎ ಚೌಗುಲಾ, ಪುರಸಭೆ ಸದಸ್ಯ ರಿಯಾಜ ಸನದಿ, ಎಸ್‌ಡಿಎಂಸಿ ಅಧ್ಯಕ್ಷ ರಾಕೇಶ್ ಮೈಗೂರ ಸೇರಿದಂತೆ ಶಿಕ್ಷಕರು ಮತ್ತು ಮಕ್ಕಳು ಇದ್ದರು.ಫೋಟೋ ಶೀರ್ಷಿಕೆ : ಅಥಣಿಯ ವಿಕ್ರಂಪೂರ ಸರ್ಕಾರಿ ಕನ್ನಡ ಶಾಲೆಯ ಆವರಣದಲ್ಲಿ ವಿಶೇಷ ಚೇತನ ಮಕ್ಕಳಿಗೆ ವೈದ್ಯಕೀಯ ಸಲಕರಣೆಯನ್ನು ಶಾಸಕ ಲಕ್ಷ್ಮಣ ಸವದಿ ವಿತರಣೆ ಮಾಡಿದರು.(24ಅಥಣಿ 05)