ಬಳ್ಳಾರಿ: ನಗರದ ರಾಘವೇಂದ್ರ ಕಾಲನಿಯಲ್ಲಿನ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಡಿ. 27ರಂದು 41ನೇ ವರ್ಷದ ಮಂಡಲಪೂಜೆ ಹಾಗೂ ಭಕ್ತಿಸಂಗೀತ ಸಂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಗುಪ್ತ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 27ರಂದು ಜರುಗುವ ಮಂಡಲಪೂಜೆ ಅಂಗವಾಗಿ ವಿವಿಧ ಪೂಜಾ ಕೈಂಕರ್ಯಗಳು ಜರುಗಲಿವೆ. ಬೆಳಗ್ಗೆ 6 ಗಂಟೆಗೆ ಧ್ವಜಾರೋಹಣ, ವಿಶೇಷ ಅಷ್ಟದ್ರವ್ಯಾಭಿಷೇಕ, ಗಣಪತಿಹೋಮ, ಮೃತ್ಯುಂಜಯ ಹೋಮ, ನವಗ್ರಹಹೋಮ, ಅಯ್ಯಪ್ಪಸ್ವಾಮಿ ಹೋಮ, ಸುದರ್ಶನ ಹೋಮ ಹಾಗೂ ಶಿವನಿಗೆ ರುದ್ರಾಭಿಷೇಕ ನಡೆಯಲಿದೆ. ಬಳಿಕ ಮಹಾಮಂಗಳಾರತಿ ಜರುಗಲಿದ್ದು, ತದನಂತರದಲ್ಲಿ ಅಯ್ಯಪ್ಪ ಮಾಲಾಧಾರಿಗಳಿಂದ ಲಕ್ಷಾರ್ಚನೆ, ಭಜನೆ ಮತ್ತಿತರ ಧಾರ್ಮಿಕ ವಿಧಿ ವಿಧಾನಗಳು ದೇವಸ್ಥಾನದಲ್ಲಿ ನಡೆಯಲಿವೆ ಎಂದರು.ಸಂಜೆ 6 ಗಂಟೆಗೆ ದೇವಸ್ಥಾನ ಮುಂಭಾಗದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಜೀ ಕನ್ನಡ ವಾಹಿನಿ ಸರಿಗಮಪ ಖ್ಯಾತಿಯ ಗಾಯಕಿ ಸೃಷ್ಟಿ ಸುರೇಶ್ ಅವರು ವಿವಿಧ ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ 14 ಭಕ್ತಿಗೀತೆಗಳನ್ನು ಹಾಡಲಿದ್ದಾರೆ. ಸಂಜೆಯ ಭಕ್ತಿಸಂಗೀತ ಸಂಜೆ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಚಾಲನೆ ನೀಡಲಿದ್ದಾರೆ. ನಗರ ಶಾಸಕ ನಾರಾ ಭರತ್ ರೆಡ್ಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.
ಅಯ್ಯಪ್ಪಸ್ವಾಮಿ ದೇವಸ್ಥಾನದ ವೈಶಿಷ್ಟ್ಯ:ಶಬರಿಮಲೆಯ ತದ್ರೂಪಿಯಾಗಿ ಬಳ್ಳಾರಿಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಿಸಲಾಗಿದೆ. ಈ ರೀತಿಯ ದೇವಸ್ಥಾನ ಬಳ್ಳಾರಿಯಲ್ಲಿ ಬಿಟ್ಟರೆ ದೇಶದಲ್ಲಿ ಎಲ್ಲೂ ಇಲ್ಲ ಎಂಬುದು ಗಮನಾರ್ಹ ಸಂಗತಿ. ಇಲ್ಲಿ ಮಹಿಳೆಯರು ಸಹ ಅಯ್ಯಪ್ಪಸ್ವಾಮಿಯ ದರ್ಶನ ಪಡೆದು ಪುನೀತರಾಗಬಹುದು.
ಎಲ್ಲರಿಗೂ ಅಯ್ಯಪ್ಪನ ದರ್ಶನವಾಗಬೇಕು ಎಂಬ ಉದ್ದೇಶದಿಂದಲೇ ಬಳ್ಳಾರಿಯಲ್ಲಿ ದೇವಸ್ಥಾನ ನಿರ್ಮಾಣದ ಪ್ರೇರಣೆಯಾಗಿದೆ ಎಂದು ದೇವಸ್ಥಾನದ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಗುಪ್ತ ತಿಳಿಸಿದರು.ಅಯ್ಯಪ್ಪಸ್ವಾಮಿ ಮೂರ್ತಿಯನ್ನು ಪಂಚಲೋಹದಲ್ಲಿ ನಿರ್ಮಿಸಲಾಗಿದೆ. ಶಬರಿಮಲೆಯಂತೆ ಒಂದಿಂಚೂ ವಿನ್ಯಾಸ ಬದಲಿಸದೆ ಯಥಾವತ್ತಾಗಿ ದೇವಸ್ಥಾನ ನಿರ್ಮಾಣಗೊಂಡಿದೆ. ಶಬರಿಮಲೆಯಲ್ಲಿ ಜರುಗುವ ಎಲ್ಲ ಪೂಜೆಗಳು ಅದೇ ಸಮಯಕ್ಕೆ ಇಲ್ಲಿಯೂ ನಡೆಯುತ್ತವೆ. ವಿಶೇಷ ಹಬ್ಬ ಹರಿದಿನಗಳಲ್ಲಿ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ಜರುಗುತ್ತವೆ ಎಂದರು.
ದೇವಸ್ಥಾನದ ಟ್ರಸ್ಟಿಗಳಾದ ಎಚ್.ಎಂ. ಮಂಜುನಾಥ್, ಎ. ಮಹೇಶ್ ಕುಮಾರ್, ಗಾಯಕಿ ಸೃಷ್ಟಿ ಸುರೇಶ್, ವಿಮ್ಸ್ ಆಸ್ಪತ್ರೆಯ ಅಧೀಕ್ಷಕ ಡಾ. ಸುರೇಶ್, ಪತ್ನಿ ಸುನಿತಾ ಸುದ್ದಿಗೋಷ್ಠಿಯಲ್ಲಿದ್ದರು.