ಪದ್ಯಾಣ ಶಂಕರನಾರಾಯಣ ಭಟ್‌ಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Dec 25, 2023, 01:30 AM ISTUpdated : Dec 25, 2023, 01:31 AM IST
ಪದ್ಯಾಣ ಶಂಕರನಾರಾಯಣ ಭಟ್‌ಗೆ ಕೀರಿಕ್ಕಾಡು ಪ್ರಶಸ್ತಿ ಪ್ರದಾನ | Kannada Prabha

ಸಾರಾಂಶ

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 79ನೇ ವಾರ್ಷಿಕೋತ್ಸವ ಹಾಗೂ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ 79ನೇ ವಾರ್ಷಿಕೋತ್ಸವ, ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ

ಪ್ರದಾನ, ನೃತ್ಯ ವೈವಿಧ್ಯ ಭಜನೆ, ಯಕ್ಷಗಾನ ತಾಳಮದ್ದಳೆ, ಯಕ್ಷಗಾನ ಬಯಲಾಟ ಕಾರ್ಯಕ್ರಮಗಳು ಶನಿವಾರ ದೇಲಂಪಾಡಿ ಬನಾರಿಯ ಕೀರಿಕ್ಕಾಡು ಸ್ಮಾರಕ ಯಕ್ಷಗಾನ ಸಾಂಸ್ಕೃತಿಕ ಅಧ್ಯಯನ ಕೇಂದ್ರದಲ್ಲಿ ನಡೆಯಿತು.

ನಿವೃತ್ತ ಪ್ರಾಂಶುಪಾಲ ರಾಜೇಂದ್ರ ಕಲ್ಲೂರಾಯ ಎಡನೀರು ಅಧ್ಯಕ್ಷತೆಯಲ್ಲಿ ನಡೆದ ಕೀರಿಕ್ಕಾಡು ಸಂಸ್ಮರಣೆ, ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖ್ಯಾತ ಹಿರಿಯ ಮದ್ದಳೆಗಾರರಾದ ಪದ್ಯಾಣ ಶಂಕರನಾರಾಯಣ ಭಟ್ ಅವರಿಗೆ ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ ಅವರ ಸಂಸ್ಮರಣಾರ್ಥ ನೀಡಲಾಗುವ ಕೀರಿಕ್ಕಾಡು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.ಅರ್ಥಧಾರಿಗಳು, ಸಾಹಿತಿ ಮತ್ತು ವಿಮರ್ಶಕರಾದ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಅಭಿನಂದನಾ ಭಾಷಣ ಮಾಡಿದರು.

ಹಿರಿಯ ಕವಯಿತ್ರಿ ಸತ್ಯವತಿ ಎಸ್. ಭಟ್ ಕೊಳಚೆಪ್ಪು ಅವರು ಕೀರಿಕ್ಕಾಡು ಸಂಸ್ಮರಣಾ ಭಾಷಣ ಮಾಡಿದರು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾಸಂಘದ ಅಧ್ಯಕ್ಷ ಡಾ.ಕೆ.ರಮಾನಂದ ಬನಾರಿ ಸ್ವಾಗತಿಸಿದರು. ಕಾರ್ಯದರ್ಶಿ ವಿಶ್ವವಿನೋದ ಬನಾರಿ ಸನ್ಮಾನ ಪತ್ರ ವಾಚಿಸಿದರು. ರಾಮಣ್ಣ ಮಾಸ್ತರ್ ದೇಲಂಪಾಡಿ ವಂದಿಸಿದರು‌. ನಾರಾಯಣ ದೇಲಂಪಾಡಿ ಕಾರ್ಯಕ್ರಮ ನಿರೂಪಿಸಿದರು.

ವಿವಿಧ ಕಾರ್ಯಕ್ರಮಗಳು:

ದಿನಪೂರ್ತಿ ನಡೆದ ವಾರ್ಷಿಕೋತ್ಸವದ ಅಂಗವಾಗಿ ಬೆಳಗ್ಗೆ ಗಣಹೋಮ, ಶ್ರೀ ಗೋಪಾಲಕೃಷ್ಣ ದೇವರ ಪೂಜೆ ನಡೆಯಿತು. ಬಳಿಕ ರಾಮಕೃಷ್ಣ ಕಾಟುಕುಕ್ಕೆ ಮಾರ್ಗದರ್ಶನದಲ್ಲಿ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಬನಾರಿ ಮತ್ತು ಶ್ರೀ ವಾಗ್ಲೆವಿ ಭಜನಾ ಮಂಡಳಿ ಕಾವು ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಸಂಘದ ಮಹಿಳಾ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ‘ಸಮರ ಸನ್ನಾಹ’ ದೇಲಂಪಾಡಿ ಶಾಲಾ ಮಕ್ಕಳಿಂದ ‘ನೃತ್ಯ ವೈವಿಧ್ಯ’ ಬನಾರಿ ಅಂಗನವಾಡಿಯ ಪುಟಾಣಿಗಳಿಂದ ‘ಚಿಣ್ಣರ ಚಿಲಿಪಿಲಿ’ ನಡೆಯಿತು.

ಸಂಜೆ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ ‘ವಿಭೀಷಣ ನೀತಿ’ ಜರುಗಿತು.

ರಾತ್ರಿ ನೃತ್ಯಗುರುಗಳಾದ ಸರೋಜಿನಿ ಬನಾರಿ ಅವರ ನಿರ್ದೇಶನದಲ್ಲಿ ಸಂಘದ ಉದಯೋನ್ಮುಖ ಪ್ರತಿಭೆಗಳಿಂದ ಯಕ್ಷಗಾನ ಬಯಲಾಟ ‘ಶಕಟಾಸುರ ವಧೆ’, ‘ತರಣಿಸೇನ ಕಾಳಗ’, ‘ಗಿರಿಜಾ ಕಲ್ಯಾಣ’ ನಡೆಯಿತು.

PREV

Recommended Stories

2028ರ ವರೆಗೂ ಸಿದ್ದರಾಮಯ್ಯ ಸಿಎಂ : ಸಚಿವ ಜಮೀರ್ ಅಹ್ಮದ್
ನಾವು ಆರೆಸ್ಸೆಸ್‌ ಗುಲಾಮರಲ್ಲ : ಪ್ರಿಯಾಂಕ್‌ ಖರ್ಗೆ