ನಾಳೆ ಶಿರಾ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

KannadaprabhaNewsNetwork | Updated : Dec 25 2023, 01:31 AM IST

ಸಾರಾಂಶ

ಶಿರಾ ತಾಲೂಕಿನಲ್ಲಿ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ.

ತಾಲೂಕು ಕಸಾಪ ಅಧ್ಯಕ್ಷ ಪಾಂಡುರಂಗಯ್ಯ ಮಾಹಿತಿ । ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜನೆ

ಕನ್ನಡಪ್ರಭ ವಾರ್ತೆ ಶಿರಾ

ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಡಿ. 26 ರಂದು ನಗರದ ಶ್ರೀ ವಿವೇಕಾನಂದ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಹೇಳಿದರು.

ನಗರದ ಕನ್ನಡ ಭವನದಲ್ಲಿ ಪತ್ರಿಕಾಗೊಷ್ಠಿ ನಡೆಸಿ ಮಾತನಾಡಿದ ಅವರು, ಡಿ.26ರ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಲಿದೆ. ನಂತರ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಭುವನೇಶ್ವರಿ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಚ.ಹ. ರಘುನಾಥ್ ಅವರ ಮೆರವಣಿಗೆ ನಡೆಯಲಿದೆ. ಅಂಬೇಡ್ಕರ್ ವೃತ್ತದಿಂದ ಕಲ್ಯಾಣ ಮಂಟಪ, ಖಾಸಗಿ ಬಸ್ ನಿಲ್ದಾಣ, ಹಳೆ ರಾ.ಹೆ. ಮೂಲಕ ಶ್ರೀ ವಿವೇಕಾನಂದ ಕ್ರೀಡಾಂಗಣದ ಕಸ್ತೂರಿ ರಂಗಪ್ಪನಾಯಕನ ವೇದಿಕೆಗೆ ಕರೆತರಲಾಗುವುದು. ಸಮ್ಮೇಳನದ ಉದ್ಘಾಟನೆಯಲ್ಲಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ವಿಧಾನಪರಿಷತ್ ಸದಸ್ಯ ಚಿದಾನಂದ್ ಎಂ.ಗೌಡ, ಆರ್. ರಾಜೇಂದ್ರ, ವೈ.ಎ. ನಾರಾಯಣಸ್ವಾಮಿ, ಕೆ.ಎ. ತಿಪ್ಪೇಸ್ವಾಮಿ ಸೇರಿದಂತೆ ಹಲವು ಗಣ್ಯರು ಭಾಗವಹಿಸುವರು. ಮಧ್ಯಾಹ್ನ ವಿಚಾರಗೋಷ್ಠಿ ಹಾಗೂ ಕವಿ ಗೋಷ್ಠಿ ನಡೆಯಲಿದೆ. ತಾಲೂಕಿನ ವಿವಿಧ ಭಾಗಗಳಿಂದ ಸುಮಾರು 20 ಕ್ಕೂ ಹೆಚ್ಚು ಕವಿಗಳು, ಸಾಹಿತಿಗಳು ಭಾಗವಹಿಸುವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಗೌರವ ಪುರಸ್ಕಾರ ನಡೆಯಲಿದೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. ರಾತ್ರಿ 8 ಗಂಟೆಯಿಂದ 12 ಗಂಟೆಯವರೆಗೆ ಕನ್ನಡ ಗೀತ ಗಾಯನ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಶಿರಾ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಸ್ಥಾಯಿ ಸಮಿತಿ ಅಧ್ಯಕ್ಷರು ಉತ್ತಮ ಸಹಕಾರ ನೀಡಿದ್ದು, ಎಲ್ಲಾ ಇಲಾಖೆಗಳು, ಜನಪ್ರತಿನಿಧಿಗಳು, ನಗರಸಭೆ, ಕನ್ನಡಪರ ಸಂಘಟನೆಗಳು, ಇತರ ಸಂಘಸಂಸ್ಥೆಗಳು ನೆರವನ್ನು ಕೊಟ್ಟು ಸಹಕಾರ ನೀಡಿದ್ದಾರೆ. ಸಡಗರದಿಂದ ಕನ್ನಡ ಹಬ್ಬ ನಡೆಯಲಿದ್ದು, ಸಮ್ಮೇಳನಕ್ಕೆ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ ಗೌರವ ಕಾರ್ಯದರ್ಶಿ ಡಿ.ಎಚ್. ಪರಮೇಶ್ ಗೌಡ, ಕಸಬಾ ಹೋಬಳಿ ಘಟಕದ ಅಧ್ಯಕ್ಷೆ ರೇಣುಕಮ್ಮ, ಶಿಕ್ಷಕ ದೊಡ್ಡಯ್ಯ ಸೇರಿದಂತೆ ಹಲವರು ಹಾಜರಿದ್ದರು.

ಬಾಕ್ಸ್..............

ಸಮ್ಮೇಳನಾಧ್ಯಕ್ಷರಾದ ರಘುನಾಥ ಚ.ಹ. ಆಯ್ಕೆ

ಶಿರಾ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ರಘುನಾಥ.ಚ.ಹ ಅವರು ಆಯ್ಕೆಯಾಗಿದ್ದು, ರಘುನಾಥ.ಚ.ಹ ಅವರು ಕನ್ನಡ ಎಂ.ಎ., ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಡಿಪ್ಲೊಮ ಹಾಗೂ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಜಾವಾಣಿ ಬಳಗದ ಸುಧಾ, ಮಯೂರ ಪತ್ರಿಕೆಗಳ ಕಾರ್ಯ ನಿರ್ವಾಹಕ ಸಂಪಾದಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೊಳೆಯಲ್ಲಿ ಹರಿದ ನೀರು (ಕವಿತೆಗಳು), ಹೊರಗೂ ಮಳೆ ಒಳಗೂ ಮಳೆ(ಕಥೆಗಳು), ರಾಗಿಮುದ್ದೆ (ಪ್ರಬಂಧ ಸಂಕಲನ), ಚೆಲ್ಲಾಪಿಲ್ಲಿ(ಲೇಖನಗಳು), ವಿಶ್ವರೂಪ (ಕಾರ್ಟೂನ್‌ಗಳ ಇತಿಹಾಸ) ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.ಫೋಟೊ

ಶಿರಾ ನಗರದ ಕನ್ನಡ ಭವನದಲ್ಲಿ ಕಸಾಪ ಅಧ್ಯಕ್ಷ ಬಿ.ಪಿ.ಪಾಂಡುರಂಗಯ್ಯ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.24ಶಿರಾ6:

ಸಮ್ಮೇಳನಾಧ್ಯಕ್ಷರಾದ ರಘುನಾಥ.ಚ.ಹ

Share this article