ಕನ್ನಡಪ್ರಭ ವಾರ್ತೆ ಹಾನಗಲ್ಲ
ರಂಗಭೂಮಿ ಸಾಮಾಜಿಕ ಹೊಣೆಗಾರಿಕೆಯೊಂದಿಗೆ ನಮ್ಮ ಸಂಸ್ಕೃತಿ ಇತಿಹಾಸವನ್ನು ವರ್ತಮಾನಕ್ಕೆ ಕಟ್ಟಿಕೊಡುವ ಜವಾಬ್ದಾರಿಯುತ ಮಾಧ್ಯಮ ಎಂದು ಸಾಹಿತಿ ಸತೀಶ ಕುಲಕರ್ಣಿ ತಿಳಿಸಿದರು.ತಾಲೂಕಿನ ಶೇಷಗಿರಿಯ ಸಿ.ಎಂ. ಉದಾಸಿ ಕಲಾಕ್ಷೇತ್ರದಲ್ಲಿ ಬೆಂಗಳೂರಿನ ರಂಗಶಂಕರ, ಶೇಷಗಿರಿ ಕಲಾ ತಂಡದ ಸಹಯೋಗದಲ್ಲಿ ಆಯೋಜಿಸಿದ ೬ ದಿನಗಳ ಯುವ ರಂಗ ತರಬೇತಿ ಶಿಬಿರ ಹಾಗೂ ಕನ್ನಡ ನಾಟಕೋತ್ಸವ-೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಯುವ ಪೀಳಿಗೆಗೆ ರಂಗ ದರ್ಶನದ ಅಗತ್ಯವಿದೆ. ಹೊಸ ತಲೆಮಾರಿಗೆ ರಂಗಭೂಮಿಯ ಕನಸು ಕಟ್ಟಬೇಕು. ಪರಿಶ್ರಮವಿದ್ದರೆ ಎಲ್ಲವೂ ಸಾಧ್ಯ ಎಂಬುದಕ್ಕೆ ಶೇಷಗಿರಿ ರಂಗ ಸಾಧನೆಯೇ ಸಾಕ್ಷಿ. ರಂಗ ಪ್ರೀತಿಯ ವಿಸ್ತಾರದಿಂದ ವೈಚಾರಿಕ ಸಂಗತಿಗಳನ್ನು ಜನಮಾನಸಕ್ಕೆ ಸುಲಭವಾಗಿ ತಲುಪಿಸಲು ಸಾಧ್ಯ ಎಂದರು.
ಬೆಂಗಳೂರಿನ ರಂಗ ಶಂಕರ ನಿರ್ದೇಶಕ ಸುರೇಂದ್ರನಾಥ ಮುಖ್ಯ ಅತಿಥಿಯಾಗಿ ಮಾತನಾಡಿ, ಈಗಿನ ಕಾಲದ ಹುಡುಗರಿಗೆ ನಾಟಕ ಜಗತ್ತನ್ನು ಪರಿಚಯಿಸಿ, ಪ್ರೋತ್ಸಾಹಿಸುವ ಹೊಣೆ ಎಲ್ಲರದ್ದಾಗಬೇಕು. ಹೊಸ ಹೊಸ ಅಭಿಯಾನಗಳ ಮೂಲಕ ರಂಗ ವಿಸ್ತಾರಕ್ಕೆ ಆದ್ಯತೆ ನೀಡಲಾಗುತ್ತಿದೆ. ನಾಟಕಗಳ ಯಶಸ್ಸು ಸಹೃದಯರ ರಂಗಾಸಕ್ತಿ ಹಾಗೂ ಬೆಂಬಲದ ಜೊತೆಗೆ ಕಲಾವಿದರ ಕೌಶಲ್ಯ ಅತ್ಯಂತ ಮುಖ್ಯ. ಶೇಷಗಿರಿಯ ರಂಗ ನಡೆ ನಾಡಿಗೆ ಒಳ್ಳೆಯ ಸಂದೇಶಕ್ಕೆ ಸಾಕ್ಷಿಯಾಗಿದೆ. ರಂಗವನ್ನು ಬೆಂಬಲಿಸಿದರೆ ಉತ್ತಮ ಸಮಾಜ ನಿರ್ಮಾಣವನ್ನು ಬೆಂಬಲಿಸಿದಂತೆ ಎಂದರು.ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ ಮಾತನಾಡಿ, ಶೇಷಗಿರಿ ವರ್ಷವಿಡೀ ರಂಗಧ್ಯಾನದಲ್ಲಿ ತಲ್ಲೀನವಾಗಿರುತ್ತದೆ. ಈ ರಂಗ ಗ್ರಾಮದ ಪ್ರತಿ ಮನೆ ರಂಗ ಪ್ರೀತಿಯ ಮೊತ್ತವಾಗಿದೆ. ಎಂಥ ಕಠಿಣ ನಾಟಕಗಳನ್ನೂ ಅರ್ಥೈಸಿಕೊಂಡು ವಿಮರ್ಶಿಸುವ ಸಹೃದಯರು ಇಲ್ಲಿದ್ದಾರೆ. ಈ ಹಳ್ಳಿಯ ಹುಡುಗರ ರಂಗಾಟ ಹುಬ್ಬೇರಿಸುವಂತಹದ್ದು ಕೇಂದ್ರ ಎಂದರು.
ಸಮಾಜ ಸೇವಕ ರಾಜಶೇಖರ ಕಟ್ಟೆಗೌಡ್ರ, ಶಿವಲಿಂಗಪ್ಪ ತಲ್ಲೂರ, ಉದ್ಯಮಿ ಅಮರೇಂದ್ರನಾಥ, ಸಾಯಿ ಸಂಸ್ಥೆ ಅಧ್ಯಕ್ಷ ಬಿ.ವಿ. ಬಿರಾದಾರ, ಅಪ್ಪುಶೆಟ್ರ ತಿಳವಳ್ಳಿ, ಗ್ರಾಮದ ಹಿರಿಯರಾದ ಶಂಕ್ರಣ್ಣ ಗುರಪ್ಪನವರ, ಗ್ರಾಪಂ ಸದಸ್ಯರಾದ ಮಂಗಳಾ ಭಂಡಾರಿ, ನಯನಾ ಹರಿಜನ, ಅರುಣ ಕೊಂಡೋಜಿ, ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್, ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಲಾವಿದ ಪ್ರಭು ಗುರಪ್ಪನವರ, ಸಂಚಾಲಕ ನಾಗರಾಜ ಧಾರೇಶ್ವರ, ರಂಗ ನಿರ್ದೇಶಕ ಎಸ್.ಎಲ್. ಸಂತೋಷ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಬೆಂಗಳೂರಿನ ಸಂಚಯ ತಂಡದಿಂದ ಮೂಲ ಮೋಲಿಯೆರ್ ಅವರ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ ಕೃಷ್ಣ ಹಬ್ಬಾರ, ಹೇಮಂತಕುಮಾರ ಅವರ ನಾಟಕ ನಾಟ್ಯದೇವ ಚರಿತೆಯನ್ನು ಪೃಥ್ವಿ ವೇಣುಗೋಪಾಲ ನಿರ್ದೇಶಿಸಿದರು. ನಂತರ ನಡೆದ ಸಂವಾದದಲ್ಲಿ ಪೃಥ್ವಿ ಬೆಟಗೇರಿ, ಈರಣ್ಣ ಬೆಳವಡಿ, ಗೂಳಪ್ಪ ಅರಳೀಕಟ್ಟಿ ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.