ಕಾರವಾರ: ಹೆಚ್ಚು ಕಡಿಮೆ ಮೂರು ದಶಕಗಳ ಕಾಲ ಬಿಜೆಪಿಯಲ್ಲಿ ಪ್ರಭುತ್ವ ಸ್ಥಾಪಿಸಿ, ಬಿಜೆಪಿಗಿಂತ ತಾವೇ ಮೇಲು ಎಂದು ತಮ್ಮ ನಡೆಯಿಂದ ಸಂದೇಶ ನೀಡುತ್ತಿದ್ದ ಅನಂತಕುಮಾರ ಹೆಗಡೆ ಅವರು ಬಿಜೆಪಿಯಲ್ಲಿ ಈಗ ನೇಪಥ್ಯಕ್ಕೆ ಸರಿದಂತಾಗಿದೆ. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿದೆ.
ಸಂಸದರಾಗಿದ್ದೂ ನಾಲ್ಕೂವರೆ ವರ್ಷಗಳ ಕಾಲ ಹೊರಗಡೆ ಕಾಣಿಸಿಕೊಳ್ಳದೆ, ಪಕ್ಷಕ್ಕಾಗಿ ಕಿಂಚಿತ್ತೂ ದುಡಿಯದೆ, ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪ ಎದುರಿಸಿ, ನರೇಂದ್ರ ಮೋದಿ ಅಂಕೋಲಾಕ್ಕೆ ಬಂದರೂ ಗೈರು ಹಾಜರಾಗಿ ಸ್ವಯಂಕೃತಾಪರಾಧದಿಂದ ಟಿಕೆಟ್ ತಪ್ಪಿಸಿಕೊಂಡಿದ್ದು ಈಗ ಇತಿಹಾಸ.ಕಾಗೇರಿ ವಿರುದ್ಧ ಅಪಪ್ರಚಾರ: ಈ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಅನಂತಕುಮಾರ ಹೆಗಡೆ ಸುಮ್ಮನಿದ್ದಂತೆ ಕಂಡಿರಬಹುದು. ಆದರೆ ಅನಂತಕುಮಾರ ಹೆಗಡೆ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಅಭ್ಯರ್ಥಿ ಕಾಗೇರಿ ಅವರ ವಿರುದ್ಧ ನಿರಂತರ ದಾಳಿ ನಡೆಸಿದರು. ಅಪಪ್ರಚಾರ ಮಾಡಿದರು. ಕಾಂಗ್ರೆಸ್ಸಿಗೆ ಕಾಗೇರಿ ವಿರುದ್ಧ ಅಪಪ್ರಚಾರದ ಸರಕು ನೀಡಿದವರೇ ಅನಂತ್ ಬೆಂಬಲಿಗರು ಎನ್ನುವ ಮಾತು ಹರಿದಾಡುತ್ತಿದೆ. ಅನಂತಕುಮಾರ ಹೆಗಡೆ ಬಿಜೆಪಿ ಪರವಾಗಿದ್ದರೆ ತಮ್ಮ ಬೆಂಬಲಿಗರನ್ನು ಸುಮ್ಮನಿರಿಸಬೇಕಿತ್ತು. ಆದರೆ ತುಟಿ ಬಿಚ್ಚಲಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿದೆ.
ರಣಕಣದಿಂದ ಕಣ್ಮರೆ: ಹೆಗಡೆ ಅವರ ಕುಮ್ಮಕ್ಕಿನಿಂದಲೆ ಅವರು ಅಪಪ್ರಚಾರ ನಡೆಸುತ್ತಿದ್ದಾರೆ ಎಂಬ ಭಾವನೆ ಜನತೆಯಲ್ಲಿ ಮೂಡಿತು. ಅವರದೆ ಊರಾದ ಶಿರಸಿಗೆ ಪ್ರಧಾನಿ ನರೇಂದ್ರ ಮೋದಿ ಬಂದರೂ ಹೆಗಡೆ ಸಭೆಗೆ ಆಗಮಿಸಲಿಲ್ಲ. ಟಿಕೆಟ್ ಘೋಷಣೆಗೆ ಮುನ್ನ ಯಾರೇ ಅಭ್ಯರ್ಥಿಯಾಗಲಿ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು. ಕಮಲದ ಗುರುತಿಗೆ ಮತನೀಡಿ ಎಂಬ ಬೊಬ್ಬಿರಿಯುತ್ತಿದ್ದ ಹೆಗಡೆ, ಕಾಗೇರಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಚುನಾವಣೆ ರಣಕಣದಿಂದಲೇ ಕಣ್ಮರೆಯಾದರು.ಈ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೋದಿ ಅವರನ್ನು ಬೆಂಬಲಿಸುವಂತೆ ಸಾಮಾಜಿಕ ಜಾಲತಾಣದಲ್ಲಿ ಅನಂತಕುಮಾರ ಹೆಗಡೆ ಅವರ ಫೋಟೋ ಬಳಸಿ ಪೋಸ್ಟ್ ಮಾಡಿದಾಗ ತಮ್ಮ ಆಪ್ತ ಸಹಾಯಕರ ಮೂಲಕ ಅವರ ವಿರುದ್ಧ ಪೊಲೀಸ್ ಪ್ರಕರಣ ದಾಖಲಿಸಿದರು. ಇವರ ಹೆಸರು ಬಳಸಿದ್ದು ತಪ್ಪಾಗಿರಬಹುದು. ಆದರೆ ಬಿಜೆಪಿಯನ್ನು ಬೆಂಬಲಿಸುವಂತೆ ಇವರೇ ಹೇಳಬಹುದಿತ್ತಲ್ಲ. ಹೋಗಲಿ, ಫೇಸಬುಕ್‌ನಲ್ಲಿ ದಿನಕ್ಕೊಂದು ಚಂದಮಾಮ ಕತೆ ಹೊಸೆಯುತ್ತ ಕುಳಿತರು. ಆದರೆ ಬಿಜೆಪಿಯನ್ನು ಬೆಂಬಲಿಸುವಂತೆ ಒಂದು ಸಾಲೂ ಯಾಕೆ ಬರೆಯಲಾಗಲಿಲ್ಲ ಎನ್ನುವುದು ಬಿಜೆಪಿ ಪಾಳೆಯಲ್ಲಿ ಚರ್ಚೆಯನ್ನು ಹುಟ್ಟುಹಾಕಿತು.
ಪಕ್ಷ ಅವರಿಗೆ ಏಳು ಬಾರಿ ಟಿಕೆಟ್ ನೀಡಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡದೆ, ಮತದಾರರ ಕೈಗೆ ಸಿಗದಿದ್ದರೂ ಸಹಿಸಿಕೊಂಡಿದೆ. ಈಗ ಟಿಕೆಟ್ ನೀಡದಿದ್ದಾಗ ಪಕ್ಷವನ್ನು ಬೆಂಬಲಿಸದ ಅವರ ಮನಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗಿದ್ದಂತೂ ಹೌದು.ಅನಂತ ಅಧ್ಯಾಯ ಸಮಾಪ್ತಿ?
ಈಗ ಬಿಜೆಪಿಗೆ ಅನಂತಕುಮಾರ ಹೆಗಡೆ ಇಲ್ಲದಿದ್ದರೂ ಗೆಲುವು ಸಾಧ್ಯ ಎನ್ನುವುದು ಸಾಬೀತಾಗಿದೆ. ಹೆಗಡೆ ಪಕ್ಷಕ್ಕೆ ಅನಿವಾರ್ಯವಲ್ಲ ಎಂಬ ಸಂದೇಶವನ್ನು ಈ ಫಲಿತಾಂಶ ನೀಡಿದೆ. ಜತೆಗೆ ಬಿಜೆಪಿಯಲ್ಲಿ ಅನಂತಕುಮಾರ ಹೆಗಡೆ ಅಧ್ಯಾಯ ಬಹುತೇಕ ಸಮಾಪ್ತಿಯಾದಂತಾಗಿದೆ.