ಡಿವಿಜಿ ಕನ್ನಡ ಸಾರಸ್ವತಲೋಕದ ಅನರ್ಘ್ಯರತ್ನ

KannadaprabhaNewsNetwork |  
Published : Jul 26, 2024, 01:36 AM ISTUpdated : Jul 26, 2024, 01:37 AM IST
ನರಗುಂದ ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶಿವಾನುಭವ ಕಾರ್ಯಕ್ರಮವನ್ನು ಸಂಸ್ಕೃತ ಶಿಕ್ಷಕ ವೀರಯ್ಯ ಸಾಲಿಮಠ ಉದ್ಘಾಟಿಸಿದರು. | Kannada Prabha

ಸಾರಾಂಶ

ಕರ್ನಾಟಕದ ಸಮೃದ್ಧಿಗಾಗಿ ಶ್ರಮಿಸಿದವರ ಪೈಕಿ ಡಿವಿಜಿ ಅವರು ಅಗ್ರಗಣ್ಯರು. ಭಾಷೆಯ ಮೂರು ಬಗೆಗಳಾದ ಗದ್ಯ, ಪದ್ಯ ಮತ್ತು ಗೀತ ಈ ಮೂರರಲ್ಲಿಯೂ ಗುಂಡಪ್ಪ ಅವರು ಗಣನೀಯವಾದ ಸೇವೆ ಸಲ್ಲಿಸಿದ್ದಾರೆ

ನರಗುಂದ: ಸಾಹಿತಿ, ಕವಿ ಡಿ.ವಿ. ಗುಂಡಪ್ಪ ಅವರು ಕನ್ನಡ ಸಾರಸ್ವತ ಲೋಕದ ಅನರ್ಘ್ಯರತ್ನ ಎಂದು ಶಿಕ್ಷಕ ಸುರೇಶ ಬನ್ನಿಗಿಡದವರು ಹೇಳಿದರು.

ಅವರು ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀ ಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ 360ನೇ ಮಾಸಿಕ ಶಿವಾನುಭವ ಹಾಗೂ ಏಕೀಕರಣ ಯೋಧರ ಯಶೋಗಾಥೆ-16 ಸಮಾರಂಭದಲ್ಲಿ ಮಾತನಾಡಿದರು. ಆಧುನಿಕ ಕನ್ನಡ ಸಾಹಿತ್ಯಕ್ಕೆ ಡಿ.ವಿ. ಗುಂಡಪ್ಪ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. 1907ರಲ್ಲಿ ಭಾರತಿ ಎಂಬ ಪತ್ರಿಕೆ ಪ್ರಾರಂಭಿಸಿ ಪತ್ರಿಕೋದ್ಯಮಕ್ಕೂ ಅದ್ವಿತೀಯ ಕೊಡುಗೆ ನೀಡಿದ್ದಾರೆ. ಡಿವಿಜಿ ಅವರು ಕನ್ನಡಿಗರಿಗೆ ಮಂಕುತಿಮ್ಮನ ಕಗ್ಗ ಎಂಬ ಭಗವದ್ಗೀತೆಯನ್ನು ನೀಡಿದ ಮಹಾನ್ ಕವಿಗಳು ಎಂದು ಹೇಳಿದರು.

ಬಹುಮುಖ ಪ್ರತಿಭೆಯಾಗಿದ್ದ ಗುಂಡಪ್ಪ ಅವರು ಕನ್ನಡ ನಾಡು, ನುಡಿಗೆ ಸಾಹಿತ್ಯದ ಮೂಲಕವಷ್ಟೆ ಅಲ್ಲದೆ ಸಾರ್ವಜನಿಕವಾಗಿಯೂ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಸಮೃದ್ಧಿಗಾಗಿ ಶ್ರಮಿಸಿದವರ ಪೈಕಿ ಡಿವಿಜಿ ಅವರು ಅಗ್ರಗಣ್ಯರು. ಭಾಷೆಯ ಮೂರು ಬಗೆಗಳಾದ ಗದ್ಯ, ಪದ್ಯ ಮತ್ತು ಗೀತ ಈ ಮೂರರಲ್ಲಿಯೂ ಗುಂಡಪ್ಪ ಅವರು ಗಣನೀಯವಾದ ಸೇವೆ ಸಲ್ಲಿಸಿದ್ದಾರೆ. ಅವರನ್ನು ಕನ್ನಡಿಗರು ಎಂದೂ ಮರೆಯುವಂತಿಲ್ಲ ಎಂದರು.

ಶಿರೋಳದ ಯೋಗ ಶಿಕ್ಷಕ ಸುನೀಲ ಕಳಸದ ಮಾತನಾಡಿ, ಡಿ.ವಿ. ಗುಂಡಪ್ಪ ಅವರ ಸಾಹಿತ್ಯದಲ್ಲಿ ಆದರ್ಶಗಳ ಹೂರಣವಿದೆ. ಅದನ್ನು ಸವಿದವರು ಜೀವನದಲ್ಲಿ ಮೌಲ್ಯಯುತ ವ್ಯಕ್ತಿಗಳಾಗಿ ಬದುಕಬಲ್ಲರು. ಕನ್ನಡ ಸಾಹಿತ್ಯ ಎಲ್ಲ ಮಜಲುಗಳನ್ನು ಅರಿತವರಾಗಿದ್ದ ಗುಂಡಪ್ಪ ಅವರು ಮಂಕುತಿಮ್ಮನ ಕಗ್ಗವೆಂಬ ಚೌಪದಿ ಸಾಹಿತ್ಯವನ್ನು ರಚಿಸಿ, ಆಧುನಿಕ ಸರ್ವಜ್ಞ ಎಂದು ಪ್ರಸಿದ್ಧರಾಗಿದ್ದಾರೆ. ಅವರು 1932ರಲ್ಲಿ ಮಡಿಕೇರಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ದೀರ್ಘ ಭಾಷಣವನ್ನು ಮಾಡುವ ಮೂಲಕ ಕನ್ನಡಿಗರಲ್ಲಿ ಜಾಗೃತಿ ಮೂಡಿಸಿದ್ದಾರೆ ಎಂದು ಹೇಳಿದರು.

ವೀರಯ್ಯ ಸಾಲಿಮಠ, ಶಿವಯ್ಯ ಹಿರೇಮಠ, ಅಜ್ಜನಗೌಡ ಪಾಟೀಲ, ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪಿ.ಎಸ್. ಅಣ್ಣಿಗೇರಿ, ಪ್ರೊ. ಆರ್.ಬಿ. ಚಿನಿವಾಲರ, ಶಿಕ್ಷಕರಾದ ಡಿ.ವಿ. ಗದ್ದನಕೇರಿ, ಮಹಾಂತೇಶ ಹಿರೇಮಠ ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ