ಚನ್ನಪಟ್ಟಣ: ನಾಡಿನ ಸಂಸ್ಕೃತಿ ಬಿಂಬಿಸುವ ಪ್ರಾಚೀನ ಕಲೆ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದು ಒಕ್ಕಲಿಗರ ಸಾರ್ವಜನಿಕ ವಿದ್ಯಾರ್ಥಿ ನಿಲಯದ ಸಹ ಕಾರ್ಯದರ್ಶಿ ಎನ್.ಎಂ.ಶಂಭುಗೌಡ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಂ.ಶಿವಮಾದು ಮಾತನಾಡಿ, ಸಂಸ್ಕೃತಿ-ಪರಂಪರೆ ಉಳಿಸಿ, ಬೆಳೆಸಿಕೊಂಡು ಬರುತ್ತಿರುವ ಸಂಘ-ಸಂಸ್ಥೆಗಳನ್ನು ಪ್ರೋತ್ಸಾಹಿಸಬೇಕಿದೆ. ನಮ್ಮ ನೆಲದ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವಂತೆ ಕೆಲಸ ಮಾಡಬೇಕಿದೆ ಎಂದರು.
ನಾಗವಾರ ಗ್ರಾಪಂ ಅಧ್ಯಕ್ಷ ಹರೀಶ್‌ಕುಮಾರ್ ಮಾತನಾಡಿ, ಜನಪದ ಪಠ್ಯದಲ್ಲಿದ್ದು, ನಾಡು ನುಡಿಯ ಅರಿವು ಮುಂದಿನ ಪೀಳಿಗೆಗೆ ತಲುಪಿಸಬೇಕು. ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗದೇ ತಮ್ಮ ದೇಶಿ ಸೊಗಡನ್ನು ಉಳಿಸಬೇಕು ಎಂದು ಹೇಳಿದರು.ಶಾಲೆಯ ಮುಖ್ಯ ಶಿಕ್ಷಕ ಜಯರಾಮು ಮಾತನಾಡಿ, ನಮ್ಮ ಪೂರ್ವಿಕರ ಮತ್ತು ನಮ್ಮ ತಲೆಮಾರಿನವರು ಉಪಯೋಗಿಸುತ್ತಿದ್ದ ಪಳೆಯುಳಿಕೆಗಳನ್ನು ಉಳಿಸಿ ಬೆಳೆಸಲು ಜಾನಪದ ಲೋಕ ಶ್ರಮಿಸುತ್ತಿದ್ದು, ಅದೇ ಮಾದರಿ ಸೃಜನಶೀಲ ಕೆಲಸವನ್ನು ಸಂಘ-ಸಂಸ್ಥೆಗಳು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಜಾನಪದ ಕಲಾವಿದ ಬೇವೂರು ರಾಮಯ್ಯ ಜಾಗೃತಿ ಗೀತೆಗಳೊಂದಿಗೆ ರಂಜಿಸಿದರು. ದೊಡ್ಡಮಳೂರು ಮಹದೇವ ತಂಡ, ಕನಕಪುರ ಶ್ರೀನಿವಾಸ ತಂಡ, ಚಕ್ಕೆರೆ ಸಿದ್ದರಾಜು ತಂಡದಿಂದ ಸಿದ್ದಪ್ಪಾಜಿ, ಮಹದೇಶ್ವರ ಗೀತೆಗಳನ್ನು ಸಾದರ ಪರಿಸಲಾಯಿತು. ಉಪನ್ಯಾಸಕ ಬಿ.ಪಿ.ಸುರೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಂಸ್ಥೆಯ ಸಂಸ್ಥಾಪಕ ಡಿ.ಎಂ.ರವಿ ಪ್ರಾಸ್ತಾವಿಕ ನುಡಿಗಳನ್ನು ಆಡಿದರು. ನಾಗರಾಜು ದಾಸೇಗೌಡನದೊಡ್ಡಿ, ಮಂಜು ಚಿಕ್ಕೇನಹಳ್ಳಿ ಹಾಗೂ ಶಿಕ್ಷಕರು ಮತ್ತು ಸಿಬ್ಬಂದಿ ಹಾಜರಿದ್ದರು.