ಹುಬ್ಬಳ್ಳಿ: ಅನ್ನಭಾಗ್ಯ ಯೋಜನೆಯ ಅಕ್ಕಿಗಾಗಿ ಕಳೆದ 6 ತಿಂಗಳಿನಿಂದ ಪರದಾಡುತ್ತಿದ್ದ ಬಡ ವೃದ್ಧ ದಂಪತಿ ಮನೆಗೆ ಶನಿವಾರ ಅಧಿಕಾರಿಗಳೇ ತೆರಳಿ ಅಕ್ಕಿ ವಿತರಿಸಿದ್ದಾರೆ.
ಈ ವೃದ್ಧ ದಂಪತಿಯ ಸಮಸ್ಯೆ ಅರಿತು ಕನ್ನಡಪ್ರಭ ಮೇ 28ರಂದು ''''ಅನ್ನಭಾಗ್ಯ ಅಕ್ಕಿಗಾಗಿ ವೃದ್ಧ ದಂಪತಿ ಅಲೆದಾಟ'''' ಎಂಬ ಶೀರ್ಷಿಕೆಯಡಿ ಸಚಿತ್ರ ವರದಿ ಪ್ರಕಟಿಸಿತ್ತು. ವರದಿಯಿಂದ ಎಚ್ಚೆತ್ತ ಅಧಿಕಾರಿಗಳು ಶನಿವಾರ ಮಡಿವಾಳಪ್ಪ ಮಡಿವಾಳ ಅವರ ಮನೆಗೆ ಆಗಮಿಸಿ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಿಸಿದ್ದಾರೆ. ಅಲ್ಲದೇ ವಿನಾಯ್ತಿ ರೇಷನ್ ಕಾರ್ಡ್ ಮೂಲಕ ಪ್ರತಿ ತಿಂಗಳು ಪಡಿತರ ನೀಡಲಾಗುವುದು ಎಂದು ತಿಳಿಸಿದ್ದಾರೆ.
ಇದೇ ರೀತಿ ಇನ್ನು 9 ಮಂದಿಗೆ ಪಡಿತರ ವಿತರಣೆಗೆ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ಅವರಿಗೂ ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಿಸಲು ವಿನಾಯ್ತಿ ರೇಷನ್ ನೀಡಲಾಗುತ್ತಿದೆ ಎಂದು ಆಹಾರ ಇಲಾಖೆಯ ಸಹಾಯಕ ನಿರ್ದೇಶಕಿ ವಸುಂಧರಾ ಹೆಗಡೆ ತಿಳಿಸಿದರು.ಅಕ್ಕಿ ವಿತರಿಸುವ ಸಂದರ್ಭದಲ್ಲಿ ಆಹಾರ ಇಲಾಖೆಯ ನಿರೀಕ್ಷಕ ವಿಜಯ ಪತ್ತಾರ, ರೇಷನ್ ಅಂಗಡಿಯ ವಿತರಕ ಬಸವರಾಜ ಹಾಲೊಳ್ಳಿ ಇದ್ದರು.