ಕಾಲುವೆ ನಿರ್ಮಾಣಕ್ಕೆ ₹256 ಕೋಟಿ, 12988 ಎಕರೆಗೆ ನೀರಾವರಿ ಸೌಲಭ್ಯ
2018ರಲ್ಲಿ ಆಡಳಿತಾತ್ಮಕ ಮಂಜೂರಾತಿಬಹದ್ದೂರುಬಂಡಿ ಸೇರಿ 17 ಗ್ರಾಮಗಳ ರೈತರ ಭೂಮಿಗೆ ನೀರು
ಸೋಮರಡ್ಜಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳತಾಲೂಕಿನ ಬಹದ್ದೂರುಬಂಡಿ, ನವಲಕಲ್ ಏತನೀರಾವರಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿದ್ದು, ಪರೀಕ್ಷೆಯ ವೇಳೆಯಲ್ಲಿ ನೀರು ಉಕ್ಕಿದ್ದನ್ನು ಕಂಡ ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.
ಹೌದು, 2018ರಲ್ಲಿಯೇ ಜಾರಿಯಾಗಿದ್ದ ಬಹದ್ದೂರುಬಂಡಿ ನವಲಕಲ್ ಏತನೀರಾವರಿ ಯೋಜನೆಯ ಕಳೆದ ಸರ್ಕಾರದ ಅವಧಿಯಲ್ಲಿ ಅಷ್ಟಾಗಿ ಪ್ರಗತಿ ಕಂಡಿರಲಿಲ್ಲ. ಆದರೆ, ಈ ವರ್ಷ ಕಾಮಗಾರಿಯನ್ನು ಪೂರ್ಣಗೊಳಿಸಲು ನಡೆಸಿದ ಪ್ರಯತ್ನ ಫಲ ನೀಡಿದ್ದು, ಪ್ರಾಯೋಗಿಕ ಪರೀಕ್ಷೆಯ ವೇಳೆಯಲ್ಲಿ ನವಲಕಲ್ ಮಟ್ಟಿ ಬಳಿ ನೀರು ಉಕ್ಕುತ್ತಿದ್ದಂತೆ ರೈತರು ಕೇಕೆ ಹಾಕಿ ಸಂಭ್ರಮಿಸಿದರು.12988 ಎಕರೆಗೆ ನೀರು:
ಬಹದ್ದೂರುಬಂಡಿ ಏತನೀರಾವರಿ ₹188 ಕೋಟಿ ವೆಚ್ಚದ ಯೋಜನೆಯಾಗಿದ್ದು, ಕೊಪ್ಪಳ, ಕಡಿದಾಳ, ಬಸಾಪುರ, ಗಿಣಿಗೇರಾ, ಕನಕಾಪುರ, ಅಲ್ಲಾನಗರ, ಹಿರೇಬಗನಾಳ, ಕುಣಿಕೇರಿ, ಲಾಚನಕೇರಿ, ಹಾಲವರ್ತಿ, ಮೆಳ್ಳಿಕೇರಿ, ಹ್ಯಾಟಿ, ಗೊಂಡಬಾಳ, ಮುದ್ದಾಬಳ್ಳಿ, ಹೊಸಳ್ಳಿ, ಬಹದ್ದೂರುಬಂಡಿ, ಹೂವಿನಾಳ ಮತ್ತು ಚುಕನಕಲ್ ಗ್ರಾಮಗಳ 12988 ಎಕರೆ ಪ್ರದೇಶಕ್ಕೆ ನೀರಾವರಿಯಾಗಲಿದೆ.ಜಿಲ್ಲೆಯ ಅತ್ಯಂತ ದೊಡ್ಡ ಏತ ನೀರಾವರಿ ಯೋಜನೆಗಳಲ್ಲಿ ಇದೂ ಒಂದಾಗಿದ್ದು, ರೈತರು ಫುಲ್ ಖುಷಿಯಾಗಿದ್ದಾರೆ.
ಕಾಲುವೆಗೆ ಅನುದಾನ:ಈಗಾಗಲೇ ಪೂರ್ಣಗೊಡಿರುವ ಅಳವಂಡಿ- ಬೆಟಗೇರಿ ಏತ ನೀರಾವರಿ ಯೋಜನೆ ಮತ್ತು ಬಹದ್ದೂರುಬಂಡಿ- ನವಲಕಲ್ ಏತನೀರಾವರಿ ಯೋಜನೆಯ ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾಗಿರುವುದರಿಂದ ರೈತರ ಭೂಮಿಗೆ ನೀರುಣಿಸಲು ಕಾಲುವೆ ನಿರ್ಮಾಣದ ಅಗತ್ಯವಿದೆ. ಈ ಎರಡು ಯೋಜನೆಗಳ ಕಾಲುವೆ ನಿರ್ಮಾಣಕ್ಕೆ ಬರೋಬ್ಬರಿ ₹256 ಕೋಟಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಅಸ್ತು ಎಂದಿದ್ದಾರೆ. ಕಳೆದವಾರವಷ್ಟೇ ನೀರಾವರಿ ಕುರಿತ ಸಭೆಯಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಸಲ್ಲಿಸಿದ ಮನವಿಯನ್ನು ಪುರಸ್ಕಾರ ಮಾಡಿ, ಮಂಜೂರಾತಿ ನೀಡಿದ್ದು, ಕಾಲುವೆ ನಿರ್ಮಾಣವಾಗುತ್ತಿದ್ದಂತೆ ರೈತರ ಭೂಮಿಗೆ ನೀರು ಲಭ್ಯವಾಗಲಿದೆ.
ಎರಡು ಪಂಪ್:ಸಾಮಾನ್ಯವಾಗಿ ಎಲ್ಲಾ ಏತನೀರಾವರಿ ಯೋಜನೆಗಳಿಗೆ ಒಂದು ಪಂಪ್ ಮಾತ್ರ ಕೂಡಿಸಲಾಗುತ್ತದೆ. ಆದರೆ, ನವಲಕಲ್ ಏತನೀರಾವರಿ ಯೋಜನೆಯಲ್ಲಿ ಎರಡು ಪಂಪ್ ಕೂಡಿಸಲಾಗಿದ್ದು, ಎರಡು ಪಂಪ್‌ಗಳಿಂದಲೂ ನೀರೆತ್ತಲಾಗುತ್ತಿರುವುದರಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಬರಲಿದೆ ಎನ್ನುತ್ತಿದ್ದಾರೆ ರೈತರು.
90 ಕ್ಯುಸೆಕ್ ನೀರು ಪಂಪ್ ಆಗುತ್ತಿರುವುದರಿಂದ ರೈತರ ಭೂಮಿಗೆ ಎರಡು ಬೆಳೆಗೆ ನೀರು ದೊರೆಯುವ ಸಾಧ್ಯತೆ ಇದೆ. ಇದರ ಜೊತೆಗೆ ಕೆರೆ ತುಂಬಿಸುವ ಯೋಜನೆಯೂ ಇದರಲ್ಲಿದೆ.ಶೀಘ್ರ ರೈತರ ಭೂಮಿಗೆ ನೀರು:ನನಗೆ ಯೋಜನೆ ಜಾರಿಯ ಬಗ್ಗೆ ಅತೀವ ಸಂತೋಷವಾಗಿದೆ. ಈಗ ಪ್ರಾಯೋಗಿಕ ಪರೀಕ್ಷೆ ವೇಳೆ ನೀರು ಚಿಮ್ಮಿದ್ದನ್ನು ಕಂಡು ಆನಂದವಾಗಿದ್ದು, ಶೀಘ್ರದಲ್ಲಿಯೇ ಕಾಲುವೆ ನಿರ್ಮಾಣ ಮಾಡಿ, ರೈತರ ಭೂಮಿಗೆ ನೀರುಣಿಸಲಾಗುವುದು. ನವಲಕಲ್ ಮತ್ತು ಬಹದ್ದೂರುಬಂಡಿ ಏತನೀರಾವರಿ ಕಾಲುವೆ ನಿರ್ಮಾಣಕ್ಕಾಗಿಯೇ ₹256 ಕೋಟಿ ಯೋಜನೆಗೆ ಸಿಎಂ ಮಂಜೂರಾತಿ ನೀಡಿದ್ದಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.