ಆಂಧ್ರದ ಗುಮ್ಮಡಿ ಗೋಪಾಲಕೃಷ್ಣಗೆ ರಾಘವ ಪ್ರಶಸ್ತಿ ಪ್ರದಾನ

KannadaprabhaNewsNetwork |  
Published : Aug 05, 2025, 01:30 AM IST
ಬಳ್ಳಾರಿ ರಾಘವ ಕಲಾಮಂದಿರದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ರಾಜ್ಯಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿ ಸ್ವೀಕರಿಸಿದ ಬಳಿಕ ಹಿರಿಯ ರಂಗಭೂಮಿ ಕಲಾವಿದ ಗುಮ್ಮಡಿ ಗೋಪಾಲಕೃಷ್ಣ ಅವರು ಮಾತನಾಡಿದರು.  | Kannada Prabha

ಸಾರಾಂಶ

ನಗರದ ರಾಘವ ಕಲಾ ಮಂದಿರದಲ್ಲಿ ಬಳ್ಳಾರಿ ರಾಘವರ 145ನೇ ಜಯಂತಿ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಆಂಧ್ರಪ್ರದೇಶದ ಮೇಡೂರು ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ಗುಮ್ಮಡಿ ಗೋಪಾಲಕೃಷ್ಣ ಅವರಿಗೆ ರಾಜ್ಯಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಬಳ್ಳಾರಿ ರಾಘವರ 145ನೇ ಜಯಂತಿ ಅಂಗವಾಗಿ ಸಮಾರಂಭ । ತೆಲುಗು ನಾಟಕ ಪ್ರದರ್ಶನ

ಕನ್ನಡಪ್ರಭ ವಾರ್ತೆ ಬಳ್ಳಾರಿ

ನಗರದ ರಾಘವ ಕಲಾ ಮಂದಿರದಲ್ಲಿ ಬಳ್ಳಾರಿ ರಾಘವರ 145ನೇ ಜಯಂತಿ ಅಂಗವಾಗಿ ಜರುಗಿದ ಸಮಾರಂಭದಲ್ಲಿ ಆಂಧ್ರಪ್ರದೇಶದ ಮೇಡೂರು ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ಗುಮ್ಮಡಿ ಗೋಪಾಲಕೃಷ್ಣ ಅವರಿಗೆ ರಾಜ್ಯಮಟ್ಟದ ಬಳ್ಳಾರಿ ರಾಘವ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಹೈದರಾಬಾದ್‌ನ ಸುರವರಂ ಪ್ರತಾಪರೆಡ್ಡಿ ತೆಲುಗು ವಿಶ್ವವಿದ್ಯಾಲಯದ ಕುಲಪತಿ ಆಚಾರ್ಯ ವೆಲಿದಂಡ ನಿತ್ಯಾನಂದರಾವ್, ಗುಮ್ಮಡಿ ಗೋಪಾಲಕೃಷ್ಣ ತೆಲುಗು ನಾಟಕ ಕ್ಷೇತ್ರದಲ್ಲಿ ನೀಡಿರುವ ಅಪಾರವಾದ ಕೊಡುಗೆ ಸ್ಮರಿಸಿದರಲ್ಲದೆ, ಬಳ್ಳಾರಿ ರಾಘವರಂಥರ ಮೇರು ನಟನ ಪ್ರಶಸ್ತಿಗೆ ಭಾಜನರಾಗಿರುವುದು ರಂಗಭೂಮಿ ಕಲಾವಿದನೊಬ್ಬ ಸಾರ್ಥಕ ಜೀವನಕ್ಕೆ ಸಿಕ್ಕ ಅಪೂರ್ವ ಅವಕಾಶ ಎಂದು ಬಣ್ಣಿಸಿದರು.

ಬಳ್ಳಾರಿ ರಾಘವರು ಕನ್ನಡ ಹಾಗೂ ತೆಲುಗು ಭಾಷೆ ನಡುವಿನ ಕೊಂಡಿಯಂತಿದ್ದರು. ಎರಡು ಭಾಷೆಗಳ ಬಾಂಧವ್ಯಕ್ಕೆ ರಾಘವರು ನೀಡಿದ ಕೊಡುಗೆ ದೊಡ್ಡದು. ಕನ್ನಡ, ತೆಲುಗು, ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಗಳ ಪ್ರಾವಿಣ್ಯತೆ ಪಡೆದಿದ್ದ ರಾಘವರು ತಮ್ಮ ಇಡೀ ಬದುಕನ್ನು ರಂಗಭೂಮಿ ಸೇವೆಗೆ ಅರ್ಪಿಸಿದರು. ವೃತ್ತಿಯಲ್ಲಿ ವಕೀಲರಾಗಿದ್ದರೂ ರಂಗಭೂಮಿಯನ್ನು ಪ್ರವೃತ್ತಿಯನ್ನಾಗಿಸಿಕೊಂಡಿದ್ದರು. ಆದರೆ, ರಾಘವರು ರಂಗಭೂಮಿ ನಟನಾ ಕೌಶಲ್ಯದಿಂದಾಗಿಯೇ ವಿಶ್ವಮಟ್ಟದ ಖ್ಯಾತಿ ಪಡೆದರು. ಅನೇಕ ದೇಶಗಳಲ್ಲಿ ನಾಟಕಗಳ ಪ್ರದರ್ಶನ ನೀಡಿದ ರಾಘವರು, ಬಳ್ಳಾರಿಯ ಹೆಸರನ್ನು ವಿಶ್ವದಂಗಳಕ್ಕೆ ಪರಿಚಯಿಸಿದ ಕಲಾ ಪ್ರಪೂರ್ಣರು ಎಂದು ಸ್ಮರಿಸಿದರು.

ತೆಲುಗು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ನಿರಂತರವಾಗಿ ಅಭಿನಯಿಸಿ, ಸ್ತ್ರೀ ಪಾತ್ರಗಳನ್ನು ಸ್ತ್ರೀಯರೇ ಮಾಡಬೇಕೆಂದು ಹೇಳಿ, ಅದರಂತೆ ರಂಗಭೂಮಿಗೆ ಹೊಸ ಮಾರ್ಪಾಡು ತಂದ ಧೀಮಂತ ರಾಘವರ ಕಲಾ ಸೇವೆ ಅನನ್ಯವಾದದು ಎಂದವರು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಂಗಭೂಮಿ ಹಿರಿಯ ಕಲಾವಿದ ಗುಮ್ಮಡಿ ಗೋಪಾಲಕೃಷ್ಣ ಅವರು, ರಾಘವರ ಹೆಸರಿನ ಪ್ರಶಸ್ತಿ ಪಡೆದಿರುವುದು ಹೆಚ್ಚು ಸಂತಸ ತಂದಿದೆ. ವಿಶ್ವಮಾನ್ಯ ರಂಗಭೂಮಿ ಕಲಾವಿದ ಬಳ್ಳಾರಿ ರಾಘವರ ಹೆಸರಿನಲ್ಲಿ ನೀಡುವ ಪ್ರಶಸ್ತಿಗೆ ನನ್ನನ್ನು ಆಯ್ಕೆಗೊಳಿಸಿರುವುದು ನಿಜಕ್ಕೂ ನನ್ನ ಸೌಭಾಗ್ಯವೇ ಸರಿ ಎಂದು ಭಾವುಕರಾದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಹಿರಿಯ ವಕೀಲ ಕೆ. ಕೋಟೇಶ್ವರರಾವ್ ಬಳ್ಳಾರಿ ಜಿಲ್ಲೆ ರಂಗಭೂಮಿಗೆ ನೀಡಿದ ಕೊಡುಗೆ ಸ್ಮರಿಸಿಕೊಂಡರು. ಅಸೋಸಿಯೇಷನ್ ಗೌರವಾಧ್ಯಕ್ಷ ಕೆ. ಚನ್ನಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಪ್ರಕಾಶ್, ಉಪಾಧ್ಯಕ್ಷ ಎಚ್. ವಿಷ್ಣುವರ್ಧನ ರೆಡ್ಡಿ, ಖಜಾಂಜಿ ಪಿ. ಧನಂಜಯ, ಸಹ ಕಾರ್ಯದರ್ಶಿ ಎಂ. ರಾಮಾಂಜನೇಯಲು ಉಪಸ್ಥಿತರಿದ್ದರು. ಎನ್. ಶ್ರೀನಿವಾಸ ರೆಡ್ಡಿ ಹಾಗೂ ಪಿ. ಧನಂಜಯ ಕಾರ್ಯಕ್ರಮ ನಿರ್ವಹಿಸಿದರು. ಕೊನೆಯಲ್ಲಿ ವಿಜಯವಾಡದ ಶ್ರೀ ಸಾಯಿಬಾಬಾ ನಾಟಕ ಮಂಡಳಿ ಡಾ. ಪಿ.ವಿ.ಎನ್. ಕೃಷ್ಣ ರಚಿಸಿ ನಿರ್ದೇಶಿಸಿದ ಜಯಹೋ ಶ್ರೀ ಛತ್ರಪತಿ ಶಿವಾಜಿ ಮಹಾರಾಜ ತೆಲುಗು ಐತಿಹಾಸಿಕ ನಾಟಕ ಪ್ರದರ್ಶಿಸಲಾಯಿತು. ನಗರದ ನೂರಾರು ಜನರು ಸಮಾರಂಭಕ್ಕೆ ಸಾಕ್ಷಿಯಾದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ