ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ವಿಜಯನಗರದ ವಿಭಾಗೀಯ ಸ್ತ್ರೀಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಚಾಮುಂಡೇಶ್ವರಿ ಕ್ಷೇತ್ರದ ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಯಾಮ್ ಸಂಗ್ ಮೊಬೈಲ್ ವಿತರಿಸಿ ಮಾತನಾಡಿದರು.
ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೋನ್ ನೀಡಿರುವುದರಿಂದ ಸಾಕಷ್ಟು ಮಾಹಿತಿಯನ್ನು ಅಪ್ ಡೇಟ್ ಮಾಡಲಾಗುತ್ತಿದೆ. ಇಲಾಖೆಯ ಕೆಲಸಗಳು ಸುಗಮವಾಗಿ ಮಾಡಲು ಮತ್ತು ಮಕ್ಕಳಿಗೆ ಬೇಕಾದ ಸೌಲಭ್ಯ ಒದಗಿಸಲು ಸಹಕಾರಿಯಾಗಿದೆ. ಮತ್ತಷ್ಟು ಮಾಹಿತಿ ಅಳವಡಿಸಿಕೊಂಡು ಚೆನ್ನಾಗಿ ಕೆಲಸ ಮಾಡಬೇಕು ಎಂದರು.ಅಂಗನವಾಡಿಗಳು ದುರಸ್ತಿಗೆ ಬಂದಿದ್ದರೆ ಹೇಳಬೇಕು. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಇದ್ದರೆ ನೇರವಾಗಿ ಹೇಳಬಹುದು. ಇಲ್ಲವೇ ಆಯಾಯ ಗ್ರಾಪಂಗಳಿಗೆ ಮಾಹಿತಿ ಕೊಟ್ಟರೆ ಸರಿಯಾಗುತ್ತದೆ. ಮೂಲ ಸೌಕರ್ಯಗಳನ್ನು ಒದಗಿಸಲು ಬೇಕಾದ ಅನುದಾನ ನೀಡಲಾಗುವುದು ಎಂದು ಅವರು ಆಶ್ವಾಸನೆ ನೀಡಿದರು.
ಮೊದಲೆಲ್ಲಾ ಆರತಿಗೊಬ್ಬ ಮಗಳು, ಕೀರ್ತಿಗೊಬ್ಬ ಮಗ ಬೇಕು ಎನ್ನುತ್ತಿದ್ದರು. ಆದರೆ, ಇಂದು ಒಂದು ಮಗುವನ್ನು ಸಾಕಲು ಸಾಧ್ಯವಾಗದಂತಾಗಿದೆ. ಒಂದು ಮಗುವನ್ನು ನೋಡಿಕೊಳ್ಳಲು ಆಗೋದಿಲ್ಲ ಅಂತಾರೆ. ಅಂತಹದರಲ್ಲಿ ಹತ್ತಾರು ಮಕ್ಕಳನ್ನು ನೋಡಿಕೊಂಡು ಆರೈಕೆ ಮಾಡುವುದು ಸುಲಭವಲ್ಲ. ಅದಕ್ಕಾಗಿಯೇ ಕಾರ್ಯಕರ್ತೆಯರೇ ದೇವರ ಸಮಾನರಾಗಿದ್ದಾರೆ ಎಂದು ಹೇಳಿದರು.
ಅಧಿಕಾರಿಗಳು ಕೂಡ ಗ್ರಾಪಂಗೆ ಹೋಗಿ ಸಮಸ್ಯೆಗಳನ್ನು ಆಲಿಸುವಂತೆ ಹೇಳಿದ್ದೇನೆ. ಶಾಲೆ, ಅಂಗನವಾಡಿ ಕಟ್ಟಡಗಳ ನಿರ್ಮಾಣ, ದುರಸ್ತಿ ಇದ್ದರೆ ಮಾಹಿತಿ ಕೊಡುವಂತೆ ಸೂಚನೆ ನೀಡಿದ್ದೇನೆ. ಯಾವುದೇ ಸಮಸ್ಯೆ ಇದ್ದರೆ ನೇರವಾಗಿ ತಿಳಿಸಬಹುದು ಎಂದರು.