ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಪಶ್ಚಿಮ ಘಟ್ಟಗಳ ಸಾಲಿನ ಕಾರ್ಕಳ ತಾಲೂಕಿನ ನಕ್ಸಲ್ ಪೀಡಿತ ಪ್ರದೇಶವಾದ ಈದು ಗ್ರಾಮದ ಬೊಳ್ಳೆಟ್ಟು ಪ್ರದೇಶ ಮೂಲ ಸೌಕರ್ಯ ಕೊರತೆ ಎದುರಿಸುತ್ತಿವೆ. ಇಲ್ಲಿ ಒಂದು ಅಂಗನವಾಡಿ ಕೇಂದ್ರ ಇದ್ದು, ಅರಣ್ಯದಿಂದ ಸುತ್ತುವರಿದಿದೆ. ಈ ಅಂಗನವಾಡಿಗೆ ಇನ್ನೂ ತಡೆಗೋಡೆ ನಿರ್ಮಾಣವಾಗಿಲ್ಲ. 15ಕ್ಕೂ ಹೆಚ್ಚು ಪುಟಾಣಿಗಳು ಈ ಅಂಗನವಾಡಿಗೆ ಬರುತ್ತಾರೆ.
2003ರಲ್ಲಿ ನಡೆದ ನಕ್ಸಲ್ ಎನ್‌ಕೌಂಟರ್ ನಡೆದ ಬಳಿಕ ಬೊಳ್ಳೆಟ್ಟು ಭಾಗದಲ್ಲಿ ಸರ್ಕಾರದ ವತಿಯಿಂದ 2004ರಲ್ಲಿ ಅಂಗನವಾಡಿ ಕೇಂದ್ರ ಆರಂಭವಾಯಿತು. 2006ರಲ್ಲಿ ಮೂರನೇ ಹಣಕಾಸು ಯೋಜನೆಯಿಂದ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗಿತ್ತು. ಈಗ ಕಟ್ಟಡ ನಿರ್ಮಾಣವಾಗಿ 18 ವರ್ಷಗಳು ಕಳೆದಿವೆ. ಆದರೆ ತಡೆಗೋಡೆ ಇನ್ನೂ ನಿರ್ಮಾಣವಾಗಿಲ್ಲ.* ಹತ್ತಿರದಲ್ಲೇ ಇದೆ ಕಾಡು:ಅಂಗನವಾಡಿ ಕೇಂದ್ರದ ಹತ್ತಿರದಲ್ಲೇ ಅರಣ್ಯವಿದೆ. ಈ ಅರಣ್ಯವು ಕುದುರೆಮುಖ ವನ್ಯಜೀವಿ ವಿಭಾಗಕ್ಕೆ ಸೇರಿದೆ. ಅದರಲ್ಲೂ ಕಾಡುಪ್ರಾಣಿಗಳ ಭೀತಿ ಇದೆ. ಪ್ರಸಕ್ತ ಈ ಅಂಗನವಾಡಿಯಿಂದ ಮೂವರು ಬಾಣಂತಿಯರು ನೋಂದಾಯಿಸಿಕೊಂಡಿದ್ದು, ಆಹಾರ ಪಡೆಯುತ್ತಿದ್ದಾರೆ.
* ಮನವಿ ಸಲ್ಲಿದರೂ ನಿರ್ಲಕ್ಷ್ಯ:ಬೊಳ್ಳೆಟ್ಟು ಪರಿಸರದ ಅಂಗನವಾಡಿಗೆ ತಡೆಗೋಡೆ ನಿರ್ಮಿಸಲು ಸ್ಥಳೀಯರು ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗ್ರಾಮಸಭೆಯಲ್ಲಿ ಚರ್ಚೆಗೆ ಗ್ರಾಸವಾದರೂ ನಿರ್ಣಯವಾಗಿಯೇ ಉಳಿದಿದೆ.* ನೀರಾವರಿ ವ್ಯವಸ್ಥೆಯೂ ಇಲ್ಲ
ಈ ಬೊಳ್ಳೆಟ್ಟು ಪರಿಸರದಲ್ಲಿನ ಅಂಗನವಾಡಿ ಕೇಂದ್ರಕ್ಕೆ ಪಂಚಾಯಿತಿ ವತಿಯಿಂದ ನೀರಾವರಿ ವ್ಯವಸ್ಥೆ ಮಾಡಲಾಗಿಲ್ಲ. ಸದ್ಯ ಖಾಸಗಿ ಮನೆಯಿಂದ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿದೆ. ಮಠದಬೆಟ್ಟು ಎಂಬಲ್ಲಿ ಈದು- ಬೊಳ್ಳೆಟ್ಟು ನಡುವೆ ಸೇತುವೆ ನಿರ್ಮಾಣವಾದರೆ ಮಾತ್ರ ನೀರಾವರಿ ವ್ಯವಸ್ಥೆ ಕಲ್ಪಿಸಲು ಸಾಧ್ಯ................ಅಂಗನವಾಡಿಗೆ ಕಾಂಪೌಂಡ್ ನಿರ್ಮಾಣ ಮಾಡಲು ಪಂಚಾಯಿತಿ ಬಳಿ ಯಾವುದೇ ಅನುದಾನವಿಲ್ಲ. ಈಗಾಗಲೇ ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆ.। ಸದಾನಂದ ಸಾಲಿಯಾನ್ , ಈದು ಗ್ರಾ.ಪಂ ಅಧ್ಯಕ್ಷ
--------------ಎನ್‌ಕೌಂಟರ್ ನಡೆದ ಬಳಿಕ ಈ ಭಾಗದಲ್ಲಿ ಅಂಗನವಾಡಿ ಪ್ರಾರಂಭ ವಾಯಿತು. 19 ವರ್ಷಗಳು ಕಳೆದಿವೆ. ಅಂಗನವಾಡಿ ಕೇಂದ್ರಕ್ಕೆ ಭದ್ರತೆಯೇ ಇಲ್ಲವಾಗಿದೆ. ಕಾಡುಪ್ರಾಣಿಗಳ ಭೀತಿಯೂ ಇದೆ. ಈಗಾಗಲೇ ಜನಪ್ರತಿನಿಧಿಗಳು ಇಲಾಖಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಯಾವುದೇ ಸ್ಪಂದನೆ ದೊರೆತಿಲ್ಲ.
। ಸುಧಾಕರ ಪೂಜಾರಿ ಬೊಳ್ಳೆಟ್ಟು, ಸ್ಥಳೀಯರು.