ವಿಜಯದಾಸರಿಂದ ದಾಸ ಸಾಹಿತ್ಯ ಬೆಳವಣಿಗೆ: ಪಂಡಿತ್ ಶ್ರೀನಿವಾಸ ಆಚಾರ್ ನವಲಿ

KannadaprabhaNewsNetwork | Published : Nov 11, 2024 11:45 PM

ಸಾರಾಂಶ

ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ದಾಸ ಸಾಹಿತ್ಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ಕೀರ್ತಿ ವಿಜಯದಾಸರಿಗೆ ಸಲ್ಲಬೇಕು.

ಕನ್ನಡಪ್ರಭ ವಾರ್ತೆ ಕನಕಗಿರಿ

ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ದಾಸ ಸಾಹಿತ್ಯ ಬೆಳವಣಿಗೆಗೆ ಅವಿರತವಾಗಿ ಶ್ರಮಿಸಿದ ಕೀರ್ತಿ ವಿಜಯದಾಸರಿಗೆ ಸಲ್ಲಬೇಕು ಎಂದು ಪಂಡಿತ್ ಶ್ರೀನಿವಾಸ ಆಚಾರ್ ನವಲಿ ಹೇಳಿದರು.

ತಾಲೂಕಿನ ನವಲಿ ಗ್ರಾಮದ ಐತಿಹಾಸಿಕ ಪ್ರಸಿದ್ಧ ಶ್ರೀ ಭೋಗಾಪುರೇಶ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ೨೬೯ನೇ ವಿಜಯದಾಸರ ಆರಾಧನಾ ಮಹೋತ್ಸವದಲ್ಲಿ ಅವರು ಮಾತನಾಡಿದರು.

೧೮ನೇ ಶತಮಾನದ ದ್ವೈತ ಸಂಪ್ರದಾಯ ವಿದ್ವಾಂಸರಾಗಿದ್ದ ವಿಜಯದಾಸರು ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ಕನ್ನಡ ಭಾಷೆಯಲ್ಲಿ ವಿಜಯ ವಿಠ್ಠಲ ಅಂಕಿತದಲ್ಲಿ ನೂರಾರು ಕಿರ್ತನೆ, ಸುಳಾದಿಗಳನ್ನು ರಚಿಸುವ ಮೂಲಕ ದಾಸ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಇಂತಹ ದಾರ್ಶನಿಕರ ವಿಚಾರಗಳು ನಮ್ಮೆಲ್ಲರಿಗೂ ದಾರಿದೀಪವಾಗಿವೆ ಎಂದರು.

ನಂತರ ಹಾರ್ಮೋನಿಯಂ ಕಲಾವಿದ ಪರಂಧಾಮರೆಡ್ಡಿ ಭೀರಳ್ಳಿ ಮಾತನಾಡಿ, ದಾಸ ಸಾಹಿತ್ಯದ ಬೆಳವಣಿಗೆ, ಕನ್ನಡ ದಾಸ ಪರಂಪರಯ ಶ್ರೀಮಂತಿಕೆಗೆ ವಿಜಯದಾಸರ ಕೊಡುಗೆ ಅಪಾರವಾಗಿದೆ. ದ್ವೈತ ಸಿದ್ದಾಂತದ ಪರಿಪಾಲಕರಾಗಿದ್ದ ವಿಜಯದಾಸರು ರಚಿಸಿದ ಆಂಧ್ರದಲ್ಲಿ ಕನ್ನಡ ಭಾಷೆಯಲ್ಲಿಯೇ ಪಾರಾಯಣ ಮಾಡಲಾಗುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ೧೮ನೇ ಶತಮಾನದಲ್ಲಿಯೂ ಕನ್ನಡ ಬಹಳ ಶ್ರೀಮಂತವಾಗಿತ್ತು ಎಂಬುದಕ್ಕೆ ವಿಜಯದಾಸರ ಕಿರ್ತನೆಗಳೇ ಸಾಕ್ಷಿಯಾಗಿವೆ ಎಂದರು.

ಇದಕ್ಕೂ ಮೊದಲು ದೇವಸ್ಥಾನದ ಪ್ರಾಂಗಣದ ಸುತ್ತಲೂ ವಿಜಯದಾಸರ ಭಾವಚಿತ್ರ ಮೆರವಣಿಗೆ ಸಹಿತ ವಿಜಯ ಕವಚ, ವಿಜಯರಾಯರ ರಚಿಸಿದ ಸ್ತುತಿಗಳನ್ನು ಪಾರಾಯಣ ಮಾಡಲಾಯಿತು.

ಈ ಸಂದರ್ಭದಲ್ಲಿ ಪಂಡಿತ ಶ್ರೀನಾಥ ಆಚಾರ್ ನವಲಿ, ಅಚ್ಯುತಾಚಾರ್ ಪೂಜಾರ ನವಲಿ, ನಾರಾಯಣರಾವ್ ಕುಲಕರ್ಣಿ, ಸತ್ಯಬೋದಚಾರ್, ವಾದಿರಾಜಚಾರ್ ಗಂಗಾವತಿ, ಭಜನಾ ಕಲಾವಿದರಾದ ಸುರೇಶರೆಡ್ಡಿ ಮಹಲಿನಮನಿ, ಶಿವಪ್ಪ ಅಂಕಸದೊಡ್ಡಿ, ಭೀಮರೆಡ್ಡಿ ಓಣಿಮನಿ, ನಾಗರೆಡ್ಡಿ ಮಾದಿನಾಳ, ರಾಮಣ್ಣ ಗುಂಜಳ್ಳಿ, ಭೀಮರಾವ್ ಮರಾಠಿ, ಅಶೋಕ ನಾಯಕ ಸೇರಿದಂತೆ ಬ್ರಾಹ್ಮಣ ಸಮಾಜದ ಮಹಿಳೆಯರು ಇದ್ದರು.

Share this article