ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್: ಅಜಯ್ ಸಿಂಗ್

KannadaprabhaNewsNetwork |  
Published : Nov 11, 2024, 11:45 PM IST
ಸಂಡೂರು ಬಳಿಯ ಕೃಷ್ಣಾನಗರದಲ್ಲಿನ ಕೆಪಿಸಿಸಿ ಕ್ಯಾಂಪ್ ಕಚೇರಿಯಲ್ಲಿ ಸೋಮವಾರ ಶಾಸಕ ಅಜಯ್‌ಸಿಂಗ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. | Kannada Prabha

ಸಾರಾಂಶ

೨೦೧೩-೧೮ರ ಅವಧಿಯಲ್ಲಿ ಕಾಂಗ್ರೆಸ್ ನೀಡಿದ್ದ ೧೬೫ ಭರವಸೆಗಳಲ್ಲಿ ೧೫೮ ಭರವಸೆಗಳನ್ನು ಈಡೇರಿಸಿದೆ.

ಸಂಡೂರು: ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್. ನಾಲ್ಕು ಬಾರಿ ಶಾಸಕರಾಗಿ, ಪ್ರಸ್ತುತ ಸಂಸದರಾಗಿರುವ ಈ.ತುಕಾರಾಂ ಅವರು ಒಂದೂವರೆ ವರ್ಷದಲ್ಲಿ ₹೧೨೧೬ ಕೋಟಿ ಅನುದಾನ ತಂದಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸಲಾಗಿದೆ. ಕ್ಷೇತ್ರದ ಅಭಿವೃದ್ಧಿ ಹಿನ್ನೆಲೆಯಲ್ಲಿ ಈ ಬಾರಿಯ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಈ.ಅನ್ನಪೂರ್ಣಾ ತುಕಾರಾಂ ೪೦-೫೦ ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಜಯ್ ಸಿಂಗ್ ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೧೩-೧೮ರ ಅವಧಿಯಲ್ಲಿ ಕಾಂಗ್ರೆಸ್ ನೀಡಿದ್ದ ೧೬೫ ಭರವಸೆಗಳಲ್ಲಿ ೧೫೮ ಭರವಸೆಗಳನ್ನು ಈಡೇರಿಸಿದೆ. ಜನಪರ ಆಡಳಿತ ನೀಡಿದ್ದರಿಂದ ಕಾಂಗ್ರೆಸ್‌ಗೆ ಈ ಬಾರಿ ರಾಜ್ಯದಲ್ಲಿ ೧೩೬ ಸ್ಥಾನಗಳು ದೊರೆತಿವೆ. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಗೆ ಹಿಂದಿನ ವರ್ಷ ₹೩೦೦೦ ಕೋಟಿ ಅನುದಾನ ಒದಗಿಸಲಾಗಿತ್ತು. ಈ ವರ್ಷ ₹೫೦೦೦ ಕೋಟಿ ಅನುದಾನಕ್ಕೆ ಅನುಮೋದನೆ ದೊರೆತಿದೆ. ಮುಂದಿನ ಮೂರು ವರ್ಷದಲ್ಲಿ ಈ ಪ್ರದೇಶದ ಅಭಿವೃದ್ಧಿಗೆ ₹೧೧೧೨೦ ಕೋಟಿ ಅನುದಾನ ದೊರೆಯಲಿದೆ. ೩೭೧ಜೆ ತಿದ್ದುಪಡಿ ತಂದಿದ್ದು ಕಾಂಗ್ರೆಸ್. ಇದಕ್ಕೆ ಬಿಜೆಪಿ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಜನತೆ ಅಭಿವೃದ್ಧಿ, ಜನಪರವಾಗಿರುವ ಕಾಂಗ್ರೆಸ್ ಅಭ್ಯರ್ಥಿಯಾದ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಬಹುಮತದಿಂದ ಗೆಲ್ಲಿಸಬೇಕು ಎಂದರು.

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಜಿಎಸ್‌ಟಿ ಮೂಲಕ ರಾಜ್ಯದಿಂದ ₹೪.೭೫ ಲಕ್ಷ ಕೋಟಿ ಹಣ ಸಂದಾಯವಾಗುತಿದೆ. ಆದರೆ, ರಾಜ್ಯಕ್ಕೆ ಇದರಲ್ಲಿ ದೊರೆಯುತ್ತಿರುವುದು ಕೇವಲ ₹೫೨ ಸಾವಿರ ಕೋಟಿ. ರಾಜ್ಯ ಒಂದು ರುಪಾಯಿ ಕೊಟ್ಟರೆ, ರಾಜ್ಯಕ್ಕೆ ಬರುತ್ತಿರುವುದು ೧೫ ಪೈಸೆ ಮಾತ್ರ ಎಂದು ಟೀಕಿಸಿದರು.

ಎಐಸಿಸಿ ಕಾರ್ಯದರ್ಶಿ ಹಾಗೂ ಕಲ್ಯಾಣ ಕರ್ನಾಟಕ ಉಸ್ತುವಾರಿ ಗೋಪಿನಾಥ್ ಪಳನಿಯಪ್ಪನ್ ಮಾತನಾಡಿ, ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟು, ಎಲ್ಲ ಜಾತಿ, ಧರ್ಮದ ಜನರನ್ನು ಒಂದುಗೂಡಿಸಿ, ಅವರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಕಾಂಗ್ರೆಸ್ ಆಡಳಿತದಲ್ಲಿ ಜನತೆ ಶಾಂತಿ, ಸೌಹಾರ್ದದಿಂದ ಜೀವನ ನಡೆಸುತ್ತಿದ್ದಾರೆ. ಫ್ಯಾಸಿಸ್ಟ್ ಮನಸ್ಥಿತಿಯ ಜನರಿಂದ ಕ್ಷೇತ್ರವನ್ನು ರಕ್ಷಿಸಲು, ಮೈನಿಂಗ್ ಮಾಫಿಯಾದಿಂದ ಮುಕ್ತಗೊಳಿಸಲು ಕ್ಷೇತ್ರದ ಜನತೆ ಕಾಂಗ್ರೆಸ್ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಅವರನ್ನು ಅತಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ವಸಂತಕುಮಾರ್ ಮಾತನಾಡಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಆದಿಯಾಗಿ ಪಕ್ಷದ ಸುಮಾರು ೨೦೦-೨೫೦ ಮುಖಂಡರು, ಕಾರ್ಯಕರ್ತರು ಕ್ಷೇತ್ರದ ಪ್ರತಿ ಗ್ರಾಮದಲ್ಲಿನ, ಪ್ರತಿ ಮನೆಯನ್ನು ಭೇಟಿ ಮಾಡಿ, ಜನತೆಗೆ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಜನಪರ ಯೋಜನೆಗಳ ಅನುಷ್ಠಾನ ಕುರಿತು ಮನವರಿಕೆ ಮಾಡಿಕೊಡಲಾಗಿದೆ. ಕ್ಷೇತ್ರದ ಜನತೆಯಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಕ್ಷದ ಅಭ್ಯರ್ಥಿ ಈ. ಅನ್ನಪೂರ್ಣಾ ತುಕಾರಾಂ ಕ್ಷೇತ್ರದಲ್ಲಿ ಗೆಲವು ಖಚಿತವಾಗಿ ಗೆಲುವು ಸಾಧಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಪಕ್ಷದ ಮುಖಂಡರಾದ ವೆಂಕಟೇಶ್ ಹೆಗಡೆ, ಎಆರ್‌ಎಂ ಹುಸೇನ್, ಲೋಕೇಶ್‌ ನಾಯ್ಕ್, ಡಾ.ತಿಪ್ಪೇಸ್ವಾಮಿ, ರಾಜಶೇಖರ್ ವಂಶಿ, ಸುಧಾಕರ್ ಬಡಿಗೇರ, ಮೆಹಬೂಬ್ ಬಾಷಾ ಹಾಗೂ ಇರ್ಫಾನ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!