ಕನ್ನಡಪ್ರಭ ವಾರ್ತೆ, ಬೀದರ್
ಅಂಗನವಾಡಿ ನೇಮಕಾತಿಯಲ್ಲಿ ಇನ್ನಷ್ಟು ಸರಳ, ಹೆಚ್ಚಿನ ಪಾರದರ್ಶಕತೆ ಕೈಗೊಳ್ಳಬೇಕು. ಗರಿಷ್ಟ ಮೂರು ತಿಂಗಳೊಳಗೆ ಪ್ರಕ್ರಿಯೆ ಪೂರ್ಣಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ನೀಡಿದರು.ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಕಲಬುರಗಿ ವಿಭಾಗೀಯ ಮಟ್ಟದ ಮೊದಲ ದಿನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಾವುದೇ ಕಾರಣದಿಂದಲೂ ನೇಮಕಾತಿಗಳು ವಿಳಂಬವಾಗದಂತೆ ನೋಡಿಕೊಳ್ಳಬೇಕು ಎಂದರು.
ನೇಮಕಾತಿ ವೇಳೆ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣವೇ ಪರಿಹರಿಸಬೇಕು, ನಮ್ಮ ಇಲಾಖೆಯು ಜನರಿಗೆ, ಜನರ ಬದುಕಿಗೆ ಹತ್ತಿರವಾದ ಇಲಾಖೆ, ಅಧಿಕಾರಿಗಳು ಯಾವುದೇ ನಿರ್ಲಕ್ಷ್ಯ ಮಾಡದೆ, ಕಾಳಜಿಯಿಂದ ಕೆಲಸ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.ಕೇಂದ್ರ ಹಾಗೂ ರಾಜ್ಯದಿಂದ ಕಾಲಕಾಲಕ್ಕೆ ನೀಡಲಾಗುವ ಗುರಿಯನ್ನು ತಲುಪಲೇಬೇಕು. ಅನೇಕ ಕಡೆ ಮಕ್ಕಳಿಗೆ ಸರಿಯಾಗಿ ಮೊಟ್ಟೆ ತಲುಪುತ್ತಿಲ್ಲ. ಹಾಲಿನ ಪೌಡರ್ ಮಾರಿಕೊಳ್ಳುತ್ತಾರೆ ಎನ್ನುವ ದೂರುಗಳು ಕೇಳಿ ಬರುತ್ತಿವೆ. ಅದು ನಿಜವಾಗಿದ್ದಲ್ಲಿ ಅಂಥವುಗಳನ್ನು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ತಪ್ಪಿತಸ್ಥ ಅಧಿಕಾರಿ, ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿ ಅಧಿಕಾರಿಗಳು, ಸ್ಥಳೀಯ ಸಚಿವರು ಹಾಗೂ ಶಾಸಕರಿಗೆ ಇಲಾಖೆ ಕಾರ್ಯಕ್ರಮ ಮತ್ತು ಪ್ರಗತಿಯ ವಿವರಗಳನ್ನು ಕಾಲಕಾಲಕ್ಕೆ ಕಡ್ಡಾಯವಾಗಿ ನೀಡಬೇಕು ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಸೂಚಿಸಿದರು.ಕ್ರಿಯಾಶೀಲ ನಾಯಕಿ: ಖಂಡ್ರೆ ಶ್ಲಾಘನೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರು ಮಾತನಾಡಿ, ಲಕ್ಷ್ಮೀ ಹೆಬ್ಬಾಳಕರ್ ಅವರು ನಮ್ಮ ಸರ್ಕಾರದ ಬಹಳ ಕ್ರಿಯಾಶೀಲ ಸಚಿವರು, ಮಹಿಳೆಯರು, ಮಕ್ಕಳು, ವಿಕಲಚೇತರು ಹಾಗೂ ಹಿರಿಯ ನಾಗರಿಕರ ಬಗ್ಗೆ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡುತ್ತಿದ್ದಾರೆ. ಸದಾ ಹೆಚ್ಚಿನ ಅನುದಾನಕ್ಕಾಗಿ ಪ್ರಯತ್ನಿಸುತ್ತಲೇ ಇರುತ್ತಾರೆ. ಜವಾಬ್ದಾರಿಯುತವಾಗಿ ಇಲಾಖೆಯನ್ನು ನಿರ್ವಹಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.ಜಿಲ್ಲೆಯಲ್ಲಿ ಇಲಾಖೆಯಿಂದ ಆಗಬೇಕಿರುವ ಕೆಲಸ ಕಾರ್ಯಗಳ ಕುರಿತು ಅವರು ಸಭೆಯಲ್ಲಿ ಗಮನ ಸೆಳೆದರು. ಸಭೆ ಆರಂಭಕ್ಕೂ ಮುನ್ನ ಸಚಿವ ಈಶ್ವರ ಖಂಡ್ರೆ ಅವರು ಜಿಲ್ಲೆಗೆ ಮೊದಲ ಬಾರಿಗೆ ಆಗಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರನ್ನು ಸನ್ಮಾನಿಸಿದರು.
ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಒಳಗೊಂಡ ಕಲಬುರಗಿ ವಿಭಾಗದ ಮಟ್ಟದಲ್ಲಿ ಐಸಿಡಿಎಸ್ ಶಾಖೆಯಲ್ಲಿ ಕೈಗೊಂಡಿರುವ ಪ್ರಗತಿ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಶನಿವಾರವೂ ಸಭೆ ಮುಂದುವರಿಯಲಿದೆ.ಸಭೆಯಲ್ಲಿ ಪೌರಾಡಳಿತ ಮತ್ತು ಹಜ್ ಖಾತೆ ಸಚಿವ ರಹೀಮ್ ಖಾನ್, ಇಲಾಖೆಯ ಕಾರ್ಯದರ್ಶಿ ಶಾಮ್ಲಾ ಇಕ್ಬಾಲ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮ, ಜಿಪಂ ಸಿಇಒ ಡಾ. ಗಿರೀಶ ಬದೋಲೆ, ಎಸ್‌ಪಿ ಪ್ರದೀಪ್ ಗುಂಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕ ರಾಘವೇಂದ್ರ, ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮದ ರಾಜ್ಯ ಆಯುಕ್ತ ದಾಸ್ ಸೂರ್ಯವಂಶಿ, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿಎಚ್ ನಿಶ್ಚಲ್ ಸೇರಿದಂತೆ ಇಲಾಖೆಯ ಜಂಟಿ ನಿರ್ದೇಶಕರು, ಉಪ ನಿರ್ದೇಶಕರು, ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಕೇಂದ್ರದಲ್ಲಿ ಮತ್ತೇ ಪುಟಿದೇಳುತ್ತೆ ಕಾಂಗ್ರೆಸ್: ಸಚಿವೆಕನ್ನಡಪ್ರಭ ವಾರ್ತೆ, ಬೀದರ್‌ಕಾಂಗ್ರೆಸ್ ಪಕ್ಷಕ್ಕೆ ಸದ್ಯ ಹಿನ್ನಡೆಯಾಗಿರಬಹುದು, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ದಿನ ದೂರವಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ವ್ಯಕ್ತಪಡಿಸಿದರು.
ಅವರು ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ, ಮಹಿಳೆಯರು, ಬಡವರ ಬಗ್ಗೆ ಯೋಚಿಸಿ ಕಾಂಗ್ರೆಸ್ ಪಕ್ಷವು ಯೋಜನೆಗಳನ್ನು ರೂಪಿಸುತ್ತದೆ ಎಂದರು.ಕಳೆದ ಲೋಕಸಭಾ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿದೆ. ಕೇಂದ್ರ ಸರ್ಕಾರ ಬರೀ ಪೊಳ್ಳು ಭರವಸೆಯನ್ನು ಕೊಡುತ್ತಾ, ಜನ ಸಾಮಾನ್ಯರನ್ನು ವಂಚಿಸುತ್ತಾ ಬಂದಿದೆ. ಮುಂದಿನ ದಿನಗಳಲ್ಲಿ ಜನರೇ ಪಾಠ ಕಲಿಸುತ್ತಾರೆ ಎಂದು ಸಚಿವರು ಕಿಡಿಕಾರಿದರು.ಎಲ್ಲರ ಸಹಕಾರ ನಮ್ಮ ಪಕ್ಷದ ಮೇಲೆ ಇರಲಿ, ರಾಜ್ಯದ 7 ಕೋಟಿ ಜನಸಂಖ್ಯೆಗೆ ಏಕೈಕ ಮಹಿಳಾ ಸಚಿವೆಯಾಗಿರುವೆ. ಸಾಮಾನ್ಯ ಕಾರ್ಯಕರ್ತೆ ಆಗಿದ್ದ ನನ್ನನ್ನು ಗುರುತಿಸಿ ಪಕ್ಷ ನನಗೆ ಟಿಕೆಟ್ ನೀಡಿತು. ಬ್ಲಾಕ್, ಜಿಲ್ಲಾ, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆಯಾಗಿ ಕೆಲಸ ಮಾಡಿರುವೆ. ಎರಡು ಬಾರಿ ಸೋತರೂ ಪಕ್ಷ ನನ್ನನ್ನು ಗುರುತಿಸಿತು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದರು.ಕಾಂಗ್ರೆಸ್ ಪಕ್ಷದ ಕಚೇರಿ ನಮ್ಮ ಪಾಲಿಗೆ ದೇವಾಲಯವಿದ್ದಂತೆ. ಎಲ್ಲರೂ ಪಕ್ಷಕ್ಕಾಗಿ ದುಡಿಯೋಣ, ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು.
ಈ ವೇಳೆ ಮುಖಂಡರು ಹಾಗೂ ಕಾರ್ಯಕರ್ತರು ಆತ್ಮೀಯವಾಗಿ ಸನ್ಮಾನಿಸಿದರು. ಇದೇ ವೇಳೆ ಬಗರ್ ಹುಕುಂ ಸಮಿತಿಗೆ ಆಯ್ಕೆಗೊಂಡ ಸದಸ್ಯರನ್ನು ಸಚಿವರು ಸನ್ಮಾನಿಸಿದರು. ಈ ವೇಳೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಅಮೃತರಾವ್ ಚಿಮಕೋಡೆ, ಮಾಜಿ ಸಂಸದ ನರಸಿಂಗರಾವ್ ಸೂರ್ಯವಂಶಿ, ಜಿಲ್ಲಾಧ್ಯಕ್ಷ ಬಸವರಾಜ ಜಾಬಶೆಟ್ಟಿ, ಯುವ ಮುಖಂಡರಾದ ಅನೀಲಕುಮಾರ ಬೆಲ್ದಾರ್, ದತ್ತು ಮೂಲಗೆ, ಸಂಜಯ ಜಹಾಗೀರದಾರ್, ಶ್ರೀಕಾಂತ ಸ್ವಾಮಿ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.ಮಹಿಳೆಯರನ್ನು ಅವಮಾನಿಸುವುದೇಬಿಜೆಪಿಗರ ಕೆಲಸ: ಸಚಿವೆ ಹೆಬ್ಬಾಳ್ಕರ್
ಕನ್ನಡಪ್ರಭ ವಾರ್ತೆ, ಬೀದರ್‌ಬಿಜೆಪಿಗರು ಪದೆ ಪದೇ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ಅವರ ಹಾಗೂ ಆ ಪಕ್ಷದ ಮನಸ್ಥಿತಿಯನ್ನು ತೋರುತ್ತದೆ. ಮಹಿಳೆಯರನ್ನು ಅಪಮಾನ ಮಾಡುವುದು ಬಿಜೆಪಿಗರಿಗೆ ಚಾಳಿಯಾಗಿ ಬಿಟ್ಟಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ವಾಗ್ದಾಳಿ ನಡೆಸಿದರು.ನಗರಕ್ಕೆ ಆಗಮಿಸಿದ್ದ ಅರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ನೈತಿಕ ಸ್ಥೈರ್ಯ ಕುಗ್ಗಬೇಕು, ಮಹಿಳೆಯರು ಯಾರೂ ಮುಂದೆ ಬರಬಾರದು ಎಂಬುವದು ಬಿಜೆಪಿಗರ ಯೋಚನೆಯಾಗಿದ್ದು ರವಿಕುಮಾರ ಹೇಳಿಕೆಯಿಂದ ಬಿಜೆಪಿಯವರ ಎಲ್ಲರ ಮನಸ್ಥಿತಿ ಒಂದೇ ರೀತಿ ಇದೆ ಎಂಬಂತಾಗಿದೆ ಎಂದರು.ಬಿಜೆಪಿಯವರು ತತ್ವ ಸಿದ್ದಾಂತ ಅಂತ ಹೇಳುತ್ತಾರೆ, ಆದರೆ ಈ ರೀತಿ ಮನುಸ್ಮೃತಿಯನ್ನು ಎಲ್ಲಾ ಕಡೆ ಬಿತ್ತನೆ ಮಾಡಲು ಹೊರಟ್ಟಿದ್ದಾರೆ. ಹಾಗೇ ಕೆಟ್ಟ ಬಾಯಿ, ಹೊಲಸು ಬಾಯಿ ಏನು ಮಾತಾಡಿದರೂ ಜನ ಸಹಿಸುತ್ತಾರೆ, ಕರ್ನಾಟಕ ರಾಜ್ಯದ ಜನ ಅವರನ್ನ ಬದುಕಿಸುತ್ತಾರೆ ಎಂಬ ಭಾವನೆ ಅವರಿಗೆ ಬಂದು ಬಿಟ್ಟಿದೆ. ಇದು ಅತ್ಯಂತ ಖಂಡನೀಯ, ಹೆಣ್ಣು ಮಕ್ಕಳನ್ನು ಅವಮಾನ ಮಾಡಿದರೆ ಖಂಡಿಸುವುದು ನಮ್ಮ ಸಮಾಜದ ಧರ್ಮ ಎಂದರು.ನಾನು ಪಕ್ಷದ ಶಿಸ್ತಿನ ಸಿಪಾಯಿ:
ರಾಜ್ಯದಲ್ಲಿ ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗಲಿದೆ ಎಂಬ ವಿಚಾರ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಬಗ್ಗೆ ನನ್ನ ಕಡೆಯಿಂದ ಯಾವುದೇ ಉತ್ತರ ನಿಮಗೆ ಸಿಗುವುದಿಲ್ಲ. ನಾನು ಪಕ್ಷದ ಒಬ್ಬ ಶಿಸ್ತಿನ ಸಿಪಾಯಿ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದರು.