ಅಂಗನವಾಡಿ ಮೇಲ್ಛಾವಣಿ ಪದರು ಕುಸಿದು ನಾಲ್ಕು ಮಕ್ಕಳಿಗೆ ತೀವ್ರ ಗಾಯ

KannadaprabhaNewsNetwork | Published : Sep 24, 2024 1:53 AM

ಸಾರಾಂಶ

ಇಲ್ಲಿನ ಮೆಹಬೂಬ ನಗರದ 7ನೇ ವಾರ್ಡ್‌ನ 11ನೇ ಅಂಗನವಾಡಿ ಕೇಂದ್ರದ ಮೇಲ್ಚಾವಣಿಯ ಪ್ಲಾಸ್ಟರಿಂಗ್‌ ಪದರು ಕುಸಿದು ಬಿದ್ದ ಪರಿಣಾಮವಾಗಿ ನಾಲ್ಕು ಮಕ್ಕಳು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ಗಂಗಾವತಿಯ ಮೆಹಬೂಬ ನಗರದಲ್ಲಿ ಘಟನೆ

ಕನ್ನಡಪ್ರಭ ವಾರ್ತೆ ಗಂಗಾವತಿ

ಇಲ್ಲಿನ ಮೆಹಬೂಬ ನಗರದ 7ನೇ ವಾರ್ಡ್‌ನ 11ನೇ ಅಂಗನವಾಡಿ ಕೇಂದ್ರದ ಮೇಲ್ಚಾವಣಿಯ ಪ್ಲಾಸ್ಟರಿಂಗ್‌ ಪದರು ಕುಸಿದು ಬಿದ್ದ ಪರಿಣಾಮವಾಗಿ ನಾಲ್ಕು ಮಕ್ಕಳು ತೀವ್ರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ.

ನಾಲ್ಕರಿಂದ ಐದು ವರ್ಷದೊಳಗಿನ ಅಮಾನ್ ಸೈಯದ್, ಮರ್ದಾನ್, ಮನ್ವಿತಾ ಮತ್ತು ಸುರಕ್ಷಾ ತೀವ್ರ ಗಾಯಗೊಂಡಿದ್ದಾರೆ. ಇವರನ್ನು ಗಂಗಾವತಿ ಸರ್ಕಾರಿ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೆಳಗ್ಗೆ ಎಂದಿನಂತೆ ಅಂಗನವಾಡಿ ಕೇಂದ್ರಕ್ಕೆ ಮಕ್ಕಳು ಹೋಗಿದ್ದರು. ಕೇಂದ್ರದ ಕಾರ್ಯಕರ್ತೆ ಹಸೀನಾ ಮಕ್ಕಳನ್ನು ಕೂಡಿಸಿ ಪಾಠ ಮಾಡುತ್ತಿರುವಾಗ ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರಿಂಗ್‌ನ ಪದರು ಒಂದು ಭಾಗ ಕುಸಿದು ಬಿದ್ದಿದೆ. 4 ಮಕ್ಕಳ ಕೈ, ಕಾಲಿಗೆ ಗಾಯಗಳಾಗಿವೆ. ಸುದ್ದಿ ತಿಳಿಯುತ್ತಿದ್ದಂತೆ ಪಾಲಕರು ಕೇಂದ್ರಕ್ಕೆ ಧಾವಿಸಿ ಮಕ್ಕಳ ರಕ್ಷಣೆಗೆ ಮುಂದಾಗಿದ್ದಾರೆ.

ಕೇಂದ್ರದಲ್ಲಿ ಸುಮಾರು 20ಕ್ಕೂ ಹೆಚ್ಚು ಮಕ್ಕಳಿದ್ದು, ಅದೃಷ್ಟವಶಾತ್ ‌ಜೀವಾಪಾಯದಿಂದ ಮಕ್ಕಳು ಪಾರಾಗಿದ್ದಾರೆ.

ಘಟನೆ ಹಿನ್ನೆಲೆ ಸ್ಥಳಕ್ಕೆ ನಗರಸಭೆ ಅಧ್ಯಕ್ಷ ಮೌಲಾಸಾಬ್, ವಾರ್ಡ್ ಸದಸ್ಯ ಮನೋಹರಸ್ವಾಮಿ, ರಮೇಶ ಚೌಡ್ಕಿ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ತಾಪಂ ಕಾರ್ಯನಿರ್ವಾಹಕಾಧಿಕಾರಿ ಲಕ್ಷ್ಮೀದೇವಿ, ಸಿಡಿಪಿಒ ಜಯಶ್ರೀ ದೇಸಾಯಿ, ಮೇಲ್ವಿಚಾರಕಿ ಚಂದ್ರಮ್ಮ ಭೇಟಿ ನೀಡಿ ಪರಿಶೀಲನೆ‌ ನಡೆಸಿದರು.

ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಸದ್ಯ ಚೇತರಿಸಿಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ನೂತನ ಕಟ್ಟಡ ನಿರ್ಮಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಪಾಲಕರು ಒತ್ತಾಯಿಸಿದ್ದಾರೆ.

ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಶಾಸಕರ ಸೂಚನೆ

ಗಂಗಾವತಿ:

ಅಂಗನವಾಡಿ ಕೇಂದ್ರದ ಮೇಲ್ಚಾವಣಿಯ ಪ್ಲಾಸ್ಟರಿಂಗ್‌ ಪದರು ಕುಸಿದು ಬಿದ್ದ ಪರಿಣಾಮವಾಗಿ ನಾಲ್ಕು ಮಕ್ಕಳು ತೀವ್ರವಾಗಿ ಗಾಯಗೊಂದ್ದು, ಕೂಡಲೇ ಕಟ್ಟಡ ನಿರ್ಮಿಸಿದ ಗುತ್ತಿಗೆದಾರನ ಮೇಲೆ ಕ್ರಮ ಕೈಗೊಳ್ಳುವಂತೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ತಾವು ಗಂಗಾವತಿಯಲ್ಲಿ ಇಲ್ಲದ ಕಾರಣ ನಗರಸಭೆ ಅಧ್ಯಕ್ಷ ಮೌಲಾಸಾಬ್ ಹಾಗೂ ನಗರಸಭೆಯ ಎಲ್ಲ ಸದಸ್ಯರಿಗೆ ಮಕ್ಕಳ ಆರೋಗ್ಯ ವಿಚಾರಿಸುವಂತೆ ತಿಳಿಸಿದ್ದೇನೆ. ಕೂಡಲೇ ಅಂಗನವಾಡಿ ಕಟ್ಟಡದ ಗುತ್ತಿಗೆದಾರರ ವಿರುದ್ಧ ಸಿಡಿಪಿಒ ಜಯಶ್ರೀ ದೇಸಾಯಿ ಹಾಗೂ ಪೌರಾಯುಕ್ತ ವಿರೂಪಾಕ್ಷ ಮೂರ್ತಿ ಅವರಿಗೆ ದೂರು ನೀಡಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

Share this article