ಋಷಿಶ್ರೀ ವಿದ್ಯಾಸಂಸ್ಥೆಯ ಧೋರಣೆ ವಿರುದ್ಧ ತನಿಖೆಗೆ ಆಗ್ರಹ

KannadaprabhaNewsNetwork |  
Published : Sep 24, 2024, 01:53 AM IST
ಋಷಿಶ್ರೀ ವಿದ್ಯಾಸಂಸ್ಥೆಯ ವಿರುದ್ಧ ಪೋಷಕರ ಆಕ್ರೋಶ.  | Kannada Prabha

ಸಾರಾಂಶ

ಮಾತು ಕೊಟ್ಟಂತೆ ನಡೆಯದ ಋಷಿಶ್ರೀ ವಿದ್ಯಾಸಂಸ್ಥೆಯ ವಿರುದ್ಧ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಕೊಟ್ಟಂತಹ ಠೇವಣಿ ಹಣವನ್ನು ಮರುಪಾವತಿ ಮಾಡುತ್ತಿಲ್ಲ ಹಾಗೂ ಸಿ.ಬಿ.ಎಸ್.ಇ.ಯ ನಿಯಮಾನುಸಾರ ಶಾಲೆ ನಡೆಸುತ್ತಿಲ್ಲ. ನಮ್ಮ ಹಣ ವಾಪಸ್ ಕೊಡಿಸಿ ಸೂಕ್ತ ತನಿಖೆ ನಡೆಸಲು ಆಗ್ರಹಿಸಿ ಹಾಗೂ ಶಾಲೆಯ ಧೋರಣೆ ಖಂಡಿಸಿ ಡಿಸಿ ಕಚೇರಿ ಮುಂದೆ ಹೋರಾಟ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಹಾಸನ

ಮಾತು ಕೊಟ್ಟಂತೆ ನಡೆಯದ ಋಷಿಶ್ರೀ ವಿದ್ಯಾಸಂಸ್ಥೆಯ ವಿರುದ್ಧ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ನಾವು ಕೊಟ್ಟಂತಹ ಠೇವಣಿ ಹಣವನ್ನು ಮರುಪಾವತಿ ಮಾಡುತ್ತಿಲ್ಲ ಹಾಗೂ ಸಿ.ಬಿ.ಎಸ್.ಇ.ಯ ನಿಯಮಾನುಸಾರ ಶಾಲೆ ನಡೆಸುತ್ತಿಲ್ಲ. ನಮ್ಮ ಹಣ ವಾಪಸ್ ಕೊಡಿಸಿ ಸೂಕ್ತ ತನಿಖೆ ನಡೆಸಲು ಆಗ್ರಹಿಸಿ ಹಾಗೂ ಶಾಲೆಯ ಧೋರಣೆ ಖಂಡಿಸಿ ಡಿಸಿ ಕಚೇರಿ ಮುಂದೆ ಹೋರಾಟ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಇದೇ ವೇಳೆ ಮಂಜುನಾಥ್ ಮಾಧ್ಯಮದೊಂದಿಗೆ ಮಾತನಾಡಿ, ಸುಮಾರು 350 ಜನ ವಿದ್ಯಾರ್ಥಿಗಳ ಪೋಷಕರುಗಳಿಂದ 2016-17ನೇ ಸಾಲಿನಿಂದ 2019-20ನೇ ಸಾಲಿನವರೆಗೂ ತಲಾ 1 ಲಕ್ಷ ರು.ಗಳನ್ನು ಪಡೆದು ಕೆಲವರಿಗೆ 7 ವರ್ಷ ಮತ್ತು ಇನ್ನು ಕೆಲವರಿಗೆ 10 ವರ್ಷಗಳ ಕಾಲ ನಿಮ್ಮ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುವುದಾಗಿ ಮತ್ತು ಆ ಹಣವನ್ನು ತಮ್ಮ ಮಕ್ಕಳು ನಮ್ಮ ಶಾಲೆ ಬಿಟ್ಟ 40 ದಿನಗಳಲ್ಲಿ ವಾಪಸ್ ಕೊಡುವುದಾಗಿ ಛಾಪಾ ಕಾಗದದಲ್ಲಿ ಬರೆದು ಕೊಟ್ಟಿದ್ದರು. ಆದರೆ ಈಗ 2023-24ನೇ ಸಾಲಿನ ಪ್ರವೇಶಾತಿ ಸಮಯದಲ್ಲಿ ನಮ್ಮ ಶಾಲೆಯ ಖರ್ಚು ವೆಚ್ಚಗಳು ಅಧಿಕವಾಗಿರುವುದರಿಂದ ಶಾಲೆಯ ಅಭಿವೃದ್ಧಿಗೆಂದು ಎಲ್ಲರಿಂದ 5 ಸಾವಿರ ರು.ಗಳನ್ನು ಪಡೆದುಕೊಂಡಿದ್ದರು. ಈಗ 2024-25ನೇ ಸಾಲಿನಲ್ಲಿ ಪೋಷಕರುಗಳಿಂದ ಬೇರೆ ವಿದ್ಯಾರ್ಥಿಗಳು ಕಟ್ಟುವ ಹಣದ ಶೇಕಡ 60ರಷ್ಟು ಹಣ ಅಂದರೆ ಪ್ರತಿಯೊಬ್ಬರು 35 ಸಾವಿರ ರು. ಕಟ್ಟುವಂತೆ ವಿದ್ಯಾಸಂಸ್ಥೆಯವರು ತಿಳಿಸಿದ್ದಾರೆ. ಯಾರು ಹಣ ಕಟ್ಟಲು ಆಗುವುದಿಲ್ಲ ಅಂತಹ ಮಕ್ಕಳನ್ನು ಕರೆದುಕೊಂಡು ಹೋಗಬಹುದು ಎಂದು ಸೂಚಿಸಿದ್ದಾರೆ ಎಂದರು.

ಈಗ ಬೇರೆ ಶಾಲೆಗೆ ಸೇರಿಸಲಾಗಿದ್ದು, ಒಪ್ಪಂದದ ಪ್ರಕಾರ ನಮ್ಮಿಂದ ಪಡೆದ ಹಣವನ್ನು 40 ದಿನಗಳ ಒಳಗೆ ಕೊಡುವುದಾಗಿ ಛಾಪಾ ಕಾಗದದಲ್ಲಿ ಬರೆದುಕೊಡಲಾಗಿದ್ದು, ಆ ಹಣವನ್ನು ಪೋಷಕರು ಒಟ್ಟಿಗೆ ಕೇಳಲು ಹೋದ ವೇಳೆ ಗ್ರಾಮಾಂತರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ನಂತರ ಜುಲೈ 31ರಂದು ಎಲ್ಲರಿಗೂ ಹಣ ಕೊಡುವುದಾಗಿ ತಿಳಿಸಿದರು. ಅವರ ಮಾತಿಗೆ ಪೋಷಕರು ಒಪ್ಪಿಗೆ ಕೊಡಲಾಗಿತ್ತು. ಮತ್ತೆ ಶಾಲೆಗೆ ಹೋಗಿ ಹಣ ಕೇಳಿದರೇ ಆಗಸ್ಟ್ 10ಕ್ಕೆ ಹಣ ನೀಡುವುದಾಗಿ ಕಾಲಾವಕಾಶ ಕೇಳಿದರು. ಇದರಂತೆ ಅನೇಕ ಬಾರಿ ಕಾಲಾವಕಾಶ ಕೇಳುತ್ತಲೆ ದಿನಗಳ ಮುಂದೂಡುತ್ತ ಹೋಗಿದ್ದಾರೆ ಎಂದು ದೂರಿದರು.ನಂತರ ಗ್ರಾಮಾಂತರ ಪೊಲೀಸ್ ಅಧಿಕಾರಿಗಳೊಂದಿಗೆ ಮತ್ತೊಂದು ಸಭೆ ನಡೆಸಿ ಇವರ ಸಮ್ಮುಖದಲ್ಲಿ ಡಿಸೆಂಬರ್‌ ತಿಂಗಳಲ್ಲಿ 50 ಸಾವಿರ ರು. ಗಳನ್ನು ಮತ್ತೆ ಉಳಿದ 50 ಸಾವಿರ ರು.ಗಳನ್ನು ಮಾರ್ಚ್ ತಿಂಗಳಲ್ಲಿ ನೀಡುವಂತೆ ಜೊತೆಗೆ ಒಂದು ವಾರದಲ್ಲಿ ಚೆಕ್ ನೀಡಲು ತಿಳಿಸಲಾಗಿದ್ದು, ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸುರೇಶ್ ಒಪ್ಪಿಕೊಂಡಿದ್ದಾರೆ. ಕಾನೂನು ನಿಯಮದ ಪ್ರಕಾರ ಕೂಡಲೇ ನಮ್ಮ ಹಣವನ್ನು ವಾಪಸ್ ಕೊಡಿಸುವಂತೆ ಮನವಿ ಮಾಡಿ, ಮಕ್ಕಳ ಪೋಷಕರು ತಮ್ಮ ಅಳಲು ತೋಡಿಕೊಂಡರು.

ಇನ್ನು ಋಷಿಶ್ರೀ ವಿದ್ಯಾಸಂಸ್ಥೆಯ ಶಾಲೆಯಲ್ಲಿ ಸಿಬಿಎಸ್‌ಇಯ ನಿಯಮದ ಪ್ರಕಾರ ಶಾಲೆಯನ್ನು ನಡೆಸದೇ, ಸಮರ್ಪಕ ಸಿಬ್ಬಂದಿ ವರ್ಗದವರು ಇಲ್ಲದೇ ಇರುವುದರಿಂದ ನಮ್ಮ ಮಕ್ಕಳನ್ನು ಈ ಶಾಲೆಯಿಂದ ಬಿಡಿಸಿದ್ದೇವೆ. ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು. ಜೊತೆಗೆ ಸೂಕ್ತ ತನಿಖೆ ನಡೆಸಿ ಸತ್ಯಾಂಶ ತಿಳಿಯಬೇಕು ಎಂದು ಕೋರಿದರು.

ಇದೇ ವೇಳೆ ವಂಚಿತ ಪೋಷಕರಾದ ಸಂಜೀವ್, ಪ್ರದೀಪ್, ವಿನಾಯಕ, ಸುಬ್ರಮಣ್ಯ, ಶಶಿಕಲಾ, ವಿನೂತಾ, ರೇಣುಕಾ, ಸಂತೋಷ್, ಯೋಗಮೂರ್ತಿ, ಶೋಭ, ಗವಿರಂಗ, ರಮೇಶ್, ರವಿಶಂಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಬಿಡಿಸಿಸಿ ಬ್ಯಾಂಕ್‌ ಹಿತರಕ್ಷಣೆಗೆ ನಾವು ಬದ್ಧ