ಮರಗಳ ಕಡಿತಲೆ: 3 ದಿನಗಳೊಳಗೆ ವರದಿ ಕೇಳಿ ಸಚಿವ ಖಂಡ್ರೆ ನೋಟಿಸ್‌ ಜಾರಿ

KannadaprabhaNewsNetwork | Published : Sep 24, 2024 1:53 AM

ಸಾರಾಂಶ

ಶಾಸಕರ ಕಾರಿನ ಮೇಲೆ ಕೊಂಬೆಯೊಂದು ಬಿದ್ದ ಕಾರಣ ಅನುಮತಿ ಪಡೆಯದೇ ಮರ ಕಡಿತಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಹಲವಾರು ಬೃಹತ್ ಮರಗಳನ್ನು ಕಡಿದು ದಿಮ್ಮಿಗಳನ್ನು ಲಾರಿಗಳಲ್ಲಿ ಸಾಗಿಸಲಾಗಿದೆ ಎನ್ನಲಾಗಿದೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಸಿಸಿಎಫ್ ಕಚೇರಿ ಆವರಣದಲ್ಲಿ ಮರ ಕಡಿತಲೆ ಪ್ರಕರಣ ಹಿನ್ನೆಲೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ನೋಟಿಸ್ ಜಾರಿ ಮಾಡಿದ್ದು, ಈ ಬಗ್ಗೆ ಸಂಪೂರ್ಣ ವಿವರವನ್ನು 3 ದಿನಗಳೊಳಗೆ ಸಲ್ಲಿಸಲು ಸೂಚನೆ ನೀಡಿದ್ದಾರೆ.

ಶಿವಮೊಗ್ಗ ನಗರದಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯ ಆವರಣದಲ್ಲಿದ್ದ ನೂರಾರು ವರ್ಷದ ಬೃಹತ್ ಮರಗಳನ್ನು ಯಾರಿಗೂ ತೊಂದರೆ ಮಾಡದಿದ್ದ ಸ್ಥಿತಿಯಲ್ಲಿದ್ದರೂ ಮರಗಳನ್ನು ಕಡಿತಲೆ ಮಾಡಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಅನುಮತಿ ಪಡೆಯದೆ ಮರಗಳನ್ನು ಕಡಿಯಲಾಗಿದೆ ಎಂದು ಆರೋಪವನ್ನು ಮಾಡಿದ್ದಾರೆ. ಶಾಸಕರ ಕಾರಿನ ಮೇಲೆ ಕೊಂಬೆಯೊಂದು ಬಿದ್ದ ಕಾರಣ ಅನುಮತಿ ಪಡೆಯದೇ ಮರ ಕಡಿತಲೆ ಮಾಡಲಾಗಿದೆ ಎಂದು ತಿಳಿದು ಬಂದಿದ್ದು, ಹಲವಾರು ಬೃಹತ್ ಮರಗಳನ್ನು ಕಡಿದು ದಿಮ್ಮಿಗಳನ್ನು ಲಾರಿಗಳಲ್ಲಿ ಸಾಗಿಸಲಾಗಿದೆ. ಎಂಬ ಚಿತ್ರ ಮಾಹಿತಿ ಅರಣ್ಯ ಸಚಿವರ ಕಚೇರಿಗೆ ದೂರನ್ನು ಸಲ್ಲಿಸಲಾಗಿದ್ದು, ಸಿಸಿಎಫ್ ಸೇರಿ ದಂತೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಕ್ಕೆ ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.ಅರಣ್ಯ ಇಲಾಖೆಯ ಕಚೇರಿಯಲ್ಲಿ ಅಕ್ರಮ ‌ಮರ ಕಡಿತಲೆ ಆಗಿದೆ ಎಂಬ ದೂರು ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಅವರು ನೋಟಿಸ್ ಜಾರಿ ಮಾಡಿದ್ದು, ಹಲವಾರು ಬೃಹತ್ ಮರಗಳನ್ನು ಕಡಿದು ದಿಮ್ಮಿಗಳನ್ನು ಲಾರಿಗಳಲ್ಲಿ ಸಾಗಿಸಲಾಗಿದೆ ಎಂಬ ಸಚಿತ್ರ ಮಾಹಿತಿ ಅರಣ್ಯ ಸಚಿವರ ಕಚೇರಿಗೆ ಬಂದಿದೆ. ಅರಣ್ಯ ಇಲಾಖೆಯ ಕಚೇರಿ ಆವರಣದ ಈ ಬೃಹತ್ ವೃಕ್ಷಗಳ ಹನನಕ್ಕೆ ಕಾರಣವೇನು? ನಿಯಮಾನುಸಾರ ಮರ ಕಡಿತಲೆಗೆ ಅರ್ಜಿ ಸಲ್ಲಿಸಿ ಮರ ಕಡಿಯಲು ಆದೇಶ ಪಡೆಯಲಾಗಿದೆಯೇ? ಕಡಿದ ಮರಗಳನ್ನು ಯಾವ ಡಿಪೋಗೆ ಸಾಗಿಸಲಾಗಿದೆ ಈ ಬಗ್ಗೆ ಸಂಪೂರ್ಣ ವಿವರವನ್ನು 3 ದಿನಗಳ ಒಳಗಾಗಿ ಈ ಕಚೇರಿಗೆ ಸಲ್ಲಿಸಲು ಈ ಮೂಲಕ ಸೂಚಿಸಿ ನೋಟಿಸ್ ನೀಡಲಾಗಿದೆ. ಸಚಿವರ ನೋಟಿಸ್ ಹಿನ್ನೆಲೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಅರಣ್ಯ ಕಾರ್ಯಪಡೆ ಮುಖ್ಯಸ್ಥರು ಕೂಡ ಅಲರ್ಟ್ ಆಗಿದ್ದಾರೆ.

Share this article