ಮಹದೇವಪ್ಪ ಎಂ. ಸ್ವಾಮಿಶಿರಹಟ್ಟಿ: ತಾಲೂಕಿನ ಕುಸಲಾಪುರದಲ್ಲಿ ಹಲವಾರು ವರ್ಷಗಳ ಹಿಂದೆಯೇ ಅಂಗನವಾಡಿ ಕೇಂದ್ರ ಕಟ್ಟಿದ್ದು, ಸದ್ಯ ಕೇಂದ್ರದ ಮೇಲ್ಭಾಗದ ಸಿಮೆಂಟ್ ಹಕ್ಕಳಿ ಉದುರಿ ಬೀಳುತ್ತಿದ್ದು, ಚಿಕ್ಕ ಚಿಕ್ಕ ಮಕ್ಕಳು ನಿತ್ಯ ಜೀವ ಭಯದಲ್ಲಿಯೇ ಕುಳಿತುಕೊಳ್ಳುವ ಅನಿವಾರ್ಯತೆ ಎದುರಾಗಿದೆ.ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ ೧೮ ಸಂಪೂರ್ಣ ಶಿಥಿಲಗೊಂಡಿದ್ದು, ಸದ್ಯ ಸುರಿಯುತ್ತಿರುವ ಮಳೆಗೆ ಸೋರುವ ಜತೆಗೆ ಸಿಮೆಂಟ್ ಪದರು ಉದುರಿ ಬೀಳುತ್ತಿದ್ದು, ಮಕ್ಕಳ ತಲೆಮೇಲೆ ಬಿದ್ದರೆ ಯಾವುದೇ ಕ್ಷಣದಲ್ಲಿ ಮಕ್ಕಳ ಜೀವಕ್ಕೆ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ. 40ಕ್ಕೂ ಹೆಚ್ಚು ಮಕ್ಕಳು ಅಂಗನವಾಡಿ ಕೇಂದ್ರದಲ್ಲಿದ್ದು, ಸರ್ಕಾರ ಪೂರೈಕೆ ಮಾಡುವ ಆಹಾರ ಪದಾರ್ಥಗಳು ಗುಣಮಟ್ಟದಿಂದ ಕೂಡಿಲ್ಲವೆಂದು ಸ್ಥಳೀಯರು ಗಂಭೀರ ಆರೋಪ ಮಾಡುತ್ತಾರೆ.ಅಂಗನವಾಡಿ ಕೇಂದ್ರ ಇದುವರೆಗೂ ಬರೀ ತಾತ್ಕಾಲಿಕ ರಿಪೇರಿ ಮಾಡುತ್ತಾ ಬರೀ ಸುಣ್ಣ ಬಣ್ಣ ಬಳಿಯುತ್ತಿದ್ದು, ಕಗ್ಗತ್ತಲೆಯ ಶಿಶು ಕೇಂದ್ರವಾಗಿದೆ. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಇದೊಂದು ಜೈಲಿನ ಕತ್ತಲೆ ಕೋಣೆಯಂತೆ ಭಾಸವಾಗುತ್ತಿದೆ.ಮನೆಯಲ್ಲಿ ಆಟವಾಡಿಕೊಂಡು ಕಾಲಕಳೆಯುತ್ತಿದ್ದ ಮಕ್ಕಳನ್ನು ಪೋಷಕರು ಅಂಗನವಾಡಿ ಕೇಂದ್ರಕ್ಕೆ ತಂದು ಬಿಡುತ್ತಾರೆ. ಆದರೆ ಇಲ್ಲಿ ಮಕ್ಕಳಿಗೆ ವಿದ್ಯುತ್, ಶೌಚಾಲಯ, ಕುಡಿಯುವ ನೀರು ಸೇರಿ ಯಾವುದೇ ತರಹದ ಅನುಕೂಲಗಳು ಇಲ್ಲ.ರೇಷನ್ ಇಡಲು, ಅಡುಗೆ ಮಾಡಲು ವ್ಯವಸ್ಥೆ ಇಲ್ಲ: ಸರ್ಕಾರ ಮಕ್ಕಳಿಗೆ, ಗರ್ಭಿಣಿ, ಬಾಣಂತಿಯರಿಗೆ ಕೊಡಲು ಪೂರೈಕೆ ಮಾಡುವ ರೇಷನ್ (ಆಹಾರ ಪದಾರ್ಥ ಸಾಮಗ್ರಿ) ಇಟ್ಟುಕೊಳ್ಳು ವ್ಯವಸ್ಥೆ ಇಲ್ಲ. ಅಡುಗೆ ಕೋಣೆಯು ಇಲ್ಲ. ಸಿಮೆಂಟ್ ಪದರು ಉದುರಿ ಬೀಳುತ್ತಿದ್ದು, ಆಹಾರ ಪದಾರ್ಥದಲ್ಲಿ ಸಿಮೆಂಟ್, ಉಸುಕು (ಮರಳು) ಮಿಶ್ರಣವಾಗುತ್ತಿದೆ. ಮಕ್ಕಳಿಗೆ ಆಟದ ಮೈದಾನ ಕೂಡ ಇಲ್ಲ. ಈ ಎಲ್ಲ ಅವ್ಯವಸ್ಥೆ ಕುರಿತು ಶಿಶು ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದರೂ ಇತ್ತ ತಿರುಗಿ ನೋಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.ಮಸೀದಿ, ದೇವಸ್ಥಾನದಲ್ಲಿ ಪ್ರಾರಂಭ:ಸದ್ಯ ಮಕ್ಕಳ ಜೀವ ರಕ್ಷಣೆ ಹಿತದೃಷ್ಟಿಯಂದ ಗ್ರಾಮಸ್ಥರೇ ಅಂಗನವಾಡಿ ಮಕ್ಕಳನ್ನು ಪಕ್ಕದ ಮಸೀದಿ, ದೇವಸ್ಥಾನದಲ್ಲಿ ಕೂಡ್ರಿಸಲು ಪ್ರಾರಂಭಿಸಿದ್ದು, ಅಂಗನವಾಡಿ ಕೇಂದ್ರದಲ್ಲಿ ಮಕ್ಕಳು ಕುಳಿತುಕೊಳ್ಳಲು ಭಯಪಡುತ್ತಿದ್ದಾರೆ.
ಕುಸಲಾಪುರದ ಅಂಗನವಾಡಿ ಕೇಂದ್ರವನ್ನು ನೆಲಸಮ ಮಾಡಿ ಹೊಸ ಕಟ್ಟಡ ಕಟ್ಟಲು ಮೇಲಧಿಕಾರಿಗಳ ಗಮನಕ್ಕೆ ತರಲಾಗಿದೆ. ಸದ್ಯ ಗ್ರಾಮದಲ್ಲಿ ಬಾಡಿಗೆ ಕಟ್ಟಡ ನೋಡಿ ತರಗತಿ ಪ್ರಾರಂಭಿಸಲು ಸೂಚಿಸಲಾಗಿದೆ ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಮೃತ್ಯುಂಜಯ ಗುಡ್ಡದಾನವೇರಿ ಹೇಳಿದರು. ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ರಕ್ಷಣೆಗಾಗಲಿ, ಅಡುಗೆ ಮಾಡಲು ಕೂಡ ಸ್ಥಳವಿಲ್ಲ. ಪದೇ ಪದೇ ಕೇಂದ್ರದ ಚಾವಣಿಯ ಸಿಮೆಂಟ್ ಪದರು, ಹಕ್ಕಳಿ ಉದುರಿ ಬೀಳುತ್ತಿದ್ದು, ಮಕ್ಕಳ ಜೀವಕ್ಕೆ ಅಪಾಯವಿದೆ. ಅಧಿಕಾರಿಗಳಿಗೆ ಅನೇಕ ಬಾರಿ ಹೇಳಿದರೂ ಇತ್ತ ತಿರುಗಿ ನೋಡುತ್ತಿಲ್ಲ. ಕಳೆದ ವರ್ಷ ರಿಪೇರಿ ಮಾಡಿಸಿ ಬಿಲ್ ತೆಗೆದಿದ್ದು, ಮತ್ತೆ ತರಗತಿ ಆರಂಭವಾಗುವಷ್ಟರಲ್ಲಿ ಸಿಮೆಂಟ್ ಹಕ್ಕಳಿ ಉದುರುತ್ತಿದೆ ಎಂದು ಗ್ರಾಮದ ಮುಖಂಡ ಗುಡದಪ್ಪ ಬಂಡಾರಿ ಹೇಳಿದರು.