ಲಕ್ಷ್ಮೇಶ್ವರ: ಪೆಹಲ್ಗಾಂವ್‌ನಲ್ಲಿ 26 ಹಿಂದೂ ಪ್ರವಾಸಿಗರನ್ನು ಪಾಕಿಸ್ತಾನಿ ಪ್ರಾಯೋಜಿತ ಉಗ್ರಗಾಮಿಗಳು ಕೊಂದು ಹಾಕಿರುವ ಕುಕೃತ್ಯವನ್ನು ಇನ್ನು ಮುಂದೆ ಭಾರತವು ಸಹಿಸುವುದಿಲ್ಲ, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಶಾಸ್ತಿ ಕಾದಿದೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಮಂಗಳವಾರ ಮಾಜಿ ಸೈನಿಕರ ಸಂಘ, ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತು ಹಾಗೂ ಪಟ್ಟಣದ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸೋಮೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ತಿರಂಗಾ ಯಾತ್ರೆಯು ಮಹಾಕವಿ ಪಂಪ ವೃತ್ತದಲ್ಲಿ ಮುಕ್ತಾಯಗೊಂಡ ಸಮಾರಂಭದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಭಾರತೀಯ ಸೈನಿಕರು ಆಪರೇಶನ್ ಸಿಂದೂರ ಎಂಬ ಪ್ರತಿದಾಳಿ ನಡೆಸಿ ಪಾಕಿಸ್ತಾನಿ ಉಗ್ರಗಾಮಿಗಳಿಗೆ ತಕ್ಕ ಉತ್ತರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಕಾಶ್ಮೀರದ ಪೆಹಲ್ಗಾಂವ್ ನಡೆದ ನರಮೇಧದಲ್ಲಿ ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿ ದಾಳಿ ಮಾಡುವ ಮೂಲಕ ಪಾಕಿಸ್ತಾನಿ ಉಗ್ರರರು ಅಟ್ಟಹಾಸ ಮೆರೆದಿದ್ದರು. ಉಗ್ರಗಾಮಿಗಳ ತಯಾರಿಸುವ ಪಾಕಿಸ್ತಾನದೊಳಗೆ ಇರುವ ಶಿಬಿರಗಳ ಮೇಲೆ ಭಾರತೀಯ ಸೇನೆ ದಾಳಿ ಮಾಡುವ ಮೂಲಕ ಅವರ ನೆಲೆಗಳನ್ನು ಧ್ವಂಸ ಮಾಡಿದ್ದು ಭಾರತೀಯರ ಸೇನೆಯ ಪರಾಕ್ರಮ ತೋರಿಸುತ್ತದೆ. ನಮ್ಮ ಸೈನ್ಯವು ಪಾಕಿಸ್ಥಾನದ ದಾಳಿ ತಡೆಯುವ ಮೂಲಕ ಅವರ ರಾಡಾರ್ ಹಾಗೂ ಕ್ಷಿಪಣಿಗಳನ್ನು ಆಕಾಶದಲ್ಲಿಯೇ ಹೊಡೆದುರುಳಿಸಿ ಪರಾಕ್ರಮ ಮೆರೆದಿದ್ದಾರೆ. ನಮ್ಮ ಸೈನಿಕರ ಸಾಹಸ ಹಾಗೂ ಪರಾಕ್ರಮಕ್ಕೆ ಜಗತ್ತಿನ ಹಲವು ದೇಶಗಳು ಮೆಚ್ಚಿಕೊಂಡಿವೆ. ನಮ್ಮ ಯುದ್ಧ ತಂತ್ರ ಮತ್ತು ಕೌಶಲ್ಯಗಳು ಜಗತ್ತಿನ ಹಲವು ದೇಶಗಳು ಪ್ರಶಂಸಿಸಿವೆ. ಇಂತಹ ಯಶಸ್ವಿ ಕಾರ್ಯಾಚರಣೆಯಲ್ಲಿ ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪಾತ್ರ ಮೆಚ್ಚುವಂತಾಗಿದೆ ಎಂದು ಹೇಳಿದರು.
ಈ ವೇಳೆ ಪುರಸಭೆ ಸದಸ್ಯೆ ಅಶ್ವಿನಿ ಅಂಕಲಕೋಟಿ, ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ ಮಹಾಂತಶೆಟ್ಟರ, ಗಂಗಾಧರ ಮಣಸಿನಕಾಯಿ, ನಿಂಗಪ್ಪ ಬನ್ನಿ, ಮಹಾದೇವಪ್ಪ ಅಣ್ಣಿಗೇರಿ, ಶಕ್ತಿ ಕತ್ತಿ, ಅನಿಲ ಮುಳಗುಂದ ಹಾಗೂ ಮಾಜಿ ಸೈನಿಕರ ಸಂಘದ ಎಸ್.ವಿ.ಹಿರೇಮಠ, ಚನಬಸಪ್ಪ ಹುಡೇದ, ಮಾರುತಿ ಬಟ್ಟೂರ, ವಿ.ಎಸ್. ಹಿರೇಮಠ, ನಂದೆಣ್ಣವರ, ಕರೆಣ್ಣವರ ಹಾಗೂ ವಿದ್ಯಾರ್ಥಿ ಸಂಘಟನೆಯ ಅನೇಕರು ಭಾಗವಹಿಸಿದ್ದರು.ಪಟ್ಟಣದ ಸೋಮೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ತಿರಂಗಾ ಯಾತ್ರೆಗೆ ಮಾಜಿ ಶಾಸಕ ಗಂಗಣ್ಣ ಮಹಾಂತಶೆಟ್ಟರ ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚಾರ ಮಾಡಿದ ತಿರಂಗಾ ಯಾತ್ರೆಯು ಮಹಾಕವಿ ಪಂಪ ವೃತ್ತದಲ್ಲಿ ಬಂದು ಕೊನೆಗೊಂಡಿತು.