ಅಂಕೋಲಾ: ಬೆಳೆಗಾರರ ಸಮಿತಿ ಉತ್ತರ ಕನ್ನಡ ಸಹಯೋಗದಲ್ಲಿ ಮೂರನೇ ವರ್ಷದ ಮಾವು ಮೇಳವು ಮೇ.24 ಮತ್ತು ಮೇ25 ರಂದು ಎರಡು ದಿನಗಳ ಕಾಲ ಪಟ್ಟಣದ ಜೈಹಿಂದ್ ಹೈಸ್ಕೂಲ್ ಆವರಣದಲ್ಲಿ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗಗಳ ಮಾವು ಬೆಳೆಗಾರರು ಮಾವು ಮೇಳದಲ್ಲಿ ಬಾಗವಹಿಸಿ ವ್ಯಾಪಾರ ವಹಿವಾಟು ನಡೆಸಲು ಮುಕ್ತ ಅವಕಾಶ ಇದೆ ಎಂದು ಬೆಳೆಗಾರರ ಸಮಿತಿಯ ಅಧ್ಯಕ್ಷ, ಮಾವು ಮೇಳದ ಸಂಘಟಕ ನಾಗರಾಜ ನಾಯಕ ತಿಳಿಸಿದರು.
ಅವರು ಮಾವು ಮೇಳದ ಪೂರ್ವಭಾವಿ ಸಭೆ ನಡೆಸಿ ಮಾತನಾಡಿ, ಮೇ.24 ರಂದು ಬೆಳಗ್ಗೆ ಮಾವು ಮೇಳವನ್ನು ಖ್ಯಾತ ಚಲನಚಿತ್ರ ನಿರ್ದೇಶಕ ರಾಜೇಂದ್ರಸಿಂಗ್ ಬಾಬು ಉದ್ಘಾಟಿಸಲಿದ್ದು, ಕಾರವಾರ ಅಂಕೋಲಾ ಶಾಸಕ ಸತೀಶ ಸೈಲ್, ಪೊಲೀಸ್ ವರಿಷ್ಠ ಎಂ.ನಾರಾಯಣ ಪಾಲ್ಗೊಳ್ಳಲಿದ್ದಾರೆ.ಅಂದು ಬೆಳಗ್ಗೆ 10 ಗಂಟೆಗೆ ಚಾಲ್ತಿ ಮಾವಿನ ಮರಗಳ ಕುರಿತು ಪರಿಸರ ಬರಹಗಾರ ಶಿವಾನಂದ ಕಳವೆ ಅವರಿಂದ ಉಪನ್ಯಾಸ ನಡೆಯಲಿದೆ, ಸಂಜೆ ಪ್ರಾಚಾರ್ಯ ಫಾಲ್ಗುಣ ಗೌಡ ನೇತೃತ್ವದಲ್ಲಿ ಮಾವು ಗೀತ ಗಾಯನ ಸ್ವರಚಿತ ಕವನ ವಾಚನ ಮತ್ತು ಗಾಯನ ನಡೆಯಲಿದೆ.
ಮೇ.25 ರಂದು ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರುಗಳಾದ ದಿನಕರ ಶೆಟ್ಟಿ, ಭೀಮಣ್ಣ ನಾಯ್ಕ, ಶಿವರಾಮ ಹೆಬ್ಬಾರ್ ಮತ್ತಿತರ ಗಣ್ಯರ ಉಪಸ್ಥಿತಿ ಇರಲಿದೆ ಎಂದು ತಿಳಿಸಿದರು.ಮಾವು ಬೆಳೆಗಾರರಿಗೆ ಉತ್ತೇಜನ ನೀಡುವ ಜತೆಗೆ ಜಿಲ್ಲೆಯ ವೈವಿಧ್ಯಮಯ ಮಾವಿನ ಹಣ್ಣುಗಳನ್ನು ಮಾವು ಪ್ರಿಯರಿಗೆ ಪರಿಚಯಿಸುವ ಉದ್ದೇಶದಿಂದ ಈ ಮಾವು ಮೇಳ ನಡೆಸಲಾಗುತ್ತಿದೆ ಎಂದರು.
ಅಂಕೋಲಾ ತಾಲೂಕಿನಲ್ಲಿ ಬೆಳೆಯುವ ಕರಿ ಇಶಾಡ ಮಾವಿನ ಹಣ್ಣು ದೇಶದ ವಿವಿಧ ಭಾಗಗಳಲ್ಲಿ ಪ್ರಸಿದ್ಧಿ ಪಡೆದಿದೆ, ಕರಿ ಇಶಾಡ ಮಾವಿನ ಹಣ್ಣಿಗೆ ಜಿ. ಟ್ಯಾಗ್ ಪಡೆದಿದ್ದು ವಿಶೇಷವಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಬೆಳೆಗಾರರ ಸಮಿತಿ ಗೌರವಾಧ್ಯಕ್ಷ ದೇವರಾಯ ನಾಯಕ, ಕಾರ್ಯದರ್ಶಿ ರಾಮಚಂದ್ರ ಹೆಗಡೆ, ಜಗದೀಶ ನಾಯಕ ಹೋಸ್ಕೇರಿ, ಎನ್.ಟಿ. ನಾಯಕ, ಮಾದೇವ ಗೌಡ, ಮಂಕಾಳು ಗೌಡ, ಶಂಕರ ಗೌಡ, ಬಿಂದೇಶ ನಾಯಕ, ಹೊನ್ನಪ್ಪ ನಾಯಕ ಉಪಸ್ಥಿತರಿದ್ದರು.