ಕನ್ನಡಪ್ರಭ ವಾರ್ತೆ ಬೆಳಗಾವಿ
ರಾಜ್ಯ ಇಂದು ಆರ್ಥಿಕ ದಿವಾಳಿಯಾಗಿದೆ. ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯದ ಕಗ್ಗೊಲೆಯಾಗುತ್ತಿದ್ದು, ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಇದು ಜನಾದೇಶಕ್ಕೆ ಮಾಡಿದ ದ್ರೋಹ ಎಂದು ಮಾಜಿ ಶಾಸಕ ಸಂಜಯ್ ಪಾಟೀಲ ದೂರಿದರು.ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಬಿಂಬಿಸುವ ಪೋಸ್ಟರ್ ಅನ್ನು ಸೋಮವಾರ ಬಿಡುಗೊಳಿಸಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ರಾಜ್ಯವನ್ನು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿ ಪರಿವರ್ತಿಸಿದ್ದಾರೆ. ಕರ್ನಾಟಕದಲ್ಲಿ ಲೂಟಿ ಮಾಡಿದ ಕೋಟ್ಯಂತರ ಹಣವನ್ನು ಪಕ್ಷದ ಹೈಕಮಾಂಡ್‌ಗೆ ಮತ್ತು ಇತರೆ ರಾಜ್ಯಗಳ ಚುನಾವಣೆಗಳಿಗೆ ಅಕ್ರಮವಾಗಿ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಸಿಎಂ ಕುಟುಂಬದ ಮೇಲೆ ಮುಡಾ ನಿವೇಶನ ಹಗರಣ, ವಾಲ್ಮೀಕಿ ನಿಗಮದ ₹187 ಕೋಟಿ ಲೂಟಿ, ಸ್ಮಾರ್ಟ್ ಮೀಟರ್ ಹೆಸರಿನಲ್ಲಿ ₹15,568 ಕೋಟಿ ಹಗರಣದ ಶಂಕೆ ಇದ್ದು, ಇದರಲ್ಲಿ ಸಚಿವ ಜಾರ್ಜ್ ಪಾತ್ರವಿದೆ. ಸಚಿವ ಪ್ರಿಯಾಂಕ್ ಖರ್ಗೆ ಸಹೋದರರ ಟ್ರಸ್ಟ್‌ಗೆ ರಕ್ಷಣಾ ಏರೋಸ್ಪೇಸ್ ಪಾರ್ಕ್‌ನಲ್ಲಿ ಭೂಮಿ ಅಕ್ರಮ ಮಂಜೂರು, ಕಾರ್ಮಿಕ ಮಕ್ಕಳ ಪೌಷ್ಟಿಕಾಂಶ ಕಿಟ್‌ಗಳ ಖರೀದಿಯಲ್ಲಿ ₹75 ಕೋಟಿ ಹಗರಣವಾಗಿದೆ ಎಂದು ಆರೋಪಿಸಿದರು.ಗುತ್ತಿಗೆದಾರರ ಬಿಲ್ ಪಾಸ್ ಆಗಲು ಲಂಚ ನೀಡಬೇಕು. ಇದರಿಂದಾಗಿ ಕಾಮಗಾರಿ ಮಾಡಲು ಸಾಧ್ಯವಾಗುತ್ತಿಲ್ಲ. ಇದು ಕೇವಲ ಆರೋಪವಲ್ಲ, ಕಾಂಗ್ರೆಸ್ ಸರ್ಕಾರದ ವ್ಯವಸ್ಥಿತ ಲೂಟಿ ಎಂದರು. ದಲಿತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ನೆರವಾಗುತ್ತಿದ್ದ ವಿದೇಶಿ ಶಿಷ್ಯವೇತನ ಯೋಜನೆಯನ್ನು ಸಹ ನಿಲ್ಲಿಸಿದ್ದಾರೆ ಎಂದರು.ಕಾಂಗ್ರೆಸ್‌ದ್ದು ಕೇವಲ ಮುಸ್ಲಿಂ ಓಲೈಕೆಯ ಹಲಾಲ್ ಬಜೆಟ್. ಹಿಂದೂಗಳ ತೆರಿಗೆ ಹಣವನ್ನು ಕೇವಲ ಓಲೈಕೆಗಾಗಿ ವಕ್ಫ್, ಉರ್ದು ಶಾಲೆ, ಇಮಾಮ್‌ಗಳಿಗೆ ಕೋಟಿ ಕೋಟಿ ಅನುದಾನ ನೀಡುತ್ತಿದೆ. ಮುಸ್ಲಿಮರಿಗೆ ಶೇ.4 ರಷ್ಟು ಮೀಸಲಾತಿ ಜಾರಿ ಮಾಡಿ ತಾರತಮ್ಯ ಎಸಗಿದ್ದಾರೆ ಎಂದರು.ಪಹಲ್ಗಾಮ್ ದಾಳಿಯಂತಹ ರಾಷ್ಟ್ರೀಯ ಭದ್ರತೆಯ ವಿಷಯದಲ್ಲಿ ಸಚಿವರು ಅಸಂವೇದನಾಶೀಲ ಹೇಳಿಕೆ ನೀಡಿದ್ದಾರೆ. ಶಾಸಕರು ಸೈನಿಕರಿಗೆ ಅಪಮಾನ ಮಾಡುವ ಮೂಲಕ ದೇಶದ್ರೋಹದ ಪರಮಾವಧಿ ತಲುಪಿದ್ದಾರೆ ಎಂದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಕರ್ನಾಟಕವು ಅರಾಜಕತೆಯ ಕೂಪವಾಗಿ ಮಾರ್ಪಟ್ಟಿದೆ. ಅಭದ್ರತೆಯಲ್ಲಿಯೇ ಜನಸಾಮಾನ್ಯರು ನಿತ್ಯ ಬದುಕುವಂತಾಗಿದೆ ಎಂದು ಆರೋಪಿಸಿದರು.ಈ ವೇಳೆ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮಹಾನಗರ ಜಿಲ್ಲಾಧ್ಯಕ್ಷ ಗೀತಾ ಸುತಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಮಾದಮ್ಮನವರ, ಈರಯ್ಯ ಖೋತ್, ರಾಜಶೇಖರ್ ಡೋಣಿ, ಜಿಲ್ಲಾ ಕೋಶಾಧ್ಯಕ್ಷ ಸಂತೋಷ ದೇಶನೂರ, ಬಾಳೇಶ ಚವ್ವನ್ನವರ, ಮನೋಜ್ ಪಾಟೀಲ ಉಪಸ್ಥಿತರಿದ್ದರು.