ಸಿಂಸೆ ವಿಶ್ವ ಕರ್ಮ ಸಮುದಾಯ ಭವನದಲ್ಲಿ ಅಂಗನವಾಡಿ ಕಾರ್ಯಕರ್ತೆಯರ, ಸಹಾಯಕಿಯರ ಸಮಾವೇಶ
ಸಮಾಜದ ಮಕ್ಕಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುವ ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ ಸಂಬಳ ನಿಗದಿ ಮಾಡಿ ಬಜೆಟ್ ನಲ್ಲಿ ಘೋಷಣೆ ಮಾಡಬೇಕು ಎಂದು ಎಐಟಿಯುಸಿ ರಾಜ್ಯ ಅಧ್ಯಕ್ಷ ಅಮ್ಜದ್ ಸರ್ಕಾರವನ್ನು ಆಗ್ರಹಿಸಿದರು.
ಶನಿವಾರ ವಿಶ್ವ ಕರ್ಮ ಸಮುದಾಯ ಭವನದಲ್ಲಿ ಎಐಟಿಯುಸಿ ನೇತೃತ್ವದಲ್ಲಿ ನಡೆದ ತಾಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಮಾವೇಶ ಉದ್ಘಾಟಿಸಿ ಮಾತನಾಡಿ ಅಂಗನವಾಡಿ ಕಾರ್ಯಕರ್ತೆಯರನ್ನು ಚುನಾವಣೆಯ ಬಿ.ಎಲ್.ಓ ಕೆಲಸಕ್ಕೆ, ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ, ವಿವಿಧ ಸರ್ವೆ ಕಾರ್ಯಗಳಿಗೆ ಬಳಸಿಕೊಳ್ಳ ಲಾಗುತ್ತಿದೆ. ರಾಜ್ಯದ 20 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರನ್ನು ಕಾಯಂ ಮಾಡಿಲ್ಲ. ಅವರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ ಮಾ.2 ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಚಳುವಳಿ ಹಮ್ಮಿಕೊಂಡಿದ್ದೇವೆ ಎಂದರು.ಮುಖ್ಯ ಅತಿಥಿಯಾಗಿದ್ದ ಸಮಾಜ ಸೇವಕಿ ಜುಬೇದ ಮಾತನಾಡಿ, ಎಐಟಿಯುಸಿ ಹೆಮ್ಮೆಯ ಸಂಘಟನೆ. ಅಂಗನವಾಡಿ ಕಾರ್ಯಕರ್ತೆಯರಿಗೆ ಗೌರವ ಧನಕ್ಕಿಂತ ಸಂಬಳ ನೀಡಬೇಕು. ನಾನು ಪಪಂ ಅಧ್ಯಕ್ಷೆಯಾಗಿದ್ದಾಗ 5 ಅಂಗನವಾಡಿಗಳಿಗೆ ಮೂಲ ಸೌಕರ್ಯ ಒದಗಿಸಿದ್ದೆ. ಜಿಪಂ, ತಾಪಂ ಹಾಗೂ ಗ್ರಾಪಂನಿಂದ ಅಂಗನವಾಡಿಗಳಿಗೆ ಸಹಾಯ ನೀಡಬೇಕು. ಅಂಗನ ವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಅನಾಹುತಗಳಾದರೆ ಸರ್ಕಾರ ಪರಿಹಾರ ನೀಡಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ನಿಧನ ಹೊಂದಿದ ರಾಜ್ಯ ಎಐಟಿಯುಸಿ ಅಧ್ಯಕ್ಷ ಅನಂತ ಸುಬ್ಬರಾವ್, ತಾಲೂಕು ಅಧ್ಯಕ್ಷೆ ಸಂದ್ಯಾರಾಣಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಸಭೆಯಲ್ಲಿ ಪಪಂ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಪ್ರಶಾಂತ ಶೆಟ್ಟಿ, ಎಐಟಿಯುಸಿಯ ಜಿಲ್ಲಾ ಅಧ್ಯಕ್ಷೆ ಕಾಮ್ರೆಡ್ ಗ್ರೆಟಾ ಪರ್ನಾಂಡಿಸ್, ಎನ್.ಆರ್.ಪುರ ತಾಲೂಕು ಅಧ್ಯಕ್ಷೆ ಅನಿತಾ ಫೆರರಾ, ಜಿಲ್ಲಾ ಪ್ಲಾಂಟೇಷನ್ ಕಮಿಟಿ ಅಧ್ಯಕ್ಷ ರಮೇಶ್, ಮೂಡಿಗೆರೆ ತಾಲೂಕು ಕಾರ್ಯದರ್ಶಿ ದೀಪಿಕ, ನ.ರಾ.ಪುರ ಫೆಡರೇಷನ್ ಉಪಾಧ್ಯಕ್ಷೆ ರುಕ್ಮುಣಿ,ಕಾರ್ಯದರ್ಶಿ ರತ್ನಮ್ಮ, ಖಜಾಂಚಿ ಶಿವರತ್ನ, ಮಾಜಿ ಅಧ್ಯಕ್ಷೆ ಗಾಯಿತ್ರಿ, ತಾಲೂಕು ಸಂಘಟನೆ ಸದಸ್ಯರಾದ ಕವಿತ, ಪ್ರಭಾವತಿ, ಗಾನವಿ ಸ್ವಾಗತಿಸಿದರು. ರಮಾ, ನಯನ ಇದ್ದರು.