ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ದೊಡ್ಡಬಳ್ಳಾಪುರ ತಾಲೂಕಿನ ಮೆಳೇಕೋಟೆ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಶನಿವಾರ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ "ಸಿರಿಧಾನ್ಯ ಹಬ್ಬ ಮತ್ತು ಕಿಸಾನ್ ಮೇಳ-2026 " ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಂದಿನ ಪೀಳಿಗೆಗೆ ಗುಣಮಟ್ಟದ ಆಹಾರ ಒದಗಿಸುವುದು ನಮ್ಮೆಲ್ಲರ ಜವಾಬ್ದಾರಿ ಆಗಿರುತ್ತದೆ. ಹಾಗಾಗಿ ಗುಣಮಟ್ಟದ ಆಹಾರ ಉತ್ಪನ್ನಗಳನ್ನು ಬೆಳೆಯಲು ರೈತರು ಸಾವಯವ ಕೃಷಿ ಪದ್ಧತಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡಿ, ಕೊಟ್ಟಿಗೆ ಗೊಬ್ಬರದ ಸಾವಯವ ಪದ್ಧತಿ ಬಳಸಿ ಆಹಾರ ಉತ್ಪನ್ನಗಳನ್ನು ಬೆಳೆಯಬೇಕು. ರಾಸಾಯನಿಕ ಗೊಬ್ಬರ ಬಳಸಿದರೆ ಆಹಾರ ಉತ್ಪನ್ನಗಳಲ್ಲಿ ತಕ್ಷಣಕ್ಕೆ ರುಚಿ ಕೊಟ್ಟು, ಪೌಷ್ಟಿಕತೆ ಕಡಿಮೆ ಜತೆಗೆ ಆರೋಗ್ಯ ಕ್ಷೀಣಿಸಲು ನಾವೇ ದಾರಿ ಮಾಡಿಕೊಟ್ಟಂತೆ ಎಂದರು.ಸರ್ಕಾರವು ರೈತರ ಉತ್ಪನ್ನಗಳಿಗೆ ಬೆಲೆ ನೀಡಿ, ಉತ್ತಮ ಮಾರುಕಟ್ಟೆ ಕಲ್ಪಿಸುವ ಕೆಲಸ ಮಾಡಬೇಕು. ನಮ್ಮ ರೈತರು ಗುಣಮಟ್ಟದ ಬೆಳೆಗಳನ್ನು ಬೆಳೆಯುತ್ತಿದ್ದು, ವಿದೇಶಗಳಿಗೆ ಆಹಾರ ಪದಾರ್ಥಗಳು ಹಾಗೂ ಸಿರಿಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿ ರಪ್ತು ಆಗುತ್ತಿದೆ ಎಂದರು.
ಗಮನ ಸೆಳೆದ ರಂಗೋಲಿ:
ಸಿರಿಧಾನ್ಯ ಹಬ್ಬ ಹಾಗೂ ಕಿಸಾನ್ ಮೇಳದಲ್ಲಿ ಸಿರಿಧಾನ್ಯಗಳಿಂದ ಅಲಂಕರಿಸಲ್ಪಟ್ಟ ರಂಗೋಲಿಯು ಎಲ್ಲರ ಗಮನ ಸೆಳೆಯಿತು.ಜಿಲ್ಲೆಯ ವಿವಿಧ ಭಾಗದ 45 ಜನ ಪಾಕ ಸ್ಪರ್ಧೆಯಲ್ಲಿ ಭಾಗಿ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನಾನಾ ಭಾಗಗಳಿಂದ ಜನ ಸಿರಿಧಾನ್ಯ ಹಾಗೂ ಮರೆತು ಹೋದ ಖಾದ್ಯಗಳ ಸ್ಪರ್ಧೆಯಲ್ಲಿ 45 ಜನ ಮಹಿಳೆಯರು ಭಾಗವಹಿಸಿ, ಪಾಕ ಸ್ಪರ್ಧೆಯಲ್ಲಿ ತಮ್ಮ ಕೈಚಳಕದಿಂದ ತಯಾರಿಸಿದ ರಾಗಿ ಉಪ್ಪಿಟ್ಟು, ಕರದಂಟು, ನವಣೆ ಪಲಾವ್, ಸಜ್ಜೆ ಲಾಡು, ಅಗಸೆ ಮಜ್ಜಿಗೆ, ಮೆಂತ್ಯೆ ಕಡುಬು ಮತ್ತು ಸಿರಿಧಾನ್ಯಗಳ ಪಾಯಸ ಸೇರಿದಂತೆ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದರು.ಗಮನ ಸೆಳೆದ ಹಳೆಯ ಹಾಗೂ ಆಧುನಿಕ ವಸ್ತು ಪ್ರದರ್ಶನ:
ಕಿಸಾನ್ ಮೇಳದಲ್ಲಿ ಹಿಂದಿನ ಕಾಲದಲ್ಲಿ ಪೂರ್ವಿಕರು ದಿನಬಳಕೆ ಮಾಡುತ್ತಿದ್ದ ಪಾರಂಪರಿಕ ವಸ್ತುಗಳು, ಲೋಹಗಳು, ಮಶೀನ್ ಗಳನ್ನು ಸೇರಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ರೇಷ್ಮೆ ಮತ್ತು ಮೀನುಗಾರಿಕೆ ಇಲಾಖೆಗಳು ಇಲಾಖಾ ಯೋಜನೆಗಳ ಕುರಿತು ಮಾಹಿತಿಯನ್ನೊಳಗೊಂಡ ವಸ್ತು ಪ್ರದರ್ಶನ ಗಮನ ಸೆಳೆಯಿತು.ಈ ಸಂದರ್ಭದಲ್ಲಿ ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ರೈತರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಬಯಾಪ ಅಧ್ಯಕ್ಷ ವಿ. ಶಾಂತಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸಿ. ಜಗನ್ನಾಥ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್ ಆರ್., ಕೃಷಿ ಇಲಾಖೆಯ ಉಪ ನಿರ್ದೇಶಕರಾದ ಪಂಕಜ ಎಚ್., ದೊಡ್ಡಬಳ್ಳಾಪುರ ಕೆಪಿಸಿಸಿ ಸದಸ್ಯ ಎಸ್. ಮುನಿರಾಜು, ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಸಿದ್ದಪ್ಪ, ನಾಲ್ಕು ತಾಲೂಕುಗಳ ಕೃಷಿಕ ಸಮಾಜದ ಅಧ್ಯಕ್ಷರು, ಜನಪ್ರತಿನಿಧಿಗಳು, ಮುಖಂಡರು ಸೇರಿದಂತೆ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.