ಧಾರವಾಡ: ಮಕ್ಕಳ ಏಳ್ಗೆಗೆ ನಿರಂತರವಾಗಿ ಶ್ರಮಿಸುತ್ತಿರುವ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಕಾರ್ಯ ನಿಜಕ್ಕೂ ಶ್ಲಾಘನೀಯ. ನಿಮ್ಮೆಲ್ಲರ ಸಮಸ್ಯೆಗಳನ್ನು ಕಾಲಮಿತಿಯಲ್ಲಿ ಪರಿಹರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭರವಸೆ ನೀಡಿದರು.
ಸಂವಿಧಾನ ಜಾರಿಗೆ ಬಂದ ನಂತರ ಮಹಿಳಾ ಸಮಾನತೆ ಬಂದಿದೆ. ಈ ಮೊದಲು ಮಹಿಳೆಯರಿಗೆ ಆಸ್ತಿ ಹಕ್ಕು ಸೇರಿದಂತೆ ಎಲ್ಲ ಹಕ್ಕಿನಿಂದ ವಂಚಿತರಾಗಿದ್ದರು. ಆದರೆ, ನಂತರದಲ್ಲಿ ಮಹಿಳೆಯರಿಗೆ ಪ್ರತಿಯೊಂದು ಹಕ್ಕು ದೊರೆಯುವಂತೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳಾ ಪರ ಯೋಜನೆಗಳನ್ನು ಜಾರಿಗೆ ತಂದು ಅವರನ್ನು ಆರ್ಥಿಕವಾಗಿಯೂ ಸ್ವಾವಲಂಬಿಯನ್ನಾಗಿ ಮಾಡುತ್ತಿದೆ ಎಂದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಪಕ್ಷಾತೀತವಾಗಿ ಅಂಗನವಾಡಿ ಕಾರ್ಯಕರ್ತೆಯರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ನಾನೂ ಸಹ ಪ್ರಯತ್ನಿಸುತ್ತೇನೆ. ಕೋವಿಡ್ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕಾರ್ಯ ನಿರ್ವಹಿಸಿದ್ದೀರಿ. ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇವೆ ಎಂದರು.ಎಐಪಿಟಿಎಫ್ ರಾಷ್ಟ್ರೀಯ ಅಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘ ಬಲಿಷ್ಠವಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿರುವುದು ಸಂತಸದ ವಿಷಯ. ನಿಮ್ಮ ಸಂಘಟನೆಯೊಂದಿಗೆ ನಾವಿದ್ದು, ನಿಮ್ಮೆಲ್ಲ ಸಮಸ್ಯೆಗೆ ಸ್ಪಂದಿಸುತ್ತೇವೆ. ಗುತ್ತಿಗೆ ನೌಕರರಿಗೆ ನೀಡಿದ ವೈದ್ಯಕೀಯ ಸೌಲಭ್ಯವನ್ನು ನಿಮಗೂ ನೀಡಲು ಸರ್ಕಾರಕ್ಕೆ ಆಗ್ರಹಿಸಲಾಗುವುದು ಎಂದರು.
ಸಂಘದ ಜಿಲ್ಲಾಧ್ಯಕ್ಷೆ ರತ್ನಾ ಶಿರೂರು ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಸವಿತಾ ಅಂಗಡಿ, ಎಫ್.ಬಿ. ಕಣವಿ, ಎಂ. ಜಯಮ್ಮ, ಶಂಕರ ಹಲಗತ್ತಿ, ಆರ್.ಎಫ್. ಕವಳಿಕಾಯಿ, ಎಚ್.ಎಚ್. ಕುಕನೂರ, ಕಮಲಾ ಬೈಲೂರ, ಎನ್.ಎಫ್. ಸಮುದ್ರಿ, ಚಿನ್ನಕ್ಕ ಅಂಗಡಿ, ಕಸ್ತೂರಿ ಬೇಂದ್ರೆ, ಭಾರತಿ ಹಳೇಮನಿ, ನಾಗಮ್ಮ ಒಣರೊಟ್ಟಿ, ನಿರ್ಮಲಾ ಕುಲಕರ್ಣಿ, ಶಿವಲೀಲಾ ನಡೂರಮಠ, ವಿಜಯಲಕ್ಷ್ಮಿ ಹಿರೇಮಠ, ಮಂಜುಳಾ ಯಡ್ರಾವಿ, ಲತಾ ಗೋಡಕೆ ಇದ್ದರು.