ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಬೇರುಗಳು ಗಟ್ಟಿಯಾಗಿವೆ, ಪಕ್ಷವನ್ನು ಇನ್ನಷ್ಟು ಬಲಪಡಿಸಲು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚು ಹುರುಪು ತುಂಬಲು ಪಕ್ಷದ ವರಿಷ್ಠರು ಇಡೀ ರಾಜ್ಯಾದ್ಯಂತ ಡಿಜಿಟಲ್ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದಾರೆ.
ಕನ್ನಡಪ್ರಭ ವಾರ್ತೆ ಕನಕಪುರ
ರಾಜ್ಯಾದ್ಯಂತ ಜೆಡಿಎಸ್ ಪಕ್ಷವು ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದು, ಇದರ ಅಂಗವಾಗಿ ರಾಜ್ಯ ಜೆಡಿಎಸ್ ಯುವ ಮೋರ್ಚಾ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಗರಕ್ಕೆ ಆಗಮಿಸಲಿದ್ದಾರೆ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ಬಿ.ನಾಗರಾಜು ತಿಳಿಸಿದ್ದಾರೆ. ನಗರದಲ್ಲಿ ತಾಲೂಕು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಪಣ ತೊಟ್ಟಿದ್ದು, ಬೇರು ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜೂ.25 ರಂದು ಬುಧವಾರ ನಗರದ ಎಸ್.ಆರ್.ಕಲ್ಯಾಣ ಮಂಟಪದಲ್ಲಿ ನಡೆಯಲಿರುವ ಬೃಹತ್ ಕಾರ್ಯಕರ್ತರ ಸಭೆಗೆ ಪಕ್ಷದ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆಗಮಿಸಿ ಈ ಅಭಿಯಾನಕ್ಕೆ ಚಾಲನೆ ನೀಡಲಿರುವುದಾಗಿ ತಿಳಿಸಿದರು.
ರಾಜ್ಯ ಜೆಡಿಎಸ್ ಪಕ್ಷದ ಯುವಮೋರ್ಚಾ ಉಪಾಧ್ಯಕ್ಷ ಚಿನ್ನಸ್ವಾಮಿ ಮಾತನಾಡಿ, ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಬೇರುಗಳು ಗಟ್ಟಿಯಾಗಿವೆ, ಪಕ್ಷವನ್ನು ಇನ್ನಷ್ಟು ಬಲಪಡಿಸಲು ಹಾಗೂ ಪಕ್ಷದ ಕಾರ್ಯಕರ್ತರಲ್ಲಿ ಹೆಚ್ಚು ಹುರುಪು ತುಂಬಲು ಪಕ್ಷದ ವರಿಷ್ಠರು ಇಡೀ ರಾಜ್ಯಾದ್ಯಂತ ಡಿಜಿಟಲ್ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದ್ದಾರೆ, ಈ ಕಾರ್ಯಕ್ರಮಕ್ಕೆ ಹೆಚ್ಚಿನ ಶಕ್ತಿ ತುಂಬಲು ರಾಜ್ಯದ ಯುವ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನಗರಕ್ಕೆ ಆಗಮಿಸುತ್ತಿರುವುದರಿಂದ ಅಂದಿನ ಸಭೆಗೆ ಸಹಸ್ರಾರು ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಆಗಮಿಸುವಂತೆ ಮನವಿ ಮಾಡಿದರು.
ದಿಶಾ ಸಮಿತಿ ಸದಸ್ಯರಾದ ರಾಜೇಶ್, ಶೋಭಾ, ಮಹಿಳಾ ಘಟಕದ ಅಧ್ಯಕ್ಷೆ ಪವಿತ್ರಾ, ತಾಪಂ ಮಾಜಿ ಸದಸ್ಯ ಕಬ್ಬಾಳೇಗೌಡ, ಗ್ರಾಪಂ ಸದಸ್ಯ ಜಯರಾಮೇಗೌಡ ಸೇರಿ ಪಕ್ಷದ ಹಲವು ಮುಖಂಡರು ಮಾತನಾಡಿದರು.
ಜೆಡಿಎಸ್ ಪಕ್ಷದ ಮುಖಂಡರಾದ ಸಿದ್ದಮರಿಗೌಡ, ಕೊತ್ತನೂರು ನಾರಾಯಣ, ಪುಟ್ಟರಾಜು, ಮರಳವಾಡಿ ಉಮಾಶಂಕರ್, ಹಾರೋಬೆಲೆ ಶಾಂತಿ, ಸುವರ್ಣಮ್ಮ, ನಗರಸಭಾ ಸದಸ್ಯರಾದ ಸ್ಟುಡಿಯೋ ಚಂದ್ರು, ಕುರುಪೇಟೆ ಲೋಕೇಶ್, ಕುರಿಗೌಡನದೊಡ್ಡಿ ಕುಮಾರ್, ಗ್ರಾಪಂ ಸದಸ್ಯ ರಾಜಗೋಪಾಲ್, ಯುವ ಮುಖಂಡ ತಿಮ್ಮೇಗೌಡ, ಹೆಗ್ಗನೂರು ಸತೀಶ್ ಸೇರಿ ಮುಖಂಡರು, ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.