ಅಂಗನವಾಡಿ ಕಾರ್ಯಕರ್ತೆಯರಿಗೆ ಇಲಾಖೇತರ ಕೆಲಸದ ಹೊರೆ ಬೇಡ: ಅನಿತಾ ಶೇಟ್

KannadaprabhaNewsNetwork |  
Published : Aug 12, 2026, 02:45 AM IST
ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಶೇಟ್ ಮಾತನಾಡಿದರು. | Kannada Prabha

ಸಾರಾಂಶ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಕೊಂಡಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಿಂಗಳುಗಟ್ಟಲೆ ಗೌರವಧನ ಪಾವತಿಯಾಗದೆ ಇರುವುದಲ್ಲದೆ, ಇಲಾಖೆಗೆ ಸಂಬಂಧಿಸದ ವಿವಿಧ ಕೆಲಸ ಹೇರಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕಾರವಾರ

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಪ್ರಮುಖ ಕೊಂಡಿಯಾಗಿರುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ತಿಂಗಳುಗಟ್ಟಲೆ ಗೌರವಧನ ಪಾವತಿಯಾಗದೆ ಇರುವುದಲ್ಲದೆ, ಇಲಾಖೆಗೆ ಸಂಬಂಧಿಸದ ವಿವಿಧ ಕೆಲಸ ಹೇರಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಜಿಲ್ಲಾ ಸಮಿತಿ ಆರೋಪಿಸಿದೆ.

ಕಾರವಾರದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಶೇಟ್, ಅಂಗನವಾಡಿ ವ್ಯವಸ್ಥೆ ಜಾರಿಯಾಗಿ 50 ವರ್ಷ ಕಳೆದರೂ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ಅಥವಾ ಸರ್ಕಾರಿ ನೌಕರರ ಮಾನ್ಯತೆ ದೊರೆತಿಲ್ಲ. ಇದರ ನಡುವೆ ಇಲಾಖೇತರ ಕೆಲಸಗಳ ಒತ್ತಡ ಹೆಚ್ಚುತ್ತಿರುವುದು ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜೂನ್ ತಿಂಗಳು ಮಕ್ಕಳ ದಾಖಲಾತಿ ಹಾಗೂ ಶಾಲಾಪೂರ್ವ ಶಿಕ್ಷಣಕ್ಕೆ ಅತ್ಯಂತ ಮಹತ್ವದ ಅವಧಿಯಾಗಿದ್ದರೂ, ಇದೇ ಸಂದರ್ಭ ಅಂಗನವಾಡಿ ಕಾರ್ಯಕರ್ತೆಯರಿಗೆ ಬಿಎಲ್‌ಒ, ಎಸ್‌ಐಆರ್, ಜಾತಿ ಪ್ರಮಾಣಪತ್ರ ವಿತರಣೆ, ಗೃಹಲಕ್ಷ್ಮಿ ಸೇರಿದಂತೆ ವಿವಿಧ ಇಲಾಖೇತರ ಕೆಲಸಗಳನ್ನು ಕಡ್ಡಾಯವಾಗಿ ನೀಡಲಾಗುತ್ತಿದೆ. ಕೆಲಸ ನಿರಾಕರಿಸಿದರೆ ವಜಾ ಅಥವಾ ಅಮಾನತು ಮಾಡುವ ಬೆದರಿಕೆ ಹಾಕಲಾಗುತ್ತಿದೆ. ಇದರಿಂದ ಅಂಗನವಾಡಿ ಮಕ್ಕಳ ಶಿಕ್ಷಣದ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಿರುವ ಹಲವು ಮೊಬೈಲ್‌ ದುರಸ್ತಿಯಾಗಿದ್ದು, ಸಿಮ್ ಹಾಗೂ ಇಂಟರ್ನೆಟ್ ವೆಚ್ಚವನ್ನೂ ಕಾರ್ಯಕರ್ತೆಯರೇ ಭರಿಸಬೇಕಾದ ಪರಿಸ್ಥಿತಿ ಇದೆ. ಮಕ್ಕಳಿಗೆ ನೀಡುವ ಮೊಟ್ಟೆಗೆ ಸರ್ಕಾರದಿಂದ ₹6 ಮಾತ್ರ ನೀಡಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಅದರ ಬೆಲೆ ಸುಮಾರು ₹9 ಇರುವುದರಿಂದ ಉಳಿದ ಹಣವನ್ನು ಕಾರ್ಯಕರ್ತೆಯರೇ ತಮ್ಮ ಜೇಬಿನಿಂದ ಭರಿಸುತ್ತಿದ್ದಾರೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸಿಡಿಪಿಒ ಹಾಗೂ ಎಫ್‌ಡಿಸಿ ಹುದ್ದೆಗಳು ಖಾಲಿ ಇರುವುದರಿಂದ ಗೌರವಧನ ಪಾವತಿಯಲ್ಲೂ ವಿಳಂಬವಾಗಿದ್ದು, ಕೆಲವು ಕಾರ್ಯಕರ್ತೆಯರಿಗೆ 3ರಿಂದ 5 ತಿಂಗಳವರೆಗೆ ಗೌರವಧನ ಬಾಕಿಯಿದೆ ಎಂದು ಅವರು ಹೇಳಿದರು.

ಅಂಗನವಾಡಿ ಕಾರ್ಯಕರ್ತೆಯರಿಗೆ ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಗೌರವಧನ ಪಾವತಿಸಬೇಕು, ಇಲಾಖೇತರ ಕೆಲಸಗಳನ್ನು ಕೂಡಲೇ ಸ್ಥಗಿತಗೊಳಿಸಬೇಕು, ಪದವಿ ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವ ಕಾರ್ಯಕರ್ತೆಯರಿಗೆ ಸೂಪರ್‌ವೈಸರ್ ಹುದ್ದೆಯಲ್ಲಿ ಶೇ.60 ಬಡ್ತಿ ನೀಡಬೇಕು ಹಾಗೂ ಅಂಗನವಾಡಿ ನೌಕರರನ್ನು ಸಿ ಮತ್ತು ಡಿ ದರ್ಜೆಯ ನೌಕರರೆಂದು ಪರಿಗಣಿಸಬೇಕು ಎಂದು ಸಂಘ ಆಗ್ರಹಿಸಿದೆ.

ಈ ಬೇಡಿಕೆಗಳನ್ನು ಈಡೇರಿಸಲು ಸರ್ಕಾರಕ್ಕೆ ಒಂದು ತಿಂಗಳ ಕಾಲಾವಕಾಶ ನೀಡಲಾಗಿದ್ದು, ಈ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಸೇರಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಶೇಟ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲಾ ಕಾರ್ಯದರ್ಶಿ ಶೋಭಾ ನಾಯ್ಕ, ಯಮುನಾ ನಾಯ್ಕ, ಲಲಿತಾ ಶೆಟ್ಟಿ, ನೇತ್ರಾವತಿ ನಾಯ್ಕ, ರೇಖಾ ಭಟ್ಟ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಎಲ್ಲ ಮೀನುಗಾರ ಸಮುದಾಯಗಳು ಸಂಘಟಿತವಾಗಲಿ: ಗುಂಡು ಐನಾಪುರ
ನಾಟಿ ಹಬ್ಬ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ