ಮೀನುಗಾರ ಸಮುದಾಯಗಳ ವಿಶೇಷ ಸಾಮೂಹಿಕ ಜನಜಾಗೃತಿ ಸಭೆ

ಕನ್ನಡಪ್ರಭ ವಾರ್ತೆ ಕುಮಟಾ

ಹಿಂದುಳಿದ ಬೆಸ್ತ ಹಾಗೂ ಮೀನುಗಾರ ಸಮಾಜದ ಪಂಗಡಗಳಾದ ಹರಿಕಂತ್ರ, ಅಂಬಿಗ, ಕೊಂಕಣ ಖಾರ್ವಿ, ಗಾಬಿತ, ಪಾಗಿ, ಬೋಯಿ ಹಾಗೂ ಮಲೆನಾಡು ಭಾಗದಲ್ಲಿ ಕೋಳಿ, ಸುಣಗಾರ, ಗಂಗಾಮತ ಇತರೆ ಸೇರಿ ಪರಿಶಿಷ್ಟ ಪಂಗಡ(ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತು ಕಳೆದ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ನಾವೆಲ್ಲರೂ ಸಂಘಟಿತರಾಗಿ ಹೋರಾಟ ನಡೆಸುವ ಮೂಲಕ ನಮ್ಮ ನ್ಯಾಯಯುತ ಹಕ್ಕು ಪಡೆಯಬೇಕಾಗಿದೆ ಎಂದು ಕರಾವಳಿಯ ಹಿಂದುಳಿದ ಮೀನುಗಾರ ಹಾಗೂ ಗಂಗಾಪುತ್ರ ಗರ್ಜನೆ ಪಡೆಯ ರಾಜ್ಯ ಅಧ್ಯಕ್ಷ ಗುಂಡು ಐನಾಪುರ ಹೇಳಿದರು.

ಕರಾವಳಿಯ ಹಿಂದುಳಿದ ಮೀನುಗಾರ ಹಾಗೂ ಗಂಗಾಪುತ್ರ ಗರ್ಜನೆ ಪಡೆಯ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಪುರಭವನದಲ್ಲಿ ಹಮ್ಮಿಕೊಂಡಿದ್ದ ಮೀನುಗಾರ ಸಮುದಾಯಗಳ ವಿಶೇಷ ಸಾಮೂಹಿಕ ಜನಜಾಗೃತಿ ಸಭೆ ಉದ್ದೇಶಿಸಿ ಮಾತನಾಡಿದರು.

ಮೀನುಗಾರ ಸಮುದಾಯಗಳ ಏಳ್ಗೆ, ವೀನುಗಾರರ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಿಸಿ, ಉತ್ತರ ಕನ್ನಡ ಜಿಲ್ಲೆ ಸೇರಿದಂತೆ ಕರ್ನಾಟಕ ರಾಜ್ಯಾದ್ಯಂತ ೩೯ ಪರ್ಯಾಯಗಳಲ್ಲಿ ಹಂಚಿಹೋಗಿರುವ ಮೀನುಗಾರ ಸಮುದಾಯದವರು ಶಿಕ್ಷಣ ಪಡೆದು, ಸಂಘಟಿತರಾಗುವ ಮೂಲಕ ತಮ್ಮ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಹಕ್ಕು ಪಡೆಯಬೇಕು. ಮೀನುಗಾರ ಸಮುದಾಯವನ್ನು ಪರಿಶಿಷ್ಟ ಪಂಗಡ (ಎಸ್ಟಿ) ಗೆ ಸೇರಿಸಬೇಕು ಎಂಬ ಬಗ್ಗೆ ೩೦-೪೦ ವರ್ಷಗಳಿಂದ ಹೋರಾಟ ನಡೆಯುತ್ತಿದ್ದರೂ ಈ ವರೆಗೆ ಬೇಡಿಕೆ ಈಡೇರಿಲ್ಲ. ಇದಕ್ಕೆ ಕಾರಣ ನಮ್ಮಲ್ಲಿಯ ಸಂಘಟನೆ ಮತ್ತು ಹೋರಾಟದ ಕೊರತೆ. ಇನ್ನು ಮುಂದೆ ನಾವೆಲ್ಲಾ ಒಗ್ಗಟ್ಟಾಗಿ ಸಂಘಟಿತರಾಗುವ ಮೂಲಕ ನಮ್ಮ ನ್ಯಾಯಯುತ ಬೇಡಿಕೆ ಈಡೇರಿಸಿಕೊಳ್ಳಬೇಕಾಗಿದೆ ಎಂದರು.


ಸಭೆಯಲ್ಲಿ ಮೀನುಗಾರ ಸಮಾಜಗಳನ್ನು ಪರಿಶಿಷ್ಟ ಪಂಗಡ (ಎಸ್ಟಿ) ಸೇರ್ಪಡೆಗೆ ಸಂಬಂಧಿಸಿದ ಕಡತವನ್ನು ಸಮಗ್ರವಾಗಿ ಪರಿಶೀಲಿಸಲು ಮುಖ್ಯಮಂತ್ರಿಗೆ ಮನವಿ ಸಲ್ಲಿಸಿ, ಕೇಂದ್ರ ಸರ್ಕಾರಕ್ಕೆ ಸೂಕ್ತ ಶಿಫಾರಸು ಕಳುಹಿಸುವಂತೆ ರಾಜ್ಯ ಸರ್ಕಾರದ ಮೂಲಕ ಒತ್ತಾಯಿಸಲು ನಿರ್ಣಯಿಸಿ, ಅಗತ್ಯ ಕಾರ್ಯತಂತ್ರ ರೂಪಿಸಲಾಯಿತು.

ಸಭೆಯಲ್ಲಿ ಬೆಂಗಳೂರು ಜಿಲ್ಲಾ ಗಂಗಾಮತಸ್ಥ ಸಂಘದ ಅಧ್ಯಕ್ಷ ಜಿ.ಟಿ. ವೆಂಕಟೇಶ, ಹಾವೇರಿ ಅಂಬಿಗರ ಚೌಡಯ್ಯ ಗುರುಪೀಠದ ಸಂಸ್ಥಾಪನಾ ಸದಸ್ಯ ಬಿ.ಜಿ. ಸುಣಗಾರ, ಯಮುನಪ್ಪ ಮಡಿಕೇರಿ ಬಾಗಲಕೋಟೆ, ಮಂಡ್ಯ ಗಂಗಾಪುತ್ರ ಗರ್ಜನೆ ಪಡೆ ಸದಸ್ಯ ಸಂತೆಕಸಲಗೆರೆ ಬಸವರಾಜು, ಬೀರಪ್ಪ ಹರಿಕಂತ್ರ, ನೀಲಕಂಠ ಸಿ. ಬಲೆಗಾರ, ಭಟ್ಕಳ ಕೊಂಕಣ ಖಾರ್ವಿ ಸಂಘದ ಪ್ರತಿನಿಧಿ ರಮೇಶ ಖಾರ್ವಿ, ರಾಘವೇಂದ್ರ ಜಾದವ, ಗಾಬಿತ ಸಮಾಜದ ಸುಧಾಕರ ತಾರಿ, ಗಣಪತಿ ಮಾಂಗ್ರೆ, ಶ್ರೀಕಾಂತ ದುರ್ಗೇಕರ, ಗಂಗಾಧರ ಅಂಬಿಗ, ಅಜಿತ ತಾಂಡೇಲ ಹೊನ್ನಾವರ, ಮಂಜುನಾಥ ಖಾರ್ವಿ ಇತರರು ಉಪಸ್ಥಿತರಿದ್ದರು.