ಕನ್ನಡಪ್ರಭ ವಾರ್ತೆ ಹಾಸನ
ನಗರದ ರಂಗೋಲಿಹಳ್ಳದ ಬಳಿ ಇರುವ ಶ್ರೀ ನೀಲಕಂಠೇಶ್ವರ ಭವನದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ವಿಭಾಗಾವಾರು ನಾಯಕತ್ವ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರದಲ್ಲಿ ಮಾಧ್ಯಮದೊಂದಿಗೆ ಅವರು ಮಾತನಾಡಿದರು. ಅಂಗನವಾಡಿ ನೌಕರರು ೫೦ ವರ್ಷಗಳಿಂದ ಐಸಿಡಿಎಸ್ ನಡಿ ದುಡಿಯುತ್ತಿದ್ದಾರೆ. ಸಾಮಾಜಿಕ ನ್ಯಾಯದ ಹಿನ್ನೆಲೆ ಈ ಯೋಜನೆಯನ್ನು ಕಾಯಂ ಮಾಡಬೇಕು. ಕಾಯಂಗೊಳಿಸುವವರೆಗೂ ಕನಿಷ್ಠ ವೇತನ ನೀಡಬೇಕು, ಫಲಾನುಭವಿಗಳ ಘಟಕ ವೆಚ್ಚ ಹೆಚ್ಚಳ ಮಾಡಬೇಕೆಂಬ ಬೇಡಿಕೆಗಳನ್ನು ನಿರಂತರ ಕೇಳಲಾಗುತ್ತಿದೆ ಎಂದರು.
ದೇಶದ ಕಾರ್ಪೊರೇಟ್ ಬಂಡವಾಳದಾರರಿಗೆ ೧೮.೩೨ ಲಕ್ಷ ಕೋಟಿ ರು. ಸಾಲ ಮನ್ನಾ ಮಾಡುವ ಕೇಂದ್ರ ಸರ್ಕಾರಕ್ಕೆ ದೇಶದ ಭವಿಷ್ಯತ್ತನ್ನು ರೂಪಿಸಲು ದುಡಿಯುತ್ತಿರುವ ಐಸಿಡಿಎಸ್ ಯೋಜನೆ ಮತ್ತು ಇದರಲ್ಲಿ ದುಡಿಯುವ ಅಂಗನವಾಡಿ ನೌಕರರಿಗೆ ಕೊಡಲು ಹಣವಿಲ್ಲ. ಇಂತಹ ಧೋರಣೆಗಳ ವಿರುದ್ಧ ಅಂಗನವಾಡಿ ನೌಕರರು ಸಂಘ ಕಟ್ಟಿ, ಮುಷ್ಕರಗಳ ಮುಖಾಂತರ ಹೋರಾಟಗಳನ್ನು ನಡೆಸುತ್ತಿದ್ದರು. ಆದರೆ ಈಗ ದೇಶದ ೨೯ ಕಾರ್ಮಿಕ ಕಾನೂನುಗಳನ್ನು ೪ ಸಂಹಿತೆಗಳನ್ನಾಗಿ ಮಾಡುವ ಮೂಲಕ ಸಂಘ ಕಟ್ಟುವ ಹಕ್ಕು ಮತ್ತು ಮುಷ್ಕರದ ಹಕ್ಕುಗಳಿಗೆ ಹಲವು ರೀತಿಯ ನಿರ್ಭಂಧಗಳನ್ನು ತರುವ ಮೂಲಕ ಸರ್ಕಾರ ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿದೆ. ರಾಜ್ಯ ಸರ್ಕಾರ ೨೦೨೩ ಏಪ್ರಿಲ್ ೧ ರಿಂದ ೧೯೭೨ ಗ್ರಾಜ್ಯುಟಿ ಪಾವತಿ ಕಾಯ್ದೆಯನ್ನು ಅನ್ವಯ ಮಾಡಿ ಈಗಾಗಲೇ ೨೮೭ ಕಾರ್ಯಕರ್ತೆಯರಿಗೆ ಮತ್ತು ೧೨೦೪ ಸಹಾಯಕಿಯರಿಗೆ ಪಾವತಿಸುವುದನ್ನು ಸಂಘಟನೆ ಸ್ವಾಗತಿಸುತ್ತದೆ. ಈ ಕಾಯ್ದೆಯನ್ನು ೨೦೧೧ ರಿಂದ ನಿವೃತ್ತಿಯಾದ ೧೦,೩೧೧ ಕಾರ್ಯಕರ್ತೆಯರು, ೧೧,೯೮೦ ಸಹಾಯಕಿಯರಿಗೂ ಅನ್ವಯಿಸಬೇಕೆಂದೂ ಈ ಮೂಲಕ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದರು.ಪ್ರಮುಖವಾದ ಹಕ್ಕೊತ್ತಾಯಗಳು:
ಟಿಎಚ್‌ಆರ್ ಮೂಲಕ ಫಲಾನುಭವಿಗಳ ಪೋಷಣ್ ಟ್ರ್ಯಾಕರ್ ನೋಂದಾವಣೆ ಆದರೆ ಮಾತ್ರ ಪೌಷ್ಠಿಕ ಆಹಾರ ಮತ್ತು ಅಂಗನವಾಡಿ ನೌಕರರಿಗೆ ವೇತನ ಕೊಡುವುದು ಎಂಬ ಕೇಂದ್ರ ಸರ್ಕಾರದ ನಿಲುವು ೨೦೧೩ರ ಆಹಾರ ಭದ್ರತಾ ಕಾಯ್ದೆಗೆ ವಿರುದ್ಧವಾಗಿರುವುದರಿಂದ ಪೋಷಣ್ ಟ್ರ್ಯಾಕರ್ ಕಡ್ಡಾಯ ಮಾಡಬಾರದು. ರಾಜ್ಯದಲ್ಲಿ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ಪ್ರಾರಂಭಮಾಡಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಂ.ಬಿ.ಪುಷ್ಪಾ, ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಸುನಂದಾ, ಮಂಜುಳಾ ಇತರರು ಉಪಸ್ಥಿತರಿದ್ದರು.