ಅನಿರ್ಧಿಷ್ಟಾವಧಿ ಧರಣಿ : ನೋಟಿಸ್‌ಗೂ ಬಗ್ಗದ ಅಂಗನವಾಡಿ ನೌಕರರು, ಸರ್ಕಾರ ಜೊತೆ ಫೈಟ್‌

KannadaprabhaNewsNetwork | Updated : Feb 01 2025, 08:29 AM IST

ಸಾರಾಂಶ

ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಅಂಗನವಾಡಿ ಸಿಬ್ಬಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಟಿಸ್‌ ನೀಡಿದ್ದು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

 ಬೆಂಗಳೂರು : ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಂಗಳವಾರದಿಂದ ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿರುವ ಅಂಗನವಾಡಿ ಸಿಬ್ಬಂದಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೋಟಿಸ್‌ ನೀಡಿದ್ದು ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಒಂದೊಮ್ಮೆ ಧರಣಿ ಮುಂದುವರೆಸಿದರೆ ಸ್ತ್ರೀ ಶಕ್ತಿ ಸಂಘಗಳಿಂದ ಅಂಗನವಾಡಿಗಳನ್ನು ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿದ್ದರೂ ಇದಕ್ಕೆ ಸಿಬ್ಬಂದಿ ಮಣಿಯದೇ ಮುಷ್ಕರ ಮುಂದುವರೆಸಲು ನಿರ್ಧರಿಸಿದ್ದಾರೆ.

ಅಂಗನವಾಡಿ ಮುಷ್ಕರ ಕೈ ಬಿಡುವಂತೆ ಒತ್ತಡ ನಿರ್ಮಾಣ ಮಾಡಿರುವ ಸರ್ಕಾರ ಅನಧಿಕೃತವಾಗಿ ಅಂಗನವಾಡಿ ಕೇಂದ್ರಗಳನ್ನು ಮುಚ್ಚಿ ನೀವು ಮುಷ್ಕರದಲ್ಲಿ ಪಾಲ್ಗೊಂಡಿದ್ದೀರಿ. ಫೆ.1ರೊಳಗೆ ಅಂಗನವಾಡಿಗಳನ್ನು ಆರಂಭಿಸದಿದ್ದರೆ, ಸ್ತ್ರೀ ಶಕ್ತಿ ಸಂಘಗಳು, ಶಾಲಾ ಶಿಕ್ಷಕರು, ಬಿಸಿಯೂಟ ಸಿಬ್ಬಂದಿಯಿಂದ ಅಂಗನವಾಡಿಗಳನ್ನು ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ನೋಟಿಸ್‌ಗೆ ಸಂಬಂಧಿಸಿ ‘ಕನ್ನಡಪ್ರಭ’ಯೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಪ್ರೇಮಾ, ‘ಸರ್ಕಾರ ನೂರು ನೋಟಿಸ್‌ ನೀಡಿದರೂ ನಾವು ಹೋರಾಟ ಹಿಂಪಡೆಯುವುದಿಲ್ಲ. ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಅನಿರ್ಧಿಷ್ಟಾವಧಿ ಧರಣಿ ನಡೆಸುತ್ತಿದ್ದೇವೆ. ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.

ಶಾಮಿಯಾನ ತೆರವಿಗೆ ವಾಗ್ವಾದ: ಈ ನಡುವೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಅಂಗನವಾಡಿ ಸಿಬ್ಬಂದಿ ಪ್ರತಿಭಟನೆ ನಡೆಸಲು ಹಾಕಿಕೊಂಡಿದ್ದ ಶಾಮಿಯಾನವನ್ನು ಶುಕ್ರವಾರ ಪೊಲೀಸರು ತೆರವುಗೊಳಿಸಲು ಮುಂದಾಗಿದ್ದರಿಂದ ಕೆಲಕಾಲ ಸಿಬ್ಬಂದಿ ಮತ್ತು ಪೊಲೀಸರ ನಡುವೆ ವಾಗ್ವಾದ ನಡೆಯಿತು.

ಮುಂದುವರೆದ ಅನಿರ್ಧಿಷ್ಟಾವಧಿ ಧರಣಿ

ಕನಿಷ್ಟವೇತನ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಿಬ್ಬಂದಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ನಾಲ್ಕನೇ ದಿನವಾದ ಶುಕ್ರವಾರವೂ ಮುಂದುವರೆದಿದ್ದು, ಬೇಡಿಕೆಗಳು ಈಡೇರುವವರೆಗೂ ಜಾಗ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪೊಲೀಸರು ತೆರವುಗೊಳಿಸಿದ್ದ ಸ್ಟೇಜ್‌ ಬಳಿಯ ಶಾಮಿಯಾನವನ್ನು ಶುಕ್ರವಾರ ಸಂಜೆ ಪುನಃ ಅಳವಡಿಸಿಕೊಂಡು ಧರಣಿ ಮುಂದುವರೆಸಿದ್ದಾರೆ.

Share this article