ಸಂಘಟನೆಗಳು ತಮ್ಮ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ವಿಯಾಗಿ ನಡೆಯಲಿವೆ .
ಶ್ರೀರಂಗಪಟ್ಟಣ: ನಿರ್ದಿಷ್ಟ ಗುರಿ ಸಾಧಿಸಲು ಸಂಘಟನೆಗಳು ತಮ್ಮ ಮೌಲ್ಯಗಳನ್ನು ಉಳಿಸಿಕೊಂಡು ಸಮಾಜದ ಏಳಿಗೆಗೆ ದುಡಿಯಬೇಕು ಎಂದು ಮಹಾಕಾಳಿ ದೇವಾಲಯದ ಸಂಸ್ಥಾಪಕ ಶ್ರೀಗುರುದೇವ್ ಸ್ವಾಮೀಜಿ ತಿಳಿಸಿದರು. ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಶ್ರೀ ಮಹಾಕಾಳಿ ದೇವಾಲಯದ ಆವರಣದಲ್ಲಿ ತಾಲೂಕು ಒಕ್ಕಲಿಗ ಸಂಘದ ನೂತನ ವರ್ಷದ ದಿನಚರಿ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿ, ಸಂಘಟನೆಗಳು ತಮ್ಮ ತತ್ವಗಳನ್ನು ಅಳವಡಿಸಿಕೊಂಡಾಗ ಮಾತ್ರ ಯಶಸ್ವಿಯಾಗಿ ನಡೆಯಲಿವೆ ಎಂದರು. ಸಮಾಜದ ಹಿತದೃಷ್ಟಿಯಿಂದ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕೆಲಸ ಮಾಡುವ ಮೂಲಕ ಮೌಲ್ಯಗಳನ್ನು ಕಾಪಾಡಿಕೊಳ್ಳಬೇಕು. ಒಗ್ಗಟ್ಟಿನಿಂದ ದುಡಿದು ಸಂಘಟನಾತ್ಮಕ ಚತುರತೆಗೆ ಒತ್ತು ನೀಡಬೇಕು ಎಂದು ಹೇಳಿದರು. ಸಂಘದ ನೂತನ ಅಧ್ಯಕ್ಷ ಎಂ.ಶೆಟ್ಟಹಳ್ಳಿ ಇಂದ್ರಕುಮಾರ್ ಮಾತನಾಡಿ, ತಾಲೂಕಿನಾದ್ಯಂತ ಸಮಾಜದ ಮುಖಂಡರೊಂದಿಗೆ ಚರ್ಚೆ ಮಾಡಿ ಸಂಘವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಕೆಲಸ ಮಾಡುತ್ತೇನೆ ಎಂದರು. ಗ್ರಾಪಂ ಮಾಜಿ ಅಧ್ಯಕ್ಷ ನಿಜಲಿಂಗು, ಎಪಿಎಂಸಿ ಮಾಜಿ ನಿರ್ದೇಶಕ ಎಚ್.ಎಂ.ಟಿ. ದೇವರಾಜು, ಪ್ರಧಾನ ಕಾರ್ಯದರ್ಶಿ ಹರೀಶ್ ನೆಲಮನೆ, ಜೂಮ್ ಚಂದ್ರು, ಸಾಗರ್, ನೀಲನ ಕೊಪ್ಪಲು ಮಹೇಶ್, ನಿಂಗರಾಜು, ರಮೇಶ್ ಮಲ್ಲೇಗೌಡನ ಕೊಪ್ಪಲು, ಶಂಕರ್, ರಾಮು, ಚಂದ್ರೇಗೌಡ ಸೇರಿದಂತೆ ಇತರರು ಇದ್ದರು.