ಶಾಲೆಯಲ್ಲಿ ಶಿಕ್ಷಕರು ನೀಡುವ ಶಿಕ್ಷಣದ ಜೊತೆಗೆ ಮನೆಯಲ್ಲಿ ಪಾಲಕರು ಉತ್ತಮ ಸಂಸ್ಕಾರ ಕಲಿಸಬೇಕು. ಮನೆಯಲ್ಲಿ ಮಕ್ಕಳ ಮುಂದೆ ಅಸಭ್ಯ ವರ್ತನೆ, ಪದಗಳ ಬಳಕೆ ಹಾಗೂ ಅಂಚಿತವಾಗಿ ನಡೆದುಕೊಳ್ಳಬಾರದು. ನಾವು ಇಡುವ ಹೆಜ್ಜೆ ಮಕ್ಕಳ ಭವಿಷ್ಯಕ್ಕೆ ಮೆಟ್ಟಿಲಾಗಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ಬೆಳೆದಂತೆಲ್ಲ ಮಾನವೀಯ ಮೌಲ್ಯ ಕುಸಿಯುತ್ತಿದೆ. ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವಿಷಾದಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಶೈಕ್ಷಣಿಕ ಹಂತದಲ್ಲಿ ಓದಿನತ್ತ ಗಮನ ಹರಿಸದೆ ಕಾಲಹರಣ ಮಾಡಿದರೆ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.ತಾಲೂಕಿನ ಕಿರಿಸಾವೆ ಗ್ರಾಮದಲ್ಲಿ ಲೆಕ್ಕ ಶೀರ್ಷಿಕೆ 2022-23ನೇ ಸಾಲಿನ ವಿವೇಕ ಯೋಜನೆಯಡಿ 13.90 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಉತ್ತಮವಾಗಿ ರೂಪಗೊಳ್ಳುವಲ್ಲಿ ಶಿಕ್ಷಣವು ಪ್ರಮುಖ ಪಾತ್ರ ವಹಿಸಲಿದೆ ಎಂದರು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳನ್ನು ಶಿಕ್ಷಣವಂತರಾಗಿ ಬೆಳೆಸುವುದು ಪ್ರತಿಯೊಬ್ಬ ಪಾಲಕರ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಶಾಲೆಯಲ್ಲಿ ಶಿಕ್ಷಕರು ನೀಡುವ ಶಿಕ್ಷಣದ ಜೊತೆಗೆ ಮನೆಯಲ್ಲಿ ಪಾಲಕರು ಉತ್ತಮ ಸಂಸ್ಕಾರ ಕಲಿಸಬೇಕು. ಮನೆಯಲ್ಲಿ ಮಕ್ಕಳ ಮುಂದೆ ಅಸಭ್ಯ ವರ್ತನೆ, ಪದಗಳ ಬಳಕೆ ಹಾಗೂ ಅಂಚಿತವಾಗಿ ನಡೆದುಕೊಳ್ಳಬಾರದು. ನಾವು ಇಡುವ ಹೆಜ್ಜೆ ಮಕ್ಕಳ ಭವಿಷ್ಯಕ್ಕೆ ಮೆಟ್ಟಿಲಾಗಬೇಕು ಎಂದು ಪಾಲಕರಿಗೆ ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ವ್ಯವಸ್ಥೆ ಬೆಳೆದಂತೆಲ್ಲ ಮಾನವೀಯ ಮೌಲ್ಯ ಕುಸಿಯುತ್ತಿದೆ. ಅನಾಥಾಶ್ರಮ ಹಾಗೂ ವೃದ್ಧಾಶ್ರಮಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಎಂದು ವಿಷಾದಿಸಿದರು.ಕಳೆದ ವರ್ಷ ಇದೇ ಶಾಲೆಯ ಎರಡು ಕೊಠಡಿಗಳನ್ನು ದುರಸ್ತಿ ಮಾಡಿಸಲಾಗಿದೆ. ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ 6 ಡೆಸ್ಕ್ ಗಳ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಪಾಲಕರ ಹಾಗೂ ವಿದ್ಯಾರ್ಥಿಗಳ ಬೇಡಿಕೆಯಂತೆ ಸ್ಮಾರ್ಟ್ ಕ್ಲಾಸ್ ತೆರೆಯಲು ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಣಗೌಡ, ಚಂದ್ರಮ್ಮ, ಮಾಜಿ ಸದಸ್ಯ ದೇವರಾಜೇಗೌಡ, ಬಿಆರ್ ಸಿ ಅನಿಲ್, ಶಿಕ್ಷಣ ಸಂಯೋಜಕರಾದ ಶ್ರೀನಿವಾಸ್, ಕರಿಯಪ್ಪಗೌಡ, ಸಮೂಹ ಸಂಪನ್ಮೂಲ ವ್ಯಕ್ತಿ ಧರ್ಮಪಾಲ್, ಎಸ್ಡಿಎಂಸಿ ಅಧ್ಯಕ್ಷೆ ಶಾಂತ, ಸದಸ್ಯೆ ನೇತ್ರ, ಮುಖ್ಯಶಿಕ್ಷಕಿ ಎಚ್.ಈ.ಮಂಜುಳಾ, ಸಹ ಶಿಕ್ಷಕರಾದ ಎ.ಎಸ್.ಕವಿತಾ, ಎ.ಸುಚಿತ್ರ, ಪ್ರಮುಖರಾದ ರಾಕೇಶ್, ರೂಪೇಶ್, ವೇದಮೂರ್ತಿ, ಲಿಂಗರಾಜು, ಪಾಲಕರು ಹಾಗೂ ಇತರರು ಇದ್ದರು.